Skip to content
Opens in a new window
Listen to this chapter • 1:59

[1] ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮ ನಿವಾಸಗಳು ಎಷ್ಟೋ ರಮ್ಯವಾಗಿವೆ!

[2] ಯೆಹೋವ ದೇವರ ಅಂಗಳಗಳಲ್ಲಿ ಸೇರಲು ನನ್ನ ಪ್ರಾಣವು ಬಯಸಿ ಕುಂದುತ್ತದೆ. ನನ್ನ ಹೃದಯವೂ, ನನ್ನ ಶರೀರವೂ ಜೀವವುಳ್ಳ ದೇವರಿಗಾಗಿ ಕೂಗಿಕೊಳ್ಳುತ್ತದೆ.

[3] ಓ ಸೇನಾಧೀಶ್ವರ ಯೆಹೋವ ದೇವರೇ, ನನ್ನ ಅರಸರಾಗಿರುವವರೇ, ನನ್ನ ದೇವರೇ, ಗುಬ್ಬಿಯು ಮನೆಯನ್ನೂ, ಬಾನಕ್ಕಿಯು ತನ್ನ ಮರಿಗಳನ್ನಿಡುವ ಗೂಡನ್ನೂ ನಿಮ್ಮ ಬಲಿಪೀಠಗಳ ಬಳಿಯಲ್ಲಿ ದೊರಕಿತಲ್ಲಾ.

[4] ನಿಮ್ಮ ಆಲಯದಲ್ಲಿ ವಾಸವಾಗಿರುವವರು ಧನ್ಯರು; ನಿಮ್ಮನ್ನು ಅವರು ಯಾವಾಗಲೂ ಸ್ತುತಿಸುವರು.

[5] ನಿಮ್ಮಲ್ಲಿ ಯಾರು ಬಲಹೊಂದಿರುವರೋ, ಯಾರು ಯಾತ್ರಿಗಳಾಗಿದ್ದಾರೋ ಅವರು ಧನ್ಯರು.

[6] ಬಾಕಾ ತಗ್ಗನ್ನು ದಾಟುವಾಗ ಅವರು ಅದನ್ನು ಬುಗ್ಗೆಯಾಗಿ ಮಾಡುತ್ತಾರೆ. ಮುಂಗಾರು ಮಳೆಯು ಕೊಳಗಳನ್ನು ತುಂಬುತ್ತದೆ.

[7] ಅವರು ಬಲದಿಂದ ಬಲಕ್ಕೆ ಸಾಗಿ, ಚೀಯೋನಿನಲ್ಲಿ ದೇವರ ಮುಂದೆ ಕಾಣಿಸಿಕೊಳ್ಳುತ್ತಾರೆ.

[8] ಸರ್ವಶಕ್ತರಾದ ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ. ಯಾಕೋಬನ ದೇವರೇ, ಕಿವಿಗೊಡಿರಿ.

[9] ನಮ್ಮ ಗುರಾಣಿಯಾಗಿರುವ ದೇವರೇ, ನೋಡಿರಿ. ನಿಮ್ಮ ಅಭಿಷಿಕ್ತನ ಮುಖವನ್ನು ದೃಷ್ಟಿಸಿ ನೋಡಿರಿ.

[10] ಏಕೆಂದರೆ ನಿಮ್ಮ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರ ದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವುದಕ್ಕಿಂತ ನನ್ನ ದೇವರ ಆಲಯದ ಬಾಗಿಲು ಕಾಯುವವನಾಗಿರುವುದೇ ಲೇಸು.

[11] ಯೆಹೋವ ದೇವರು ಸೂರ್ಯನಂತೆ ಪ್ರಕಾಶಿಸುವವವರೂ ಗುರಾಣಿಯೂ ಆಗಿದ್ದಾರೆ. ಯೆಹೋವ ದೇವರು ಕೃಪೆಯನ್ನೂ ಮಹಿಮೆಯನ್ನೂ ಕೊಡುತ್ತಾರೆ. ನಿಷ್ಕಳಂಕವಾಗಿ ನಡೆದುಕೊಳ್ಳುವವರಿಗೆ ಅವರು ಒಳ್ಳೆಯದನ್ನು ಮಾಡಲು ಹಿಂದೆಗೆಯುವುದಿಲ್ಲ.

[12] ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮಲ್ಲಿ ಭರವಸವಿಡುವವನೇ ಭಾಗ್ಯವಂತನು.

ಕೀರ್ತನೆಗಳು — Chapters