[1] ದೇವರೇ, ಮೌನವಾಗಿರಬೇಡಿರಿ. ನಮ್ಮ ಕೂಗಿಗೆ ನಿಮ್ಮ ಪ್ರತಿಕ್ರಿಯೆ ನೀಡಿರಿ. ದೇವರೇ, ಸುಮ್ಮನಿರಬೇಡಿರಿ.
[2] ಏಕೆಂದರೆ ಇಗೋ, ನಿಮ್ಮ ಶತ್ರುಗಳು ಘೋಷಿಸುತ್ತಾರೆ. ನಿಮ್ಮ ವೈರಿಗಳು ತಲೆ ಎತ್ತುತ್ತಾರೆ.
[3] ನಿಮ್ಮ ಜನರಿಗೆ ವಿರೋಧವಾಗಿ ಉಪಾಯದ ಯುಕ್ತಿ ಕಲ್ಪಿಸುತ್ತಾರೆ. ನೀವು ಅಡಗಿಸಿಟ್ಟವರಿಗೆ ವಿರೋಧವಾಗಿ ಆಲೋಚಿಸಿಕೊಳ್ಳುತ್ತಾರೆ.
[4] ಅವರು, “ಬನ್ನಿರಿ, ರಾಷ್ಟ್ರವಾಗಿರದ ಹಾಗೆ ನಾವು ಅವರನ್ನು ನಿರ್ಮೂಲ ಮಾಡೋಣ; ಇಸ್ರಾಯೇಲರ ಹೆಸರು ಇನ್ನು ಜ್ಞಾಪಕಕ್ಕೆ ಬಾರದಿರಲಿ,” ಎನ್ನುತ್ತಾರೆ.
[5] ಅವರು ಏಕ ಮನಸ್ಕರಾಗಿ ಆಲೋಚನೆ ಮಾಡಿಕೊಂಡಿದ್ದಾರೆ. ನಿಮಗೆ ವಿರೋಧವಾಗಿ ಒಡಂಬಟ್ಟಿದ್ದಾರೆ.
[6] ಎದೋಮ್ಯರ ಮತ್ತು ಇಷ್ಮಾಯೇಲ್ಯರ ಪಾಳೆಯದವರು ಮೋವಾಬ್ಯರು, ಹಗ್ರೀಯರು,
[7] ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, ಟೈರಿನವರು, ಫಿಲಿಷ್ಟಿಯರು,
[8] ಅಸ್ಸೀರಿಯರು ಎಲ್ಲರೂ ಅವರಲ್ಲಿ ಕೂಡಿಕೊಂಡಿರುವರು; ಅವರು ಲೋಟನ ಸಂತತಿಯವರಿಗೆ ಸಹಾಯಮಾಡಲು ಸಿದ್ಧರಾಗಿದ್ದಾರೆ.
[9] ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡಿರಿ.
[10] ಅವರು ಎಂದೋರಿನಲ್ಲಿ ನಾಶವಾಗಿ ಭೂಮಿಗೆ ಗೊಬ್ಬರವಾದರು.
[11] ಅವರನ್ನೂ, ಅವರ ಅಧಿಪತಿಗಳನ್ನೂ, ಓರೇಬ್ ಮತ್ತು ಜೇಬನ ಹಾಗೆಯೂ ಅವರ ಪ್ರಮುಖರೆಲ್ಲರನ್ನು ಜೆಬಹ ಮತ್ತು ಚಲ್ಮುನ್ನರ ಹಾಗೆಯೂ ಮಾಡಿರಿ.
[12] ಅವರು, “ನಾವು ದೇವರ ಹುಲ್ಲುಗಾವಲು ಪ್ರದೇಶಗಳನ್ನು ಸ್ವಾಧೀನ ಮಾಡಿಕೊಳ್ಳೋಣ,” ಅನ್ನುತ್ತಾರೆ.
[13] ನನ್ನ ದೇವರೇ, ಅವರನ್ನು ಚಕ್ರದ ಹಾಗೆಯೂ, ಗಾಳಿಯ ಮುಂದಿರುವ ಕಸದ ಹಾಗೆಯೂ ಮಾಡು.
[14] ಅಡವಿ ಸುಡುವ ಬೆಂಕಿಯ ಹಾಗೆಯೂ, ಬೆಟ್ಟಗಳನ್ನು ದಹಿಸುವ ಜ್ವಾಲೆಯ ಹಾಗೆಯೂ
[15] ನಿಮ್ಮ ಬಿರುಗಾಳಿಯಿಂದ ಅವರನ್ನು ಹಿಂಸಿಸಿ, ನಿಮ್ಮ ಸುಳಿಗಾಳಿಯಿಂದ ಅವರನ್ನು ತಲ್ಲಣ ಪಡಿಸಿರಿ.
[16] ಯೆಹೋವ ದೇವರೇ, ನಿಮ್ಮ ನಾಮವನ್ನು ಅವರು ಹುಡುಕುವಂತೆ ಅವರ ಮುಖಗಳನ್ನು ನಾಚಿಕೆಯಿಂದ ತುಂಬಿಸಿರಿ.
[17] ಅವರು ನಾಚಿಕೆಪಟ್ಟು ಕಳವಳಗೊಳ್ಳಲಿ. ಹೌದು, ಅವರು ಲಜ್ಜೆಪಟ್ಟು ನಾಶವಾಗಲಿ.
[18] ಯೆಹೋವ ದೇವರು ಎಂಬ ಹೆಸರುಳ್ಳ ನೀವು ಮಾತ್ರವೇ ಸಮಸ್ತ ಭೂಮಿಯ ಮೇಲೆ ಮಹೋನ್ನತರಾಗಿದ್ದೀರಿ ಎಂದು ಅವರು ತಿಳಿದುಕೊಳ್ಳಲಿ.