Skip to content
Opens in a new window
Listen to this chapter • 2:54

[1] ನನ್ನ ಯೆಹೋವ ದೇವರೇ, ನಿಮ್ಮನ್ನೇ ಆಶ್ರಯಿಸಿದ್ದೇನೆ; ನನ್ನನ್ನು ಬೆನ್ನಟ್ಟಿದ ಎಲ್ಲರಿಂದಲೂ ನನ್ನನ್ನು ರಕ್ಷಿಸಿ ಕಾಪಾಡಿರಿ,

[2] ಇಲ್ಲದಿದ್ದರೆ, ನನ್ನನ್ನು ಸಿಂಹದಂತೆ ಅವರು ಹರಿದುಬಿಡುವರು ರಕ್ಷಿಸಲು ಯಾರೂ ಇಲ್ಲವೆಂದು ನನ್ನನ್ನು ನಾಶಮಾಡಿಬಿಡುವರು.

[3] ನನ್ನ ಯೆಹೋವ ದೇವರೇ, ನಾನು ಅನ್ಯಾಯ ಮಾಡಿದ್ದರೆ, ನನ್ನ ಕೈಗಳಲ್ಲಿ ಅಪರಾಧವಿದ್ದರೆ,

[4] ನನ್ನೊಂದಿಗೆ ಸಮಾಧಾನದಿಂದ ಇದ್ದವನಿಗೆ ನಾನು ಕೇಡುಮಾಡಿದ್ದರೆ, ಕಾರಣವಿಲ್ಲದೆ ನನ್ನ ವೈರಿಯಿಂದ ಏನನ್ನಾದರೂ ಸುಲಿದುಕೊಂಡಿದ್ದರೆ,

[5] ಆಗ ನನ್ನ ವೈರಿಯು ಬೆನ್ನಟ್ಟಿ ನನ್ನನ್ನು ಹಿಡಿದುಕೊಳ್ಳಲಿ. ನನ್ನ ಜೀವವನ್ನು ನೆಲಕ್ಕೆ ಹಾಕಿ ತುಳಿದು ಬಿಡಲಿ ಮತ್ತು ನನ್ನ ಮಾನವನ್ನು ಮಣ್ಣು ಪಾಲಾಗುವಂತೆ ಮಾಡಲಿ.

[6] ಯೆಹೋವ ದೇವರೇ, ನೀವು ಕೋಪದಿಂದ ಎದ್ದೇಳಿರಿ; ನನ್ನ ವೈರಿಗಳ ಕ್ರೋಧಕ್ಕೆ ವಿರೋಧವಾಗಿ ಎಚ್ಚರಗೊಳ್ಳಿರಿ. ನನ್ನ ದೇವರೇ, ನ್ಯಾಯಕ್ಕೆ ನಿಮ್ಮ ತೀರ್ಪನ್ನು ನೀಡಲು ಎದ್ದೇಳಿರಿ.

[7] ರಾಷ್ಟ್ರಗಳು ನಿಮ್ಮ ಸುತ್ತಲು ಬಂದು ಸೇರಲಿ, ಉನ್ನತದಿಂದ ನೀವು ಅವರ ಮೇಲೆ ಸಿಂಹಾಸನದಲ್ಲಿದ್ದು ಆಳಿರಿ.

[8] ಯೆಹೋವ ದೇವರು ಜನಗಳಿಗೆ ನ್ಯಾಯತೀರಿಸಲಿ. ಮಹೋನ್ನತರಾದ ಯೆಹೋವ ದೇವರೇ, ನನ್ನ ನೀತಿಯ ಪ್ರಕಾರವೂ, ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸಿರಿ.

[9] ದುಷ್ಟರ ಕೆಟ್ಟತನವು ಅಂತ್ಯವಾಗುವಂತೆಯೂ ನೀತಿವಂತರ ಭದ್ರತೆಯು ನಿಶ್ಚಯವಾಗುವಂತೆಯೂ ಮಾಡಿರಿ. ನೀತಿಯುಳ್ಳ ದೇವರೇ, ನೀವು ಹೃದಯವನ್ನೂ ಮನಸ್ಸನ್ನೂ ಪರಿಶೋಧಿಸುವವರಾಗಿದ್ದೀರಿ.

[10] ಮಹೋನ್ನತರಾದ ದೇವರು ನನ್ನ ಗುರಾಣಿಯಾಗಿದ್ದಾರೆ, ಅವರು ಯಥಾರ್ಥ ಹೃದಯವುಳ್ಳವರನ್ನು ರಕ್ಷಿಸುತ್ತಾರೆ.

[11] ದೇವರು ನೀತಿಯುಳ್ಳ ನ್ಯಾಯಾಧಿಪತಿಯಾಗಿದ್ದಾರೆ. ದೇವರು ದುಷ್ಟನ ಮೇಲೆ ಸದಾ ರೋಷವುಳ್ಳವರಾಗಿದ್ದಾರೆ.

[12] ಅಂಥವರು ತಿರುಗಿಕೊಳ್ಳದಿದ್ದರೆ ದೇವರು ತಮ್ಮ ಖಡ್ಗ ಮಸೆಯುವರು; ತಮ್ಮ ಬಿಲ್ಲು ಬಗ್ಗಿಸಿ ಅದನ್ನು ಸಿದ್ಧಮಾಡುವರು.

[13] ಅಂಥವರಿಗೆ ಮರಣಾಯುಧಗಳನ್ನು ಸಹ ಸಿದ್ಧಮಾಡಿದ್ದಾರೆ; ತಮ್ಮ ಅಗ್ನಿಬಾಣಗಳನ್ನು ಸಿದ್ಧಮಾಡುತ್ತಾರೆ.

[14] ಅಂಥವರು ದುಷ್ಟತನವನ್ನು ಗರ್ಭಧರಿಸಿ, ಸೇಡನ್ನು ಗರ್ಭದಲ್ಲಿಟ್ಟುಕೊಂಡು ಸುಳ್ಳನ್ನು ಹೆರುವರು.

[15] ಅಂಥವರು ಕುಣಿಯನ್ನು ಅಗೆದಿದ್ದಾರೆ. ಆದರೆ ತಾವು ಅಗೆದ ಕುಣಿಯೊಳಗೆ ತಾವೇ ಬೀಳುವರು.

[16] ಅಂಥವರ ಕೇಡು ಅವರ ಮೇಲೆಯೇ ತಿರುಗುವುದು; ಅವರ ತಲೆಯ ಮೇಲೆ ಅವರ ಬಲಾತ್ಕಾರವೇ ಇಳಿಯುವುದು.

[17] ನಾನು ಯೆಹೋವ ದೇವರನ್ನು ಕೊಂಡಾಡುವೆನು; ಏಕೆಂದರೆ, ಅವರು ನೀತಿಯುಳ್ಳವರು. ಮಹೋನ್ನತರಾದ ಯೆಹೋವ ದೇವರ ಹೆಸರನ್ನು ಕೀರ್ತನೆ ಮಾಡುವೆನು.

ಕೀರ್ತನೆಗಳು — Chapters