[1] “ದೇವರು ಇಲ್ಲಾ,” ಎಂದು ಮೂರ್ಖರು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ. ಅವರು ಕೆಟ್ಟು ಹೋದವರು ಅವರ ಮಾರ್ಗಗಳು ಅಸಹ್ಯಕರ. ಅವರಲ್ಲಿ ಒಳ್ಳೆಯದನ್ನು ಮಾಡುವವರು ಒಬ್ಬರೂ ಇಲ್ಲ.
[2] ದೇವರನ್ನು ಹುಡುಕುವ ಜ್ಞಾನಿಗಳು ಇದ್ದಾರೋ ಎಂದು ನೋಡುವುದಕ್ಕೆ ದೇವರು ಸ್ವರ್ಗದಿಂದ ಮನುಷ್ಯರ ಮೇಲೆ ದೃಷ್ಟಿಸಿದರು.
[3] ಒಳ್ಳೆಯದನ್ನು ಮಾಡುವವರು ಯಾರೂ ಇಲ್ಲ, ಒಬ್ಬರಾದರೂ ಇಲ್ಲ. ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಟ್ಟು ಹೋಗಿದ್ದರು.
[4] ದುಷ್ಟತ್ವವನ್ನು ನಡೆಸುವವರಿಗೆ ಏನೂ ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ರೊಟ್ಟಿಯಂತೆ ತಿಂದು ಬಿಡುತ್ತಾರೆಯೋ? ಅವರು ದೇವರನ್ನು ಸ್ಮರಿಸುವುದೇ ಇಲ್ಲ.
[5] ಭಯವಿಲ್ಲದಿರುವಲ್ಲಿ ಅವರು ಭಯಭ್ರಾಂತರಾದರು; ಏಕೆಂದರೆ ನಿಮಗೆ ವಿರೋಧವಾಗಿ ದಂಡು ಇಳಿಸುವವರನ್ನು ದೇವರು ಚದರಿಸಿಬಿಟ್ಟಿದ್ದಾರೆ. ನೀವು ಅವರನ್ನು ನಾಚಿಕೆಪಡಿಸಿದ್ದೀರಿ. ಏಕೆಂದರೆ ದೇವರು ಅವರನ್ನು ತಿರಸ್ಕರಿಸಿದ್ದಾರೆ.
[6] ಓ, ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬಂದರೆ ಎಷ್ಟೋ ಒಳ್ಳೆಯದು! ದೇವರು ತಮ್ಮ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ ಯಾಕೋಬ್ಯರು ಉಲ್ಲಾಸಗೊಳ್ಳುವರು. ಇಸ್ರಾಯೇಲರು ಸಂತೋಷಿಸುವರು.