[1] ಯೆಹೋವ ದೇವರೇ, ನನ್ನ ಪೂರ್ಣಹೃದಯದಿಂದ ನಾನು ನಿಮ್ಮನ್ನು ಸ್ತುತಿಸುವೆನು; ನಿಮ್ಮ ಅದ್ಭುತ ಕಾರ್ಯಗಳನ್ನೆಲ್ಲಾ ನಾನು ವರ್ಣಿಸುವೆನು.
[2] ನಾನು ನಿಮ್ಮಲ್ಲಿ ಆನಂದಿಸಿ ಉಲ್ಲಾಸಪಡುವೆನು; ಮಹೋನ್ನತರೇ, ನಾನು ನಿಮ್ಮ ಹೆಸರನ್ನು ಕೊಂಡಾಡಿ ಹಾಡುವೆನು.
[3] ನನ್ನ ಶತ್ರುಗಳು ಹಿಂದಿರುಗಿ ಓಡುವರು; ಅವರು ನಿಮ್ಮ ಮುಂದೆ ಎಡವಿಬಿದ್ದು ನಾಶವಾಗುವರು.
[4] ನೀವು ನನ್ನ ನ್ಯಾಯವನ್ನೂ ವ್ಯಾಜ್ಯವನ್ನೂ ತೀರಿಸಲು ನೀತಿಯುಳ್ಳ ನ್ಯಾಯಾಧಿಪತಿಯಾಗಿ ಸಿಂಹಾಸನದಲ್ಲಿ ಕುಳಿತುಕೊಂಡಿದ್ದೀರಿ.
[5] ರಾಷ್ಟ್ರಗಳನ್ನು ಖಂಡಿಸಿ ದುಷ್ಟರನ್ನು ದಂಡಿಸಿದ್ದೀರಿ; ಅವರ ಹೆಸರನ್ನು ಯುಗಯುಗಾಂತರಗಳವರೆಗೂ ಅಳಿಸಿಬಿಟ್ಟಿದ್ದೀರಿ.
[6] ವೈರಿಯನ್ನು ವಿನಾಶವು ನಿರಂತರವಾಗಿ ಬೆನ್ನಟ್ಟಿದೆ, ನೀವು ಅವರ ಪಟ್ಟಣಗಳನ್ನು ಕೆಡವಿದ್ದೀರಿ; ಅವರ ಸ್ಮರಣೆಯು ಅವರೊಂದಿಗೇ ನಾಶವಾಯಿತು.
[7] ಯೆಹೋವ ದೇವರು ಸದಾ ಆಳುವವರು; ಅವರು ನ್ಯಾಯಕ್ಕಾಗಿ ತಮ್ಮ ಸಿಂಹಾಸನವನ್ನು ಸ್ಥಾಪಿಸಿದ್ದಾರೆ.
[8] ಅವರು ನೀತಿಯಿಂದ ಲೋಕಕ್ಕೆ ನ್ಯಾಯತೀರಿಸುವರು; ಪ್ರಜೆಗಳಿಗೆ ಯಥಾರ್ಥವಾದ ತೀರ್ಪು ನೀಡುವರು.
[9] ಯೆಹೋವ ದೇವರು ಕುಗ್ಗಿದವರಿಗೆ ಆಶ್ರಯವಾಗಿರುವರು, ಇಕ್ಕಟ್ಟಿನ ದಿವಸಗಳಲ್ಲಿ ಭದ್ರಕೋಟೆಯಾಗಿರುವರು.
[10] ನಿಮ್ಮ ಹೆಸರನ್ನು ತಿಳಿದವರು ನಿಮ್ಮಲ್ಲಿ ಭರವಸೆ ಇಡುವರು, ಏಕೆಂದರೆ ಯೆಹೋವ ದೇವರೇ, ನಿಮ್ಮನ್ನು ಹುಡುಕುವವರನ್ನು ನೀವು ಎಂದಿಗೂ ತೊರೆದುಬಿಡುವುದಿಲ್ಲ.
[11] ಚೀಯೋನಿನಲ್ಲಿ ವಾಸಿಸುವ ಯೆಹೋವ ದೇವರಿಗೆ ಸ್ತುತಿಹಾಡಿರಿ; ಅವರ ಕ್ರಿಯೆಗಳನ್ನು ರಾಷ್ಟ್ರಗಳಲ್ಲಿ ಸಾರಿ ಹೇಳಿರಿ.
[12] ಅವರು ಪ್ರಾಣಹತ್ಯೆ ಮಾಡುವವರನ್ನು ಮುಯ್ಯಿತೀರಿಸಲು ಜ್ಞಾಪಕಮಾಡಿಕೊಳ್ಳುವರು; ಬಾಧೆಗೆ ಒಳಗಾಗಿರುವ ದೀನರ ಕೂಗನ್ನು ಅವರು ಅಲಕ್ಷ್ಯಮಾಡುವುದಿಲ್ಲ.
[13] ಯೆಹೋವ ದೇವರೇ, ನನ್ನ ವೈರಿಗಳು ನನ್ನನ್ನು ಹಿಂಸಿಸುವುದನ್ನು ನೋಡಿರಿ. ನನ್ನನ್ನು ಕರುಣಿಸಿ, ಮರಣ ದ್ವಾರದಿಂದ ನನ್ನನ್ನು ಮೇಲಕ್ಕೆತ್ತಿರಿ.
[14] ಆಗ ಚೀಯೋನೆಂಬ ನಗರ ದ್ವಾರಗಳಲ್ಲಿ ನಿಮ್ಮ ಸ್ತುತಿಯನ್ನು ಸಾರುವೆನು. ನಿಮ್ಮ ರಕ್ಷಣೆಯಲ್ಲಿ ಆನಂದಿಸುವೆನು.
[15] ರಾಷ್ಟ್ರಗಳು ತಾವು ಅಗೆದ ಕುಣಿಯಲ್ಲಿ ತಾವೇ ಬಿದ್ದಿದ್ದಾರೆ; ಅವರು ಅಡಗಿಸಿಟ್ಟ ಬಲೆಯಲ್ಲೇ ಅವರ ಕಾಲುಗಳು ಸಿಕ್ಕಿಕೊಂಡಿವೆ.
[16] ಯೆಹೋವ ದೇವರು ತಮ್ಮ ನ್ಯಾಯಕೃತ್ಯಗಳಲ್ಲಿ ಪ್ರಸಿದ್ಧರಾಗಿದ್ದಾರೆ; ದುಷ್ಟರು ತಮ್ಮ ಕೈಕೆಲಸದಲ್ಲಿ ಸಿಕ್ಕಿಕೊಂಡಿದ್ದಾರೆ.
[17] ದುಷ್ಟರು ಪಾತಾಳಕ್ಕೆ ತಿರುಗುವರು, ದೇವರನ್ನು ಮರೆಯುವ ರಾಷ್ಟ್ರಗಳ ಅಂತ್ಯವೂ ಹಾಗೇ ಇರುವುದು.
[18] ಆದರೆ ದೇವರು ಬಡವರನ್ನು ಎಂದೆಂದಿಗೂ ಮರೆಯುವುದಿಲ್ಲ; ಕುಗ್ಗಿದವರ ನಿರೀಕ್ಷೆ ಎಂದೆಂದಿಗೂ ನಾಶವಾಗುವುದಿಲ್ಲ.
[19] ಯೆಹೋವ ದೇವರೇ ಎದ್ದೇಳಿರಿ, ಮನುಷ್ಯರು ನನ್ನ ಮೇಲೆ ವಿಜಯ ಸಾಧಿಸದಿರಲಿ; ರಾಷ್ಟ್ರಗಳಿಗೆ ನಿಮ್ಮ ಮುಂದೆಯೇ ನ್ಯಾಯತೀರ್ಪಾಗಲಿ.
[20] ಯೆಹೋವ ದೇವರೇ, ಅವರನ್ನು ಭಯದಲ್ಲಿರಿಸಿರಿ; ರಾಷ್ಟ್ರಗಳು ತಾವು ಮನುಷ್ಯರೇ ಎಂದು ತಿಳಿದುಕೊಳ್ಳಲಿ.