[1] ಯೆಹೋವ ದೇವರ ನಿಯಮಕ್ಕೆ ಅನುಸಾರವಾಗಿದ್ದು, ದೋಷರಹಿತ ಮಾರ್ಗದಲ್ಲಿ ನಡೆದುಕೊಳ್ಳುವವರೂ ಧನ್ಯರು.
[2] ಸಂಪೂರ್ಣ ಹೃದಯದಿಂದ ದೇವರನ್ನು ಹುಡುಕುತ್ತಾ ಅವರ ಶಾಸನಗಳನ್ನು ಕೈಗೊಳ್ಳುವವರೂ ಧನ್ಯರು
[3] ಅಂಥವರು ಅನ್ಯಾಯವನ್ನು ಮಾಡದೆ, ದೇವರ ಮಾರ್ಗಗಳಲ್ಲಿ ನಡೆದುಕೊಳ್ಳುವರು.
[4] ದೇವರೇ, ನಿಮ್ಮ ಸೂತ್ರಗಳನ್ನು ಪೂರ್ಣವಾಗಿ ಕೈಗೊಳ್ಳಬೇಕೆಂದು ನೀವು ಆಜ್ಞಾಪಿಸಿದ್ದೀರಿ.
[5] ನಿಮ್ಮ ತೀರ್ಪುಗಳನ್ನು ಪಾಲಿಸುವುದರಲ್ಲಿ ನನ್ನ ಮಾರ್ಗಗಳು ಸ್ಥಿರವಾಗಿರಲಿ!
[6] ನಿಮ್ಮ ಎಲ್ಲಾ ಅಪ್ಪಣೆಗಳನ್ನು ಪರಿಗಣಿಸುವಾಗ ನಾನು ನಾಚಿಕೆಗೆ ಗುರಿಯಾಗುವುದಿಲ್ಲ.
[7] ನಾನು ನಿಮ್ಮ ನೀತಿಯುಳ್ಳ ನಿಯಮಗಳನ್ನು ಕಲಿಯುತ್ತಿರುವಾಗೆಲ್ಲಾ, ಯಥಾರ್ಥ ಹೃದಯದಿಂದ ನಿಮ್ಮನ್ನು ಕೊಂಡಾಡುವೆನು.
[8] ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು; ನನ್ನನ್ನು ಸಂಪೂರ್ಣವಾಗಿ ಕೈಬಿಡಬೇಡಿರಿ. ב ಬೇತ್
[9] ಯೌವನಸ್ಥನು ಯಾವುದರಿಂದ ತನ್ನ ನಡತೆಯನ್ನು ಶುದ್ಧವಾಗಿಟ್ಟುಕೊಳ್ಳುವನು? ನಿಮ್ಮ ವಾಕ್ಯದ ಪ್ರಕಾರ ಜೀವಿಸುವುದರಿಂದಲೇ.
[10] ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಹುಡುಕಿದ್ದೇನೆ; ನಿಮ್ಮ ಆಜ್ಞೆಗಳಿಂದ ನಾನು ತಪ್ಪಿಹೋಗದಂತೆ ಮಾಡಿರಿ.
[11] ನಿಮಗೆ ವಿರೋಧವಾಗಿ ಪಾಪಮಾಡದ ಹಾಗೆ ನನ್ನ ಹೃದಯದಲ್ಲಿ ನಿಮ್ಮ ವಾಕ್ಯವನ್ನು ಬಚ್ಚಿಟ್ಟುಕೊಂಡಿದ್ದೇನೆ.
[12] ಯೆಹೋವ ದೇವರೇ, ನಿಮಗೆ ಸ್ತುತಿಯುಂಟಾಗಲಿ; ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿಕೊಡಿರಿ.
[13] ನಿಮ್ಮ ಬಾಯಿಂದ ಬರುವ ನಿಯಮಗಳನ್ನೆಲ್ಲಾ ನನ್ನ ತುಟಿಗಳಿಂದ ನಾನು ವರ್ಣಿಸಿದ್ದೇನೆ.
[14] ಮಹಾ ಸಂಪತ್ತಿನಲ್ಲಿ ಒಬ್ಬ ವ್ಯಕ್ತಿ ಆನಂದಿಸುವ ಹಾಗೆ ನಾನು ನಿಮ್ಮ ಶಾಸನಗಳನ್ನು ಅನುಸರಿಸುವುದರಲ್ಲಿ ಆನಂದಿಸುವೆನು.
[15] ನಿಮ್ಮ ಸೂತ್ರಗಳನ್ನು ಧ್ಯಾನಮಾಡಿ, ನಿಮ್ಮ ಮಾರ್ಗಗಳನ್ನು ದೃಷ್ಟಿಸುವೆನು.
[16] ನಿಮ್ಮ ತೀರ್ಪುಗಳಲ್ಲಿ ಉಲ್ಲಾಸಗೊಂಡು, ನಿಮ್ಮ ವಾಕ್ಯವನ್ನು ತಿರಸ್ಕರಿಸದಿರುವೆನು. ג ಗಿಮೆಲ್
[17] ನಾನು ಜೀವದಿಂದಿದ್ದು ನಿಮ್ಮ ವಾಕ್ಯವನ್ನು ಕೈಗೊಳ್ಳುವಂತೆ ನಿಮ್ಮ ಸೇವಕನ ಮೇಲೆ ದಯೆಯಿಡಿರಿ.
[18] ನಿಮ್ಮ ನಿಯಮದೊಳಗಿನ ಅದ್ಭುತಗಳನ್ನು ಕಾಣುವಂತೆ ನನ್ನ ಕಣ್ಣುಗಳನ್ನು ತೆರೆಯಿರಿ.
[19] ಈ ಭೂಮಿಯಲ್ಲಿ ನಾನೊಬ್ಬ ಪ್ರವಾಸಿಯಾಗಿದ್ದೇನೆ; ನಿಮ್ಮ ಆಜ್ಞೆಗಳನ್ನು ನನಗೆ ಮರೆಮಾಡಬೇಡಿರಿ.
[20] ನಿಮ್ಮ ನಿಯಮಗಳನ್ನು ಯಾವಾಗಲೂ ಹಂಬಲಿಸುತ್ತಿರುವುದರಿಂದ, ನನ್ನ ಪ್ರಾಣವು ಕರಗಿಹೋಗುತ್ತಿದೆ.
[21] ನಿಮ್ಮ ಆಜ್ಞೆಗಳನ್ನು ಅನುಸರಿಸದೆ ತಪ್ಪಿಹೋಗುವ ಶಾಪಗ್ರಸ್ತರಾದ ಗರ್ವಿಷ್ಠರನ್ನು ನೀವು ಗದರಿಸುತ್ತೀರಿ.
[22] ನಾನು ನಿಮ್ಮ ಶಾಸನಗಳನ್ನು ಕೈಗೊಂಡ ಕಾರಣ, ಗರ್ವಿಷ್ಠರ ನಿಂದೆಯನ್ನೂ, ತಿರಸ್ಕಾರವನ್ನೂ ನನ್ನಿಂದ ತೊಲಗಿಸಿರಿ.
[23] ಅಧಿಕಾರಿಗಳು ನನಗೆ ವಿರೋಧವಾಗಿ ಕುಳಿತುಕೊಂಡು ಮಾತನಾಡಿಕೊಂಡರೂ, ನಿಮ್ಮ ಸೇವಕನು ನಿಮ್ಮ ತೀರ್ಪುಗಳನ್ನೇ ಧ್ಯಾನಿಸುತ್ತಿರುವೆನು.
[24] ನಿಮ್ಮ ಶಾಸನಗಳು ನನಗೆ ಉಲ್ಲಾಸಕರವಾಗಿವೆ; ಅವೇ ನನ್ನ ಸಮಾಲೋಚಕರು. ד ದಾಲಿತ್
[25] ನಾನು ಧೂಳಿನಲ್ಲಿ ಬಿದ್ದಿದ್ದೇನೆ; ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ಉಜ್ಜೀವಿಸಿರಿ.
[26] ನಾನು ನನ್ನ ಮಾರ್ಗಗಳನ್ನು ಲೆಕ್ಕ ಒಪ್ಪಿಸಲು, ನೀವು ನನಗೆ ಸದುತ್ತರವನ್ನು ಕೊಟ್ಟಿರುವಿರಿ; ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿಕೊಡಿರಿ.
[27] ನಿಮ್ಮ ಸೂತ್ರಗಳ ಮಾರ್ಗವನ್ನು ನಾನು ಅರ್ಥಮಾಡಿಕೊಳ್ಳಲು ಸಹಾಯಿಸಿರಿ, ಆಗ ನಿಮ್ಮ ಅದ್ಭುತಕಾರ್ಯಗಳನ್ನು ಧ್ಯಾನ ಮಾಡುವೆನು.
[28] ನನ್ನ ಪ್ರಾಣವು ದುಃಖದಿಂದ ಬಲಹೀನವಾಗಿದೆ; ನಿಮ್ಮ ವಾಕ್ಯದಿಂದ ನನ್ನನ್ನು ಬಲಪಡಿಸಿರಿ.
[29] ವಂಚನೆಯುಳ್ಳ ಮಾರ್ಗದಿಂದ ನನ್ನನ್ನು ಕಾಪಾಡಿರಿ; ನನಗೆ ಕೃಪೆ ನೀಡಿ ನಿಮ್ಮ ನಿಯಮವನ್ನು ನನಗೆ ಬೋಧನೆ ಮಾಡಿರಿ.
[30] ನಂಬಿಗಸ್ತಿಕೆಯ ಮಾರ್ಗವನ್ನು ಆರಿಸಿಕೊಂಡಿದ್ದೇನೆ; ನಾನು ನಿಮ್ಮ ನಿಯಮಗಳ ಮೇಲೆ ನನ್ನ ಹೃದಯವನ್ನಿಟ್ಟುಕೊಂಡಿದ್ದೇನೆ.
[31] ಯೆಹೋವ ದೇವರೇ, ನಾನು ನಿಮ್ಮ ಶಾಸನಗಳನ್ನು ಬಿಗಿಯಾಗಿಟ್ಟುಕೊಂಡಿದ್ದೇನೆ; ನನ್ನನ್ನು ನಾಚಿಕೆಗೆ ಗುರಿಪಡಿಸಬೇಡಿರಿ.
[32] ನಿಮ್ಮ ಆಜ್ಞೆಗಳ ಮಾರ್ಗದಲ್ಲಿ ಓಡುವೆನು, ಏಕೆಂದರೆ ನೀವು ನನ್ನ ವಿವೇಕವನ್ನು ವಿಸ್ತಾರ ಮಾಡಿದ್ದೀರಿ. ה ಹೇ
[33] ಯೆಹೋವ ದೇವರೇ, ನಿಮ್ಮ ತೀರ್ಪುಗಳ ವಿವರವನ್ನು ನನಗೆ ಬೋಧಿಸಿರಿ; ಆಗ ನಾನು ಅವುಗಳನ್ನು ಅಂತ್ಯದವರೆಗೂ ಹಿಂಬಾಲಿಸುವೆನು.
[34] ನಿಮ್ಮ ನಿಯಮವನ್ನು ಹಿಂಬಾಲಿಸಿ, ಅದನ್ನು ಪೂರ್ಣಹೃದಯದಿಂದ ಕೈಕೊಳ್ಳಲು ನನಗೆ ವಿವೇಚನೆಯನ್ನು ನೀಡಿರಿ.
[35] ನಿಮ್ಮ ಆಜ್ಞೆಗಳ ಮಾರ್ಗದಲ್ಲಿ ನನ್ನನ್ನು ನಡೆಸಿರಿ, ಏಕೆಂದರೆ ನಾನು ಅದರಲ್ಲಿ ಆನಂದಿಸುತ್ತೇನೆ.
[36] ಸ್ವಾರ್ಥದ ಲಾಭಗಳ ಕಡೆಗಲ್ಲ, ಆದರೆ ನಿಮ್ಮ ಶಾಸನಗಳ ಕಡೆಗೆ ನನ್ನ ಹೃದಯವನ್ನು ತಿರುಗಿಸಿರಿ.
[37] ವ್ಯರ್ಥವಾದವುಗಳಿಂದ ನನ್ನ ಕಣ್ಣುಗಳನ್ನು ತಿರುಗಿಸಿ, ನಿಮ್ಮ ವಾಕ್ಯದ ಅನುಸಾರವಾಗಿ ನನ್ನ ಜೀವವನ್ನು ಕಾಪಾಡಿರಿ.
[38] ನಿಮಗೆ ಭಯಪಡುವವರಿಗಾಗಿ ನೀಡುವ ವಾಗ್ದಾನವನ್ನು ನಿಮ್ಮ ಸೇವಕನಿಗೆ ನೆರವೇರಿಸಿರಿ.
[39] ನಾನು ಭಯಪಡುವ ನನ್ನ ನಿಂದೆಯನ್ನು ನನ್ನಿಂದ ತೊಲಗಿಸಿರಿ, ಏಕೆಂದರೆ ನಿಮ್ಮ ನಿಯಮಗಳು ಒಳ್ಳೆಯವುಗಳೇ.
[40] ಇಗೋ ನಿಮ್ಮ ಸೂತ್ರಗಳಿಗಾಗಿ ನಾನು ಎಷ್ಟೋ ಹಂಬಲಿಸುತ್ತೇನೆ! ನಿಮ್ಮ ನೀತಿಗನುಸಾರವಾಗಿ ನನ್ನ ಜೀವವನ್ನು ಕಾಪಾಡಿರಿ. ו ವಾವ್
[41] ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ದೊರಕಲಿ, ನಿಮ್ಮ ವಾಗ್ದಾನದ ರಕ್ಷಣೆಯು ನನಗೆ ಉಂಟಾಗಲಿ;
[42] ಆಗ ನನ್ನನ್ನು ನಿಂದಿಸುವವನಿಗೆ ಉತ್ತರಕೊಡುವೆನು, ಏಕೆಂದರೆ ನಾನು ನಿಮ್ಮ ವಾಕ್ಯದಲ್ಲಿ ಭರವಸೆಯಿಟ್ಟಿದ್ದೇನೆ.
[43] ಸತ್ಯವಾಕ್ಯವನ್ನು ನನ್ನ ಬಾಯಿಂದ ತೆಗೆಯಬೇಡಿರಿ, ಏಕೆಂದರೆ ನಿಮ್ಮ ನಿಯಮಗಳಲ್ಲಿ ನಾನು ನನ್ನ ನಿರೀಕ್ಷೆಯನ್ನಿಟ್ಟಿದ್ದೇನೆ.
[44] ನಾನು ನಿಮ್ಮ ನಿಯಮವನ್ನು ಯಾವಾಗಲೂ ಮತ್ತು ಎಂದೆಂದಿಗೂ ಪಾಲಿಸುವೆನು.
[45] ನಿಮ್ಮ ಸೂತ್ರಗಳನ್ನು ನಾನು ಹುಡುಕುವುದರಿಂದ, ನಾನು ಸ್ವತಂತ್ರವಾಗಿಯೇ ಜೀವಿಸುವೆನು.
[46] ಅರಸರ ಮುಂದೆ ನಿಮ್ಮ ಶಾಸನಗಳನ್ನು ಮಾತಾಡುವೆನು, ಅವುಗಳ ಬಗ್ಗೆ ನಾನೆಂದೂ ನಾಚಿಕೆಪಡುವುದಿಲ್ಲ.
[47] ನಿಮ್ಮ ಆಜ್ಞೆಗಳನ್ನು ನಾನು ಪ್ರೀತಿಸುವುದರಿಂದ, ನಾನು ಅವುಗಳಲ್ಲಿ ಆನಂದಿಸುವೆನು.
[48] ನಾನು ಪ್ರೀತಿಸುವ ನಿಮ್ಮ ಆಜ್ಞೆಗಳ ಕಡೆಗೆ ನನ್ನ ಕೈಗಳನ್ನೆತ್ತಿ, ನಿಮ್ಮ ತೀರ್ಪುಗಳನ್ನು ಧ್ಯಾನ ಮಾಡುವೆನು. ז ಸಾಯಿನ್
[49] ನಿಮ್ಮ ಸೇವಕನಿಗೋಸ್ಕರ ನಿಮ್ಮ ವಾಕ್ಯವನ್ನು ನೀವು ಜ್ಞಾಪಕಮಾಡಿಕೊಳ್ಳಿರಿ, ಏಕೆಂದರೆ ನೀವು ನನಗೆ ನಿರೀಕ್ಷೆಯನ್ನು ಕೊಟ್ಟಿದ್ದೀರಿ.
[50] ನಿಮ್ಮ ವಾಗ್ದಾನವು ನನ್ನ ಜೀವದ ಸಂರಕ್ಷಣೆಯಾಗಿದೆ. ಅವು ನನ್ನ ಸಂಕಷ್ಟಗಳಲ್ಲಿ ಆದರಣೆಯಾಗಿವೆ.
[51] ಅಹಂಕಾರಿಗಳು ನನ್ನನ್ನು ಕರುಣಿಸದೆ ಹಾಸ್ಯ ಮಾಡಿದರೂ, ನಾನು ನಿಮ್ಮ ನಿಯಮದಿಂದ ತೊಲಗುವುದಿಲ್ಲ.
[52] ಯೆಹೋವ ದೇವರೇ, ನಿಮ್ಮ ಪುರಾತನ ನಿಯಮಗಳನ್ನು ನಾನು ನೆನಪು ಮಾಡಿಕೊಂಡು, ಅವುಗಳಲ್ಲಿ ಆದರಣೆಯನ್ನು ಪಡೆದುಕೊಂಡಿದ್ದೇನೆ.
[53] ನಿಮ್ಮ ನಿಯಮವನ್ನು ಬಿಟ್ಟುಬಿಡುವ ದುಷ್ಟರ ನಿಮಿತ್ತ, ರೋಷವು ನನ್ನನ್ನು ಆವರಿಸಿಕೊಂಡಿದೆ.
[54] ನನ್ನ ಪ್ರವಾಸದ ಮನೆಯಲ್ಲಿ ನಿಮ್ಮ ತೀರ್ಪುಗಳು ನನಗೆ ಗಾನ ವಿಷಯವಾಗಿದೆ.
[55] ಯೆಹೋವ ದೇವರೇ, ರಾತ್ರಿಯಲ್ಲಿ ನಿಮ್ಮ ನಾಮಸ್ಮರಣೆ ಮಾಡುವುದರಿಂದ, ನಿಮ್ಮ ನಿಯಮವನ್ನು ಕೈಕೊಳ್ಳುತ್ತೇನೆ.
[56] ನಾನು ನಿಮ್ಮ ಸೂತ್ರಗಳನ್ನು ಕೈಗೊಂಡಿದ್ದೇನೆ: ಇದೇ ನನ್ನ ಜೀವನದ ಶೈಲಿಯಾಗಿದೆ. ח ಕೇತ್
[57] ಯೆಹೋವ ದೇವರೇ, ನೀವೇ ನನ್ನ ಪಾಲು; ನಿಮ್ಮ ವಾಕ್ಯಗಳನ್ನು ಪಾಲಿಸುವೆನೆಂದು ನಾನು ಪ್ರಮಾಣ ಮಾಡಿದ್ದೇನೆ.
[58] ಪೂರ್ಣಹೃದಯದಿಂದ ನಾನು ನಿಮ್ಮ ಮುಖವನ್ನು ಹುಡುಕಿದ್ದೇನೆ; ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ಕರುಣಿಸಿರಿ.
[59] ನಾನು ನನ್ನ ನಡತೆಯನ್ನು ಪರಿಶೋಧಿಸುತ್ತಾ ನನ್ನ ಹೆಜ್ಜೆಗಳನ್ನು ನಿಮ್ಮ ಶಾಸನಗಳ ಕಡೆಗೆ ತಿರುಗಿಸಿದ್ದೇನೆ.
[60] ನಿಮ್ಮ ಆಜ್ಞೆಗಳನ್ನು ಪಾಲಿಸಲು ನಾನು ತಡಮಾಡದೆ ತ್ವರೆಪಟ್ಟಿದ್ದೇನೆ.
[61] ದುಷ್ಟರ ಪಾಶಗಳು ನನ್ನನ್ನು ಸುತ್ತಿಕೊಂಡಿದ್ದರೂ, ನಿಮ್ಮ ನಿಯಮವನ್ನು ನಾನು ಮರೆಯಲಿಲ್ಲ.
[62] ನಿಮ್ಮ ನೀತಿಯುಳ್ಳ ನಿಯಮಗಳಿಗಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ಮಧ್ಯರಾತ್ರಿಯಲ್ಲಿ ಏಳುವೆನು.
[63] ನಿಮಗೆ ಭಯಪಡುವವರೆಲ್ಲರಿಗೂ, ನಿಮ್ಮ ಸೂತ್ರಗಳನ್ನು ಹಿಂಬಾಲಿಸುವವರಿಗೂ ನಾನು ಮಿತ್ರನಾಗಿದ್ದೇನೆ.
[64] ಯೆಹೋವ ದೇವರೇ, ಭೂಮಿಯು ನಿಮ್ಮ ಪ್ರೀತಿಯಿಂದ ತುಂಬಿದೆ; ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ. ט ಟೇತ್
[65] ಯೆಹೋವ ದೇವರೇ, ನಿಮ್ಮ ವಾಕ್ಯದ ಪ್ರಕಾರ ನಿಮ್ಮ ಸೇವಕನಿಗೆ ಒಳ್ಳೆಯದನ್ನು ಮಾಡಿರಿ.
[66] ತಿಳುವಳಿಕೆಯನ್ನೂ ಒಳ್ಳೆಯ ವಿವೇಚನೆಯನ್ನೂ, ನನಗೆ ಕಲಿಸಿರಿ, ಏಕೆಂದರೆ ನಿಮ್ಮ ಆಜ್ಞೆಗಳಲ್ಲಿ ಭರವಸೆ ಇಟ್ಟಿದ್ದೇನೆ.
[67] ನಾನು ಬಾಧೆಪಡುವುದಕ್ಕಿಂತ ಮುಂಚೆ ದಾರಿತಪ್ಪಿಹೋಗುತ್ತಿದ್ದೆನು, ಆದರೆ ಈಗ ನಿಮ್ಮ ವಾಕ್ಯವನ್ನು ಪಾಲಿಸುತ್ತಿದ್ದೇನೆ.
[68] ನೀವು ಒಳ್ಳೆಯವರೂ, ಒಳ್ಳೆಯದನ್ನು ಮಾಡುವವರೂ ಆಗಿದ್ದೀರಿ; ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿರಿ.
[69] ಅಹಂಕಾರಿಗಳು ನನಗೆ ವಿರೋಧವಾಗಿ ಸುಳ್ಳು ಕಲ್ಪಿಸಿದರು, ನಾನಾದರೋ ಪೂರ್ಣಹೃದಯದಿಂದ ನಿಮ್ಮ ಸೂತ್ರಗಳನ್ನು ಕೈಗೊಳ್ಳುವೆನು.
[70] ಅವರ ಹೃದಯವು ಕಠಿಣವೂ ಮಂದವೂ ಆಗಿದೆ, ನಾನಾದರೋ ನಿಮ್ಮ ನಿಯಮದಲ್ಲಿ ಆನಂದಪಡುತ್ತೇನೆ.
[71] ನಾನು ಶ್ರಮೆಪಟ್ಟದ್ದು ನನಗೆ ಒಳ್ಳೆಯದಾಯಿತು ಅದರಿಂದ ನಿಮ್ಮ ತೀರ್ಪುಗಳನ್ನು ಕಲಿತೆನು.
[72] ಸಾವಿರಾರು ಬೆಳ್ಳಿಬಂಗಾರ ನಾಣ್ಯಗಳಿಗಿಂತಲೂ ನಿಮ್ಮ ಬಾಯಿಯ ನಿಯಮವು ನನಗೆ ಹೆಚ್ಚು ಅಮೂಲ್ಯವಾದದ್ದಾಗಿದೆ. י ಯೋದ್
[73] ನಿಮ್ಮ ಕೈಗಳು ನನ್ನನ್ನು ನಿರ್ಮಿಸಿ ರೂಪಿಸಿದವು; ನಿಮ್ಮ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ಅರಿವನ್ನು ನೀಡಿರಿ.
[74] ನಿಮಗೆ ಭಯಪಡುವವರು ನನ್ನನ್ನು ನೋಡಿ ಆನಂದಿಸಲಿ, ಏಕೆಂದರೆ ನಾನು ನಿಮ್ಮ ವಾಕ್ಯದಲ್ಲಿ ನಿರೀಕ್ಷಿಸಿಕೊಂಡಿದ್ದೇನೆ.
[75] ಯೆಹೋವ ದೇವರೇ, ನಿಮ್ಮ ನಿಯಮಗಳು ನೀತಿಯುಳ್ಳವುಗಳು; ನಿಮ್ಮ ನಂಬಿಗಸ್ತಿಕೆಯಿಂದಲೇ ನೀವು ನನ್ನನ್ನು ಕಷ್ಟಪಡಿಸಿದ್ದೀರಿ ಎಂದು ನನಗೆ ಗೊತ್ತಿದೆ.
[76] ನೀವು ನಿಮ್ಮ ಸೇವಕನಿಗೆ ನೀಡಿದ ವಾಗ್ದಾನದ ಪ್ರಕಾರ, ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ಆದರಣೆಯಾಗಿರಲಿ.
[77] ನಾನು ಜೀವಿಸುವಂತೆ ನಿಮ್ಮ ಅನುಕಂಪವು ನನಗೆ ಬರಲಿ, ಏಕೆಂದರೆ ನಿಮ್ಮ ನಿಯಮವೇ ನನ್ನ ಆನಂದವಾಗಿದೆ.
[78] ಅಹಂಕಾರಿಗಳು ಕಾರಣವಿಲ್ಲದೆ ನನಗೆ ಕೇಡು ಮಾಡಿದ್ದರಿಂದ ನಾಚಿಕೆಪಡಲಿ; ಆದರೆ ನಾನು ನಿಮ್ಮ ಸೂತ್ರಗಳನ್ನು ಧ್ಯಾನಿಸುತ್ತಿರುವೆನು.
[79] ನಿಮಗೆ ಭಯಪಡುವವರು ನನ್ನ ಬಳಿಗೆ ಬರಲಿ, ನಿಮ್ಮ ಶಾಸನಗಳನ್ನು ಅರ್ಥಮಾಡಿಕೊಳ್ಳುವವರೂ ನನ್ನ ಬಳಿಗೆ ಬರಲಿ.
[80] ನಿಷ್ಕಳಂಕ ಹೃದಯದಿಂದ ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು, ಅದರಿಂದ ನಾನು ನಾಚಿಕೆಗೆ ಗುರಿಯಾಗದಿರುವೆನು. כ ಕಾಫ್
[81] ನನ್ನ ಪ್ರಾಣವು ನಿಮ್ಮ ರಕ್ಷಣೆಯ ಬಯಕೆಯಿಂದಲೇ ಕುಗ್ಗಿ ಹೋಗುತ್ತಿದೆ, ಆದರೂ ನಾನು ನಿಮ್ಮ ವಾಕ್ಯದಲ್ಲಿ ನಿರೀಕ್ಷೆ ಇಟ್ಟಿದ್ದೇನೆ.
[82] ನನ್ನ ಕಣ್ಣುಗಳು ನಿಮ್ಮ ವಾಗ್ದಾನಕ್ಕಾಗಿ ಕಾಯುತ್ತಾ ಮಂದವಾಗುತ್ತಿವೆ; “ನೀವು ಯಾವಾಗ ನನಗೆ ಆದರಣೆ ನೀಡುವಿರಿ?” ಎಂದು ನಾನು ಕೇಳುತ್ತಿರುವೆನು.
[83] ನಾನು ಹೊಗೆಯಲ್ಲಿರುವ ದ್ರಾಕ್ಷಾರಸದ ಚರ್ಮಚೀಲದಂತ್ತಿದ್ದರೂ, ನಿಮ್ಮ ತೀರ್ಪುಗಳನ್ನು ನಾನು ಮರೆಯಲಿಲ್ಲ.
[84] ಎಷ್ಟು ಕಾಲ ನಿಮ್ಮ ಸೇವಕನು ಕಾಯಬೇಕು? ನನ್ನ ಹಿಂಸಕರಿಗೆ ಯಾವಾಗ ನೀವು ಶಿಕ್ಷಿಸುವಿರಿ?
[85] ನಿಮ್ಮ ನಿಯಮಕ್ಕೆ ವಿರೋಧವಾಗಿ ಅಹಂಕಾರಿಗಳು ನನಗೆ ಬಲೆಹಿಡಿಯಲು ಕುಣಿಗಳನ್ನು ಅಗೆದಿದ್ದಾರೆ.
[86] ನಿಮ್ಮ ಆಜ್ಞೆಗಳೆಲ್ಲಾ ಭರವಸೆಗೆ ಯೋಗ್ಯವಾದವುಗಳೇ; ಕಾರಣವಿಲ್ಲದೆ ಜನರು ನನ್ನನ್ನು ಹಿಂಸಿಸುವುದರಿಂದ ನನಗೆ ಸಹಾಯಮಾಡಿರಿ.
[87] ಅವರು ನನ್ನನ್ನು ಬಹುಮಟ್ಟಿಗೆ ಭೂಮಿಯಿಂದ ಅಳಿಸಿಹಾಕಲು ನೋಡಿದರು, ಆದರೆ ನಾನು ನಿಮ್ಮ ಸೂತ್ರಗಳನ್ನು ತಿರಸ್ಕರಿಸಲಿಲ್ಲ.
[88] ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನನ್ನ ಜೀವನವನ್ನು ಪರಿಪಾಲಿಸಿರಿ, ಆಗ ನಿಮ್ಮ ಬಾಯಿಂದ ಹೊರಡುವ ಶಾಸನಗಳನ್ನು ಪಾಲಿಸುವೆನು. ל ಲಾಮೆದ್
[89] ಯೆಹೋವ ದೇವರೇ, ನಿಮ್ಮ ವಾಕ್ಯವು ಶಾಶ್ವತವಾಗಿದೆ; ಅದು ಪರಲೋಕದಲ್ಲಿ ಸ್ಥಿರವಾಗಿದೆ.
[90] ನಿಮ್ಮ ನಂಬಿಗಸ್ತಿಕೆಯು ಎಲ್ಲಾ ತಲೆಮಾರಿಗೂ ಮುಂದುವರಿಯುವುದು; ನೀವು ಸ್ಥಾಪಿಸಿದ ಭೂಮಿಯು ನೆಲೆಯಾಗಿರುವುದು.
[91] ನಿಮ್ಮ ನಿಯಮಗಳು ಇಂದಿನವರೆಗೂ ನಿಂತಿರುತ್ತವೆ, ಏಕೆಂದರೆ ಸೃಷ್ಟಿಗಳೆಲ್ಲವೂ ನಿಮ್ಮ ಸೇವೆಯನ್ನು ಮಾಡುತ್ತವೆ.
[92] ನಿಮ್ಮ ನಿಯಮವು ನನಗೆ ಆನಂದವಾಗಿರದಿದ್ದರೆ, ನನ್ನ ಕಷ್ಟದಲ್ಲಿ ನಾನು ನಾಶವಾಗುತ್ತಿದ್ದೆನು.
[93] ನಿಮ್ಮ ಸೂತ್ರಗಳನ್ನು ನಾನು ಎಂದಿಗೂ ಮರೆಯುವುದಿಲ್ಲ, ಏಕೆಂದರೆ ಅವುಗಳಿಂದ ನನ್ನ ಜೀವವನ್ನು ಪರಿಪಾಲಿಸಿದ್ದೀರಿ.
[94] ನನ್ನನ್ನು ರಕ್ಷಿಸಿರಿ, ಏಕೆಂದರೆ ನಾನು ನಿಮ್ಮವನೇ; ನಿಮ್ಮ ಸೂತ್ರಗಳನ್ನು ನಾನು ಹುಡುಕಿದ್ದೇನಲ್ಲಾ.
[95] ದುಷ್ಟರು ನನ್ನನ್ನು ನಾಶಮಾಡುವುದಕ್ಕೆ ನನಗಾಗಿ ಕಾಯುತ್ತಿದ್ದಾರೆ, ನಾನಾದರೋ ನಿಮ್ಮ ಶಾಸನಗಳನ್ನು ಆಲೋಚಿಸುತ್ತಿರುವೆನು.
[96] ಸರ್ವ ಸಂಪೂರ್ಣತೆಗೂ ಒಂದು ಮಿತಿಯಿರುವುದನ್ನು ನಾನು ನೋಡಿದ್ದೇನೆ; ಆದರೆ ನಿಮ್ಮ ಆಜ್ಞೆಗಳು ಮಿತಿಯಿಲ್ಲದವುಗಳಾಗಿವೆ. מ ಮೆಮ್
[97] ನಿಮ್ಮ ನಿಯಮವನ್ನು ನಾನು ಎಷ್ಟೋ ಪ್ರೀತಿಮಾಡುತ್ತೇನೆ! ದಿನವೆಲ್ಲಾ ಅದನ್ನೇ ಧ್ಯಾನಿಸುತ್ತೇನೆ.
[98] ನಿಮ್ಮ ಆಜ್ಞೆಗಳು ಯಾವಾಗಲೂ ನನ್ನೊಂದಿಗೆ ಇರುವುದರಿಂದ ಅವು ನನ್ನನ್ನು ನನ್ನ ಶತ್ರುಗಳಿಗಿಂತ ಜ್ಞಾನಿಯಾಗಿ ಮಾಡಿವೆ.
[99] ನನ್ನ ಒಳನೋಟ ನನ್ನ ಬೋಧಕರೆಲ್ಲರಿಗಿಂತ ದೊಡ್ಡದಾಗಿದೆ. ಏಕೆಂದರೆ ನಿಮ್ಮ ಶಾಸನಗಳು ನನ್ನ ಧ್ಯಾನವಾಗಿವೆ.
[100] ನಿಮ್ಮ ಸೂತ್ರಗಳನ್ನು ಕೈಗೊಂಡಿರುವುದರಿಂದ ನಾನು ಹಿರಿಯರಿಗಿಂತಲೂ ವಿವೇಕಿಯಾಗಿದ್ದೇನೆ.
[101] ನಿಮ್ಮ ವಾಕ್ಯವನ್ನು ಅನುಸರಿಸಬೇಕೆಂದು, ನಾನು ಪ್ರತಿಯೊಂದು ದುರ್ಮಾರ್ಗದಿಂದ ನನ್ನ ಹೆಜ್ಜೆಗಳನ್ನು ಹಿಂದೆಗೆದಿದ್ದೇನೆ.
[102] ನಿಮ್ಮ ನಿಯಮಗಳಿಂದ ನಾನು ತಪ್ಪಿಹೋಗಲಿಲ್ಲ, ಏಕೆಂದರೆ ನೀವೇ ನನಗೆ ಉಪದೇಶಿಸಿದ್ದೀರಿ.
[103] ನಿಮ್ಮ ಮಾತುಗಳು ನನ್ನ ರುಚಿಗೆ ಎಷ್ಟೋ ಸಿಹಿಯಾಗಿವೆ! ಅವು ನನ್ನ ಬಾಯಿಗೆ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ!
[104] ನಾನು ನಿಮ್ಮ ಸೂತ್ರಗಳಿಂದ ತಿಳುವಳಿಕೆಯನ್ನು ಸಂಪಾದಿಸಿಕೊಂಡಿದ್ದೇನೆ; ಆದ್ದರಿಂದ ಪ್ರತಿಯೊಂದು ದುರ್ಮಾರ್ಗವನ್ನೂ ದ್ವೇಷಿಸುತ್ತೇನೆ. נ ನೂನ್
[105] ನಿಮ್ಮ ವಾಕ್ಯವು ನನ್ನ ಪಾದಕ್ಕೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.
[106] ನಿಮ್ಮ ನೀತಿಯ ನಿಯಮಗಳನ್ನು ಪಾಲಿಸುವೆನೆಂದು ನಾನು ಒಂದು ಶಪಥಮಾಡಿದ್ದೇನೆ; ಅದನ್ನು ನಾನು ದೃಢಪಡಿಸುವೆನು.
[107] ನಾನು ಬಹಳ ಕಷ್ಟ ಅನುಭವಿಸಿದ್ದೇನೆ; ಯೆಹೋವ ದೇವರೇ, ನಿಮ್ಮ ವಾಕ್ಯದ ಅನುಸಾರವಾಗಿ ನನ್ನ ಜೀವನವನ್ನು ಕಾಪಾಡಿರಿ.
[108] ಯೆಹೋವ ದೇವರೇ, ನನ್ನ ಬಾಯಿಂದ ಸಿದ್ಧಮನಸ್ಸಿನ ಸ್ತೋತ್ರಗಳನ್ನು ಸ್ವೀಕರಿಸಿರಿ, ನಿಮ್ಮ ನಿಯಮಗಳನ್ನು ನನಗೆ ಬೋಧಿಸಿರಿ.
[109] ನನ್ನ ಜೀವನ ಆಗಾಗ ಅಪಾಯದಲ್ಲಿದೆ, ಆದಾಗ್ಯೂ ನಾನು ನಿಮ್ಮ ನಿಯಮವನ್ನು ಮರೆಯುವುದಿಲ್ಲ.
[110] ದುಷ್ಟರು ನನಗೆ ಬಲೆಯೊಡ್ಡಿದ್ದಾರೆ; ಆದರೂ ನಾನು ನಿಮ್ಮ ಸೂತ್ರಗಳನ್ನು ಬಿಟ್ಟು ತಪ್ಪಿಹೋಗಲಿಲ್ಲ.
[111] ನಿಮ್ಮ ಶಾಸನಗಳನ್ನು ನಿತ್ಯ ಸೊತ್ತಾಗಿ ತೆಗೆದುಕೊಂಡಿದ್ದೇನೆ; ಏಕೆಂದರೆ ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿದೆ.
[112] ನಿಮ್ಮ ತೀರ್ಪುಗಳನ್ನು ಕಡೆವರೆಗೂ ಪಾಲಿಸುವುದಕ್ಕೆ ನಾನು ನನ್ನ ಹೃದಯದಲ್ಲಿ ದೃಢಮಾಡಿಕೊಂಡಿದ್ದೇನೆ. ס ಸಾಮೆಖ್
[113] ಎರಡು ಮನಸ್ಸುಳ್ಳವರನ್ನು ನಾನು ದ್ವೇಷಿಸುತ್ತೇನೆ, ಆದರೂ ನಿಮ್ಮ ನಿಯಮವನ್ನು ನಾನು ಪ್ರೀತಿಸುತ್ತೇನೆ.
[114] ನೀವೇ ನನ್ನ ಆಶ್ರಯವೂ, ಗುರಾಣಿಯೂ ಆಗಿದ್ದೀರಿ; ನಾನು ನನ್ನ ನಿರೀಕ್ಷೆಯನ್ನು ನಿಮ್ಮ ವಾಕ್ಯದಲ್ಲಿ ಇಟ್ಟುಕೊಂಡಿದ್ದೇನೆ.
[115] ನಿಯಮ ಮೀರುವವರೇ, ನನ್ನಿಂದ ತೊಲಗಿರಿ, ನಾನು ನನ್ನ ದೇವರ ಆಜ್ಞೆಗಳನ್ನು ಪಾಲಿಸಲು ಬಿಡಿರಿ!
[116] ನನ್ನ ದೇವರೇ, ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ನೆಲೆಗೊಳಿಸಿರಿ, ಆಗ ನಾನು ಬದುಕುವೆನು; ನನ್ನ ನಿರೀಕ್ಷೆ ಮುರಿದುಹೋಗದಿರಲಿ.
[117] ನನ್ನನ್ನು ಎತ್ತಿ ಹಿಡಿಯಿರಿ, ಆಗ ನಾನು ಬಿಡುಗಡೆಯಾಗುವೆನು; ನಿಮ್ಮ ತೀರ್ಪುಗಳಿಗೆ ಯಾವಾಗಲೂ ಗಮನಕೊಡುವೆನು.
[118] ನಿಮ್ಮ ತೀರ್ಪುಗಳನ್ನು ಮೀರಿದವರನ್ನೆಲ್ಲಾ ನೀವು ತಿರಸ್ಕರಿಸುತ್ತೀರಿ, ಏಕೆಂದರೆ ಅವರ ಕುಯುಕ್ತಿಯು ವ್ಯರ್ಥವಾಗುವುದು.
[119] ಭೂಮಿಯಲ್ಲಿರುವ ದುಷ್ಟರೆಲ್ಲರನ್ನು ಕಸದ ಹಾಗೆ ತೆಗೆದು ಹಾಕುತ್ತೀರಿ; ಆದ್ದರಿಂದ ನಾನು ನಿಮ್ಮ ಶಾಸನಗಳನ್ನು ಪ್ರೀತಿಸುತ್ತೇನೆ.
[120] ನಿಮ್ಮ ಭಯದಿಂದ ನನ್ನ ಶರೀರವು ನಡುಗುತ್ತದೆ; ನಿಮ್ಮ ನಿಯಮಗಳಿಗೆ ನಾನು ಭಯಭಕ್ತಿಯುಳ್ಳವನಾಗಿದ್ದೇನೆ. ע ಆಯಿನ್
[121] ನಾನು ನೀತಿನ್ಯಾಯವನ್ನು ನಡೆಸಿದ್ದೇನೆ; ನನ್ನ ಹಿಂಸಕರಿಗೆ ನನ್ನನ್ನು ಒಪ್ಪಿಸಬೇಡಿರಿ.
[122] ನಿಮ್ಮ ಸೇವಕನ ಕ್ಷೇಮವನ್ನು ದೃಢಪಡಿಸಿರಿ; ಅಹಂಕಾರಿಗಳು ನನ್ನನ್ನು ಬಾಧಿಸದಿರಲಿ.
[123] ನಿಮ್ಮ ರಕ್ಷಣೆಯನ್ನೂ ನಿಮ್ಮ ನೀತಿಯ ವಾಗ್ದಾನವನ್ನೂ ಕಾಯುತ್ತಾ, ನನ್ನ ಕಣ್ಣುಗಳು ಮಂದವಾದವು.
[124] ನಿಮ್ಮ ಪ್ರೀತಿಗೆ ಅನುಸಾರವಾಗಿ ನಿಮ್ಮ ಸೇವಕನೊಂದಿಗೆ ವ್ಯವಹರಿಸಿ, ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ.
[125] ನಾನು ನಿಮ್ಮ ಸೇವಕನು, ನಿಮ್ಮ ಶಾಸನಗಳನ್ನು ನಾನು ಅರ್ಥಮಾಡಿಕೊಳ್ಳುವಂತೆ ನನಗೆ ವಿವೇಚನೆಯನ್ನು ಕೊಡಿರಿ.
[126] ಯೆಹೋವ ದೇವರೇ, ಇದು ನೀವು ಕಾರ್ಯಸಾಧಿಸಲು ಸಮಯವಾಗಿದೆ, ಏಕೆಂದರೆ ನಿಮ್ಮ ನಿಯಮವು ಉಲ್ಲಂಘಿಸಲಾಗಿದೆ.
[127] ಆದ್ದರಿಂದ ನಾನು ನಿಮ್ಮ ಆಜ್ಞೆಗಳನ್ನು ಬಂಗಾರಕ್ಕಿಂತಲೂ ಹೌದು, ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನೆ,
[128] ಅದರ ನಿಮಿತ್ತ ನಿಮ್ಮ ಸೂತ್ರಗಳೆಲ್ಲವೂ ಸರಿಯಾದವುಗಳೆಂದು ನಾನು ಅಂಗೀಕರಿಸುತ್ತೇನೆ, ಪ್ರತಿಯೊಂದು ಮೋಸ ಮಾರ್ಗವನ್ನೂ ದ್ವೇಷಿಸುತ್ತೇನೆ. פ ಪೆ
[129] ನಿಮ್ಮ ಶಾಸನಗಳು ಅದ್ಭುತವಾದವುಗಳೇ; ಆದ್ದರಿಂದ ನಾನು ಅವುಗಳನ್ನು ಅನುಸರಿಸುತ್ತೇನೆ.
[130] ನಿಮ್ಮ ವಾಕ್ಯಗಳನ್ನು ತೆರೆಯುವಾಗ, ಅದು ಬೆಳಕನ್ನು ಕೊಡುವುದು; ಅದು ಮುಗ್ಧರಿಗೆ ಅರಿವನ್ನು ನೀಡುವುದು.
[131] ನಿಮ್ಮ ಆಜ್ಞೆಗಳಿಗಾಗಿರುವ ಬಯಕೆಯು, ನಾನು ಬಾಯಿತೆರೆದು ಹಂಬಲಿಸುವಂತೆ ಮಾಡುತ್ತದೆ.
[132] ನಿಮ್ಮ ನಾಮವನ್ನು ಪ್ರೀತಿಸುವವರಿಗೆ ನೀವು ಯಾವಾಗಲೂ ಮಾಡುವಂತೆ, ನೀವು ನನ್ನ ಕಡೆಗೆ ತಿರುಗಿಕೊಂಡು, ನನ್ನನ್ನು ಕರುಣಿಸಿರಿ.
[133] ನನ್ನ ಹೆಜ್ಜೆಗಳನ್ನು ನಿಮ್ಮ ವಾಕ್ಯದ ಪ್ರಕಾರ ಮುನ್ನಡೆಸಿರಿ; ಯಾವ ಪಾಪವಾದರೂ ನನ್ನನ್ನು ಆಳದಿರಲಿ.
[134] ಜನರ ಬಲಾತ್ಕಾರದಿಂದ ನನ್ನನ್ನು ತಪ್ಪಿಸಿರಿ, ಆಗ ನಿಮ್ಮ ಸೂತ್ರಗಳನ್ನು ನಾನು ಪಾಲಿಸುವೆನು.
[135] ನಿಮ್ಮ ಮುಖವನ್ನು ನಿಮ್ಮ ಸೇವಕನ ಮೇಲೆ ಪ್ರಕಾಶಿಸಿರಿ ಮತ್ತು ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ.
[136] ನಿಮ್ಮ ನಿಯಮವನ್ನು ಕೈಗೊಳ್ಳದೇ ಇರುವಾಗ ನನ್ನ ಕಣ್ಣಿನಿಂದ ಕಣ್ಣೀರು ಧಾರೆಯಾಗಿ ಹರಿಯುತ್ತಿವೆ. צ ಸಾದೆ
[137] ಯೆಹೋವ ದೇವರೇ, ನೀವು ನೀತಿವಂತರು, ನಿಮ್ಮ ನಿಯಮಗಳು ಸರಿಯಾದವುಗಳೇ.
[138] ನೀವು ಕೊಟ್ಟ ನಿಮ್ಮ ಶಾಸನಗಳು ನೀತಿಯುಳ್ಳವುಗಳು; ಪೂರ್ಣ ಭರವಸೆಗೆ ಅವು ಯೋಗ್ಯವಾದವುಗಳು.
[139] ನನ್ನ ವೈರಿಗಳು ನಿಮ್ಮ ಮಾತುಗಳನ್ನು ತಿರಸ್ಕರಿಸುವುದರಿಂದ, ನನ್ನ ಆಸಕ್ತಿಯು ನನ್ನನ್ನು ದಹಿಸಿಬಿಟ್ಟಿದೆ.
[140] ನಿಮ್ಮ ವಾಗ್ದಾನಗಳು ಬಹು ಪರಿಶೋಧಿತವಾಗಿವೆ, ಆದ್ದರಿಂದ ನಿಮ್ಮ ಸೇವಕನು ಅವುಗಳನ್ನು ಪ್ರೀತಿಸುತ್ತಾನೆ.
[141] ನಾನು ಅಲ್ಪನೂ, ತಿರಸ್ಕಾರ ಹೊಂದಿದವನು ಆಗಿದ್ದರೂ, ನಿಮ್ಮ ಸೂತ್ರಗಳನ್ನು ನಾನು ಮರೆಯುವುದಿಲ್ಲ.
[142] ನಿಮ್ಮ ನೀತಿಯು ನಿತ್ಯವಾದದ್ದು ನಿಮ್ಮ ನಿಯಮವು ಸತ್ಯವಾದದ್ದು.
[143] ಕಷ್ಟಸಂಕಟಗಳು ನನ್ನನ್ನು ಹಿಡಿದಿವೆ, ಆದರೂ ನಿಮ್ಮ ಆಜ್ಞೆಗಳು ನನಗೆ ಆನಂದದಾಯಕವಾಗಿವೆ.
[144] ನಿಮ್ಮ ಶಾಸನಗಳು ಯಾವಾಗಲೂ ನೀತಿಯುಕ್ತವಾಗಿವೆ; ನಾನು ಬದುಕುವಂತೆ ನನಗೆ ವಿವೇಕವನ್ನು ಕೊಡಿರಿ. ק ಖೋಫ್
[145] ಯೆಹೋವ ದೇವರೇ, ಪೂರ್ಣಹೃದಯದಿಂದ ನಾನು ಮೊರೆಯಿಟ್ಟಿದ್ದೇನೆ; ನನಗೆ ಸದುತ್ತರ ನೀಡಿರಿ; ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು.
[146] ನಿಮಗೇ ಮೊರೆಯಿಟ್ಟಿದ್ದೇನೆ; ನನ್ನನ್ನು ರಕ್ಷಿಸಿರಿ ನಾನು ನಿಮ್ಮ ಶಾಸನಗಳನ್ನು ಪಾಲಿಸುವೆನು.
[147] ನಾನು ಸೂರ್ಯೋದಯಕ್ಕೆ ಮೊದಲು ಎದ್ದು ನಿಮಗೆ ಮೊರೆ ಇಟ್ಟಿದ್ದೇನೆ; ನಾನು ನನ್ನ ನಿರೀಕ್ಷೆಯನ್ನು ನಿಮ್ಮ ವಾಕ್ಯದಲ್ಲಿ ಇಟ್ಟಿದ್ದೇನೆ.
[148] ನಾನು ನಿಮ್ಮ ವಾಕ್ಯವನ್ನು ಧ್ಯಾನ ಮಾಡುವಂತೆ, ರಾತ್ರಿಜಾವದಲ್ಲಿ ನನ್ನ ಕಣ್ಣುಗಳು ತೆರೆದಿರುತ್ತವೆ.
[149] ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಗೆ ಅನುಸಾರವಾಗಿ ನನ್ನ ಮೊರೆಯನ್ನು ಕೇಳಿರಿ; ನಿಮ್ಮ ನಿಯಮಗಳ ಅನುಸಾರವಾಗಿ ನನ್ನ ಬದುಕನ್ನು ಕಾಪಾಡಿರಿ.
[150] ದುಷ್ಟತನಕ್ಕೆ ಒಳಸಂಚು ಮಾಡುವವರು ನನಗೆ ಸಮೀಪವಾಗಿದ್ದಾರೆ; ಆದರೆ ಅವರು ನಿಮ್ಮ ನಿಯಮಕ್ಕೆ ಅವರು ದೂರವಾಗಿದ್ದಾರೆ.
[151] ಯೆಹೋವ ದೇವರೇ, ನೀವು ಸಮೀಪವಾಗಿದ್ದೀರಿ, ನಿಮ್ಮ ಆಜ್ಞೆಗಳೆಲ್ಲಾ ಸತ್ಯವಾಗಿವೆ.
[152] ನಿಮ್ಮ ಶಾಸನಗಳು ಸದಾಕಾಲಕ್ಕೂ ಇರುವಂತೆ ಅವುಗಳನ್ನು ಸ್ಥಾಪಿಸಿದ್ದೀರೆಂದು ಬಹುಕಾಲದ ಹಿಂದೆಯೇ ನಾನು ಕಲಿತುಕೊಂಡಿದ್ದೇವೆ. ר ರೇಷ್
[153] ನನ್ನ ಕಷ್ಟವನ್ನು ನೋಡಿ ನನ್ನನ್ನು ಬಿಡಿಸಿರಿ; ಏಕೆಂದರೆ ನಿಮ್ಮ ನಿಯಮವನ್ನು ನಾನು ಮರೆತಿಲ್ಲ.
[154] ನನ್ನ ಪರವಾಗಿ ವಾದಿಸಿ, ನನ್ನನ್ನು ವಿಮೋಚಿಸಿರಿ; ನಿಮ್ಮ ವಾಗ್ದಾನದ ಪ್ರಕಾರ ನನ್ನ ಬದುಕನ್ನು ಕಾಪಾಡಿರಿ.
[155] ದುಷ್ಟರಿಗೆ ರಕ್ಷಣೆಯು ದೂರವಾಗಿದೆ; ಏಕೆಂದರೆ ಅವರು ನಿಮ್ಮ ತೀರ್ಪುಗಳನ್ನು ಹುಡುಕುವುದಿಲ್ಲ.
[156] ಯೆಹೋವ ದೇವರೇ, ನಿಮ್ಮ ಅನುಕಂಪವು ಮಹತ್ತಾದವುಗಳು; ನಿಮ್ಮ ನಿಯಮಗಳ ಪ್ರಕಾರ ನನ್ನ ಬದುಕನ್ನು ಕಾಪಾಡಿರಿ.
[157] ನನ್ನನ್ನು ಹಿಂಸಿಸುವ ನನ್ನ ವೈರಿಗಳು ಅನೇಕರಾಗಿದ್ದಾರೆ, ನಾನಾದರೋ ನಿಮ್ಮ ಶಾಸನಗಳನ್ನು ಬಿಟ್ಟುಬಿಡಲಿಲ್ಲ.
[158] ನಾನು ಅಪನಂಬಿಗಸ್ತರನ್ನು ಕಂಡು ಅಸಹ್ಯಪಡುತ್ತೇನೆ, ಅವರು ನಿಮ್ಮ ಮಾತನ್ನು ಅಂಗೀಕರಿಸುತ್ತಾಯಿಲ್ಲಾ.
[159] ನಿಮ್ಮ ಸೂತ್ರಗಳನ್ನು ನಾನು ಎಷ್ಟು ಪ್ರೀತಿಸುತ್ತೇನೆ ನೋಡಿರಿ; ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಗೆ ಅನುಸಾರವಾಗಿ ನನ್ನ ಬದುಕನ್ನು ಕಾಪಾಡಿರಿ.
[160] ನಿಮ್ಮ ಮಾತುಗಳೆಲ್ಲಾ ಸತ್ಯವಾದವುಗಳೇ; ನಿಮ್ಮ ನೀತಿ ನಿಯಮಗಳೆಲ್ಲಾ ನಿತ್ಯವಾದವುಗಳೇ. ש ಸೀನ್ ಮತ್ತು ಷೀನ್
[161] ಅಧಿಕಾರಿಗಳು ಕಾರಣವಿಲ್ಲದೆ ನನ್ನನ್ನು ಹಿಂಸಿಸುತ್ತಾರೆ, ಆದರೆ ನನ್ನ ಹೃದಯವು ನಿಮ್ಮ ವಾಕ್ಯಗಳಿಗೆ ನಡುಗುತ್ತದೆ.
[162] ದೊಡ್ಡ ಕೊಳ್ಳೆಯನ್ನು ಕಂಡುಹಿಡಿದವರಂತೆ ನಾನು ನಿಮ್ಮ ವಾಗ್ದಾನದಲ್ಲಿ ಆನಂದಿಸುತ್ತೇನೆ.
[163] ಸುಳ್ಳುತನವನ್ನು ನಾನು ದ್ವೇಷಿಸಿ ಅಸಹ್ಯಪಡುತ್ತೇನೆ ಆದರೆ ನಾನು ನಿಮ್ಮ ನಿಯಮವನ್ನು ಪ್ರೀತಿಸುತ್ತೇನೆ.
[164] ನಿಮ್ಮ ನೀತಿಯ ನಿಯಮಗಳ ನಿಮಿತ್ತ, ನಾನು ದಿನಕ್ಕೆ ಏಳು ಸಾರಿ ನಿಮ್ಮನ್ನು ಸ್ತುತಿಸುತ್ತೇನೆ.
[165] ನಿಮ್ಮ ನಿಯಮ ಪ್ರಿಯರಿಗೆ ಅಪಾರ ಸಮಾಧಾನವಿರುತ್ತದೆ, ಅಂಥವರಿಗೆ ಆತಂಕವೇನೂ ಇರುವುದಿಲ್ಲ.
[166] ಯೆಹೋವ ದೇವರೇ, ನಾನು ನಿಮ್ಮ ರಕ್ಷಣೆಗಾಗಿ ಕಾದುಕೊಂಡಿದ್ದೇನೆ; ನಾನು ನಿಮ್ಮ ಆಜ್ಞೆಗಳನ್ನು ಹಿಂಬಾಲಿಸುತ್ತಿದ್ದೇನೆ.
[167] ನಾನು ನಿಮ್ಮ ಶಾಸನಗಳನ್ನು ಅನುಸರಿಸುವದರಿಂದ, ಅವುಗಳನ್ನು ಅತ್ಯಧಿಕವಾಗಿ ಪ್ರೀತಿಸುತ್ತೇನೆ.
[168] ನಾನು ನಿಮ್ಮ ಸೂತ್ರಗಳನ್ನೂ ಶಾಸನಗಳನ್ನೂ ಪಾಲಿಸುತ್ತೇನೆ, ಏಕೆಂದರೆ ನನ್ನ ಮಾರ್ಗಗಳೆಲ್ಲವೂ ನಿಮಗೆ ತಿಳಿದಿರುತ್ತವೆ. ת ತಾವ್
[169] ಯೆಹೋವ ದೇವರೇ, ನನ್ನ ಮೊರೆ ನಿಮ್ಮ ಸನ್ನಿಧಿ ಸೇರಲಿ; ನಿಮ್ಮ ವಾಕ್ಯದ ಪ್ರಕಾರ ನನಗೆ ಅರಿವನ್ನು ನೀಡಿರಿ.
[170] ನನ್ನ ಬೇಡಿಕೆಯು ನಿಮ್ಮ ಸನ್ನಿಧಿ ಸೇರಲಿ; ನಿಮ್ಮ ವಾಗ್ದಾನದ ಪ್ರಕಾರ ನನ್ನನ್ನು ಬಿಡಿಸಿರಿ.
[171] ನೀವು ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿದಾಗ, ನನ್ನ ತುಟಿಗಳಿಂದ ಸ್ತೋತ್ರವು ಪ್ರವಾಹಿಸಲಿ.
[172] ನಿಮ್ಮ ಆಜ್ಞೆಗಳೆಲ್ಲಾ ನೀತಿಯುಳ್ಳವುಗಳಾಗಿವೆ, ಆದುದರಿಂದ ನನ್ನ ನಾಲಿಗೆಯು ನಿಮ್ಮ ವಾಕ್ಯವನ್ನು ಹಾಡಿ ಹರಸಲಿ.
[173] ನಾನು ನಿಮ್ಮ ಸೂತ್ರಗಳನ್ನು ಆರಿಸಿಕೊಂಡಿರುವುದರಿಂದ, ನಿಮ್ಮ ಕೈ ನನಗೆ ನೆರವಾಗಲಿ.
[174] ಯೆಹೋವ ದೇವರೇ, ನಾನು ನಿಮ್ಮ ರಕ್ಷಣೆಗಾಗಿ ಬಯಸುತ್ತಿದ್ದೇನೆ, ನಿಮ್ಮ ನಿಯಮವೇ ನನಗೆ ಆನಂದವಾಗಿದೆ.
[175] ನಿಮ್ಮನ್ನು ಸ್ತುತಿಸಲು ನಾನು ಬದುಕಿರಲಿ; ನಿಮ್ಮ ನಿಯಮಗಳು ನನ್ನನ್ನು ಕಾಪಾಡಲಿ.
[176] ತಪ್ಪಿಹೋದ ಕುರಿಯಂತೆ ನಾನು ದಾರಿತಪ್ಪಿದ್ದೇನೆ. ನಿಮ್ಮ ಸೇವಕನಾದ ನನ್ನನ್ನು ಬಂದು ಹುಡುಕಿರಿ, ಏಕೆಂದರೆ ನಿಮ್ಮ ಆಜ್ಞೆಗಳನ್ನು ನಾನು ಮರೆಯುವುದಿಲ್ಲ.