Skip to content
Opens in a new window
Listen to this chapter • 2:23

[1] ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ; ನನ್ನ ವಿಜ್ಞಾಪನೆಗಳಿಗೆ ಕಿವಿಗೊಡಿರಿ; ನಿಮ್ಮ ನಂಬಿಗಸ್ತಿಕೆಯಲ್ಲಿಯೂ, ನಿಮ್ಮ ನೀತಿಯಲ್ಲಿಯೂ ನನಗೆ ಉತ್ತರಕೊಡಿರಿ.

[2] ನಿಮ್ಮ ಸೇವಕನನ್ನು ನ್ಯಾಯವಿಚಾರಣೆಗೆ ಗುರಿಮಾಡಬೇಡಿರಿ, ಏಕೆಂದರೆ ಜೀವಿಸುವರಲ್ಲಿ ಒಬ್ಬರೂ ನಿಮ್ಮ ಮುಂದೆ ನೀತಿವಂತರಲ್ಲ.

[3] ಏಕೆಂದರೆ ಶತ್ರುವು ನನ್ನನ್ನು ಬೆನ್ನಟ್ಟಿ, ನಾನು ನೆಲಕಚ್ಚುವಂತೆ ಮಾಡಿದ್ದಾನೆ. ಬಹುಕಾಲದ ಹಿಂದೆ ಸತ್ತವರ ಹಾಗೆ ನನ್ನನ್ನು ಕತ್ತಲೆಯಲ್ಲಿ ವಾಸಿಸುವಂತೆ ಮಾಡಿದ್ದಾನೆ.

[4] ನನ್ನ ಆತ್ಮವು ನನ್ನಲ್ಲಿ ಕುಂದಿಹೋಗಿದೆ; ನನ್ನೊಳಗೆ ನನ್ನ ಹೃದಯವು ಹಾಳಾಗಿದೆ.

[5] ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು, ನಿಮ್ಮ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿಮ್ಮ ಕೈಕೆಲಸವನ್ನು ಆಲೋಚಿಸುತ್ತೇನೆ.

[6] ನನ್ನ ಕೈಗಳನ್ನು ನಿಮ್ಮ ಕಡೆಗೆ ಚಾಚುತ್ತೇನೆ; ನನ್ನ ಪ್ರಾಣವು ದಾಹಗೊಂಡ ಭೂಮಿಯ ಹಾಗೆ ನಿಮಗಾಗಿ ದಾಹಗೊಂಡಿದೆ.

[7] ಯೆಹೋವ ದೇವರೇ, ನನಗೆ ಬೇಗನೆ ಉತ್ತರಕೊಡಿರಿ; ನನ್ನ ಪ್ರಾಣವು ಕುಂದಿಹೋಗಿದೆ; ನಿಮ್ಮ ಮುಖವನ್ನು ನನಗೆ ಮರೆಮಾಡಬೇಡ; ಇಲ್ಲವಾದರೆ ಸಮಾಧಿಯಲ್ಲಿ ಇಳಿಯುವವರಿಗೆ ಸಮಾನನಾಗಿಬಿಡುತ್ತೇನೆ.

[8] ಬೆಳಿಗ್ಗೆ ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ವಾಕ್ಯವನ್ನು ತರಲಿ; ಏಕೆಂದರೆ ನಿಮ್ಮಲ್ಲಿ ಭರವಸವಿಟ್ಟಿದ್ದೇನೆ; ನಾನು ಹೋಗಬೇಕಾದ ಮಾರ್ಗವನ್ನು ನನಗೆ ತಿಳಿಯಪಡಿಸಿರಿ, ಏಕೆಂದರೆ ನನ್ನ ಪ್ರಾಣವನ್ನು ನಿಮಗೇ ಒಪ್ಪಿಸಿದ್ದೇನೆ.

[9] ಯೆಹೋವ ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸಿರಿ; ನಾನು ನಿಮ್ಮಲ್ಲಿ ಅಡಗಿಕೊಳ್ಳುವಂತೆ ನಿಮ್ಮ ಬಳಿಗೆ ಬಂದಿದ್ದೇನೆ.

[10] ನಿಮ್ಮ ಚಿತ್ತದಂತೆ ಮಾಡುವುದಕ್ಕೆ ನನಗೆ ಬೋಧಿಸಿರಿ, ಏಕೆಂದರೆ ನೀವು ನನ್ನ ದೇವರು; ನಿಮ್ಮ ಒಳ್ಳೆಯ ಆತ್ಮವು ನನ್ನನ್ನು ಸಮಹಾದಿಯಲ್ಲಿ ನಡೆಸಲಿ.

[11] ಯೆಹೋವ ದೇವರೇ, ನಿಮ್ಮ ಹೆಸರಿನ ನಿಮಿತ್ತ ನನ್ನನ್ನು ಜೀವಿಸಮಾಡಿರಿ, ನಿಮ್ಮ ನೀತಿಗನುಸಾರ ನನ್ನ ಪ್ರಾಣವನ್ನು ಇಕ್ಕಟ್ಟಿನೊಳಗಿಂದ ಬಿಡಿಸಿರಿ.

[12] ನಿಮ್ಮ ಒಂಡಬಡಿಕೆಯ ಪ್ರೀತಿಯಿಂದ ನನ್ನ ಶತ್ರುಗಳನ್ನು ಸುಮ್ಮನಿರಿಸುವೆನು, ನನ್ನ ವೈರಿಗಳೆಲ್ಲರೂ ನಾಶವಾಗಲಿ, ನಾನು ನಿಮ್ಮ ಸೇವಕನಾಗಿದ್ದೇನೆ.

ಕೀರ್ತನೆಗಳು — Chapters