Skip to content
Opens in a new window
Listen to this chapter • 1:59

[1] ಯೆಹೋವ ದೇವರನ್ನು ಸ್ತುತಿಸಿರಿ. ಆಕಾಶ ಮಂಡಲದಿಂದ ಯೆಹೋವ ದೇವರಿಗೆ ಸ್ತುತಿ ಸಲ್ಲಲಿ! ಮಹೋನ್ನತದ ದೇವರನ್ನು ಸ್ತುತಿಸಿರಿ.

[2] ದೇವರ ದೂತರುಗಳೇ, ದೇವರನ್ನು ಸ್ತುತಿಸಿರಿ; ದೇವರ ಪರಲೋಕದ ಎಲ್ಲಾ ಸೈನ್ಯಗಳೇ, ದೇವರನ್ನು ಸ್ತುತಿಸಿರಿ.

[3] ಸೂರ್ಯ, ಚಂದ್ರರೇ, ದೇವರನ್ನು ಸ್ತುತಿಸಿರಿ; ಬೆಳಕುಳ್ಳ ಎಲ್ಲಾ ನಕ್ಷತ್ರಗಳೇ, ದೇವರನ್ನು ಸ್ತುತಿಸಿರಿ.

[4] ಉನ್ನತ ಆಕಾಶಗಳೇ, ಆಕಾಶಗಳ ಮೇಲೆ ಇರುವ ಜಲಸಮೂಹವೇ, ದೇವರನ್ನು ಸ್ತುತಿಸಿರಿ.

[5] ಯೆಹೋವ ದೇವರ ಹೆಸರನ್ನು ಅವು ಸ್ತುತಿಸಲಿ, ಏಕೆಂದರೆ ದೇವರು ಆಜ್ಞಾಪಿಸಲು, ಅವು ನಿರ್ಮಿಸಲಾದವು.

[6] ಅವುಗಳನ್ನು ಯುಗ ಯುಗಗಳಿಗೂ ಸ್ಥಾಪಿಸಿದ್ದಾರೆ; ದೇವರು ತೀರ್ಪನ್ನು ಕೊಟ್ಟಿದ್ದಾರೆ, ಅದು ಮೀರಿ ಹೋಗುವುದಿಲ್ಲ.

[7] ಭೂಮಿಯಿಂದ ಯೆಹೋವ ದೇವರನ್ನು ಸ್ತುತಿಸಿರಿ; ಎಲ್ಲಾ ಅಗಾಧಗಳೇ,

[8] ಮಿಂಚೇ, ಕಲ್ಮಳೆಯೇ, ಹಿಮವೇ, ಹಬೆಯೇ, ದೇವರ ಮಾತನ್ನು ಕೇಳುವ ಬಿರುಗಾಳಿಯೇ,

[9] ಬೆಟ್ಟಗಳೇ, ಎಲ್ಲಾ ಗುಡ್ಡಗಳೇ, ಹಣ್ಣಿನ ಮರಗಳೇ, ಎಲ್ಲಾ ದೇವದಾರುಗಳೇ,

[10] ಕಾಡುಮೃಗಗಳೇ, ಎಲ್ಲಾ ಪಶುಗಳೇ, ಹರಿದಾಡುವ ಜೀವಜಂತುಗಳೇ, ಹಾರುವ ಪಕ್ಷಿಗಳೇ,

[11] ಭೂರಾಜರೇ, ಎಲ್ಲಾ ಪ್ರಜೆಗಳೇ, ಪ್ರಧಾನರೇ, ಭೂಮಿಯ ಎಲ್ಲಾ ನ್ಯಾಯಾಧಿಪತಿಗಳೇ,

[12] ಪ್ರಾಯಸ್ಥರೇ, ಕನ್ಯೆಯರೇ, ಮಕ್ಕಳೇ, ವೃದ್ಧರೇ.

[13] ಯೆಹೋವ ದೇವರ ಹೆಸರನ್ನು ಸ್ತುತಿಸಿರಿ; ಅವರ ಹೆಸರು ಮಾತ್ರ ಶ್ರೇಷ್ಠವಾಗಿದೆ; ಅವರ ಮಹಿಮೆಯು ಭೂಮ್ಯಾಕಾಶಗಳನ್ನು ಆವರಿಸಿದೆ.

[14] ದೇವರು ತಮ್ಮ ಜನರ ಬಲವನ್ನು ಮೇಲಕ್ಕೆತ್ತಿದ್ದಾರೆ. ದೇವರ ಇಸ್ರಾಯೇಲರೆಲ್ಲರೂ, ಭಕ್ತರೆಲ್ಲರೂ, ದೇವರಿಗೆ ಸಮೀಪವಾದ ಜನರೂ ದೇವರನ್ನು ಕೊಂಡಾಡಿರಿ. ಯೆಹೋವ ದೇವರನ್ನು ಸ್ತುತಿಸಿರಿ.

ಕೀರ್ತನೆಗಳು — Chapters