Skip to content
Opens in a new window
Listen to this chapter • 2:16

[1] ನಮ್ಮ ಬಲವಾಗಿರುವ ದೇವರಿಗೆ ಗಟ್ಟಿಯಾದ ಧ್ವನಿಯಿಂದ ಹಾಡಿರಿ; ಯಾಕೋಬನ ದೇವರಿಗೆ ಜಯಧ್ವನಿ ಗೈಯಿರಿ.

[2] ವಾದ್ಯ ಪ್ರಾರಂಭಿಸಿರಿ; ದಮ್ಮಡಿಯನ್ನೂ, ರಮ್ಯವಾದ ಕಿನ್ನರಿಯನ್ನೂ ವೀಣೆಯ ಸಂಗಡ ಬಾರಿಸಿರಿ.

[3] ಅಮಾವಾಸ್ಯೆಯಲ್ಲಿಯೂ ಉತ್ಸವ ದಿವಸವಾಗಿರುವ ಪೂರ್ಣಿಮೆಯಲ್ಲಿಯೂ ಕೊಂಬನ್ನು ಊದಿರಿ.

[4] ಏಕೆಂದರೆ ಇದು ಇಸ್ರಾಯೇಲಿಗೆ ಕಟ್ಟಳೆ. ಯಾಕೋಬನ ದೇವರ ನ್ಯಾಯ ಪ್ರಮಾಣವೇ.

[5] ದೇವರು ಈಜಿಪ್ಟಿಗೆ ವಿರೋಧವಾಗಿ ಹೊರಟಾಗ, ಅದನ್ನು ಯೋಸೇಫನಲ್ಲಿ ಸಾಕ್ಷಿಯಾಗಿ ನೇಮಿಸಿದನು. ನಾವು ತಿಳಿಯದ ಭಾಷೆಯನ್ನು ಕೇಳಿದಾಗ:

[6] “ಅವರ ಹೆಗಲ ಮೇಲಿಂದ ಭಾರವನ್ನು ತೆಗೆದುಹಾಕಿದೆನು, ಬುಟ್ಟಿಗಳಿಂದ ಅವರ ಕೈಗಳು ಬಿಡುಗಡೆಯಾದವು.

[7] ಇಕ್ಕಟ್ಟಿನಲ್ಲಿ ನೀವು ಕರೆಮಾಡಿದಿರಿ, ಆಗ ನಾನು ನಿಮ್ಮನ್ನು ವಿಮೋಚಿಸಿದೆನು. ಗುಡುಗಿನ ಮರೆಯಲ್ಲಿ ನಿನಗೆ ಉತ್ತರಕೊಟ್ಟೆನು. ಮೆರೀಬಾ ನೀರಿನ ಹತ್ತಿರ ನಿಮ್ಮನ್ನು ಪರೀಕ್ಷಿಸಿದೆನು.

[8] ನನ್ನ ಜನರೇ ಕೇಳಿರಿ, ಇಸ್ರಾಯೇಲೇ, ನೀನು ನನ್ನ ಮಾತನ್ನು ಕೇಳಬೇಕೆಂದು ನಿಮ್ಮನ್ನು ಎಚ್ಚರಿಸುತ್ತೇನೆ.

[9] ನಿಮ್ಮಲ್ಲಿ ಅನ್ಯದೇವರು ಇರಬಾರದು; ಪರದೇವರಿಗೆ ಅಡ್ಡ ಬೀಳಬಾರದು.

[10] ಈಜಿಪ್ಟ್ ದೇಶದಿಂದ ನಿಮ್ಮನ್ನು ಹೊರಗೆ ತಂದ ನಿಮ್ಮ ದೇವರಾದ ಯೆಹೋವ ದೇವರು ನಾನೇ; ನಿಮ್ಮ ಬಾಯಿಯನ್ನು ಅಗಲವಾಗಿ ತೆರೆ, ಆಗ ಅದನ್ನು ತುಂಬಿಸುವೆನು.

[11] “ಆದರೆ ನನ್ನ ಜನರು ನನ್ನ ಮಾತನ್ನು ಕೇಳಲಿಲ್ಲ; ಇಸ್ರಾಯೇಲು ನನಗೆ ಅಧೀನವಾಗಲಿಲ್ಲ.

[12] ಆದ್ದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಂತೆ ನಡೆದುಕೊಂಡರು.

[13] “ಹಾ, ನನ್ನ ಜನರು ನನ್ನ ಮಾತನ್ನು ಕೇಳಿದರೆ ಒಳ್ಳೆದಾಗಿತ್ತು! ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ ಮೇಲಾಗುತ್ತಿತ್ತು,

[14] ತೀವ್ರವಾಗಿ ಅವರ ಶತ್ರುಗಳನ್ನು ಧೀನಪಡಿಸುವೆನು. ಅವರ ವೈರಿಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು.

[15] ಯೆಹೋವ ದೇವರನ್ನು ದ್ವೇಷಿಸುವವರು ತಮ್ಮನ್ನು ತಾವೇ ದೇವರಿಗೆ ಒಪ್ಪಿಸಿಕೊಡುವರು. ಆದರೂ ಅವರಿಗೆ ಶಿಕ್ಷೆ ತಪ್ಪುವುದಿಲ್ಲ.

[16] ನಿಮಗಾದರೋ ಉತ್ತಮವಾದ ಗೋಧಿಯನ್ನು ಊಟಕ್ಕೆ ಕೊಟ್ಟು, ಬಂಡೆಯೊಳಗಿನ ಜೇನಿನಿಂದ ನಿಮ್ಮನ್ನು ತೃಪ್ತಿಪಡಿಸುವೆನು.”

ಕೀರ್ತನೆಗಳು — Chapters