[1] ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ, ಭಕ್ತರ ಸಭೆಯಲ್ಲಿ ದೇವರ ಸ್ತೋತ್ರವನ್ನೂ ಹಾಡಿರಿ.
[2] ಇಸ್ರಾಯೇಲು ತನ್ನನ್ನು ಉಂಟುಮಾಡಿದ ದೇವರಲ್ಲಿ ಸಂತೋಷಿಸಲಿ; ಚೀಯೋನಿನ ಜನರು ತಮ್ಮ ಅರಸರಲ್ಲಿ ಉಲ್ಲಾಸಿಸಲಿ.
[3] ದೇವರ ಹೆಸರನ್ನು ನರ್ತಿಸುತ್ತಾ ಸ್ತುತಿಸಲಿ; ದಮ್ಮಡಿಯಿಂದಲೂ ಕಿನ್ನರಿಯಿಂದಲೂ ದೇವರನ್ನು ಕೀರ್ತಿಸಲಿ.
[4] ಏಕೆಂದರೆ ಯೆಹೋವ ದೇವರು ತಮ್ಮ ಜನರಲ್ಲಿ ಹರ್ಷಿಸುತ್ತಾರೆ. ದೀನರನ್ನು ಜಯದ ಕಿರೀಟದಿಂದ ಅಲಂಕರಿಸುತ್ತಾರೆ.
[5] ಇಂಥಾ ಸನ್ಮಾನದಲ್ಲಿ ನಂಬಿಗಸ್ತರು ಸಂತೋಷಪಡಲಿ ಹಾಸಿಗೆಯಲ್ಲಿರುವಾಗಲೂ ಆನಂದಗಾನ ಹಾಡಲಿ.
[6] ಉನ್ನತ ದೇವರ ಸ್ತೋತ್ರವು ಅವರ ಬಾಯಿಯಲ್ಲಿ ಇರಲಿ. ಇಬ್ಬಾಯಿ ಖಡ್ಗ ಅವರ ಕೈಯಲ್ಲಿಯೂ ಇರಲಿ.
[7] ಜನಾಂಗಗಳಲ್ಲಿ ನ್ಯಾಯ ಪ್ರತೀಕಾರವಾಗಲಿ, ಅಪರಾಧಿಗಳಿಗೆ ಶಿಕ್ಷೆಯಾಗಲಿ.
[8] ಅಪರಾಧದ ಅರಸರನ್ನು ಸಂಕೋಲೆಗಳಿಂದಲೂ, ಪ್ರಮುಖರನ್ನು ಕಬ್ಬಿಣದ ಬೇಡಿಗಳಿಂದಲೂ ಬಂಧಿಸಲಿ.
[9] ಬರೆದಿರುವ ನ್ಯಾಯವಿಧಿಯು ಅವರಲ್ಲಿ ನೆರವೇರಲಿ, ದೇವರ ಭಕ್ತರೆಲ್ಲರಿಗೆ ಈ ಗೌರವವಿರುತ್ತದೆ. ಯೆಹೋವ ದೇವರನ್ನು ಸ್ತುತಿಸಿರಿ.