Skip to content
Opens in a new window
Listen to this chapter • 2:12

[1] ಯೆಹೋವ ದೇವರೇ, ನಿಮ್ಮನ್ನು ಕೊಂಡಾಡುವೆನು; ನೀವು ನನ್ನ ಶತ್ರುಗಳು ನನ್ನ ವಿಷಯದಲ್ಲಿ ಸಂತೋಷಪಡದಂತೆ ಮಾಡಿದ್ದೀರಿ. ನನ್ನನ್ನು ಮೇಲಕ್ಕೆ ಎತ್ತಿದ್ದೀರಿ.

[2] ನನ್ನ ದೇವರಾದ ಯೆಹೋವ ದೇವರೇ, ಸಹಾಯಕ್ಕಾಗಿ ನಿಮಗೆ ಮೊರೆಯಿಡಲು, ನನ್ನನ್ನು ಸ್ವಸ್ಥಮಾಡಿದ್ದೀರಿ.

[3] ಯೆಹೋವ ದೇವರೇ, ನನ್ನ ಪ್ರಾಣವನ್ನು ಪಾತಾಳದೊಳಗಿಂದ ಎತ್ತಿದ್ದೀರಿ; ನಾನು ಸಮಾಧಿ ಸೇರದ ಹಾಗೆ ನನ್ನನ್ನು ಬದುಕಿಸಿದ್ದೀರಿ.

[4] ಯೆಹೋವ ದೇವರ ವಿಶ್ವಾಸಿಗಳೇ ಅವರನ್ನು ಕೊಂಡಾಡಿರಿ; ಅವರ ಪರಿಶುದ್ಧ ನಾಮವನ್ನು ಕೊಂಡಾಡಿರಿ.

[5] ಅವರ ಕೋಪವು ಕ್ಷಣಮಾತ್ರವೇ; ಆದರೆ ಅವರ ದಯೆಯು ಜೀವಮಾನವೆಲ್ಲಾ ಇರುತ್ತದೆ; ರಾತ್ರಿಯಲ್ಲಿ ದುಃಖ ಬಂದಿದ್ದರೂ; ಬೆಳಿಗ್ಗೆ ಆನಂದವು ಬರುವುದು.

[6] ನಾನು ಸುರಕ್ಷಿತನಾಗಿದ್ದಾಗ, “ನಾನೆಂದೂ ಕದಲುವುದಿಲ್ಲ,” ಎಂದು ಹೇಳಿಕೊಂಡೆನು.

[7] ಯೆಹೋವ ದೇವರೇ, ನಿಮ್ಮ ದಯೆಯಿಂದ ನನ್ನ ರಾಜ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀರಿ ಆದರೆ ನೀವು ನಿಮ್ಮ ಮುಖವನ್ನು ಮರೆಮಾಡಲು ನಾನು ಕಳವಳಗೊಂಡೆನು.

[8] ಯೆಹೋವ ದೇವರೇ, ನಾನು ನಿಮಗೆ ಮೊರೆಯಿಟ್ಟೆನು; ಕರುಣೆಗಾಗಿ ಯೆಹೋವ ಕರ್ತ ಆಗಿರುವವರಿಗೆ ಬಿನ್ನವಿಸಿದೆನು.

[9] ನಾನು ಸಮಾಧಿಯಲ್ಲಿ ಇಳಿದು ಹೋಗಿ ನಾಶವಾದರೆ, ಅದರಿಂದ ನಿಮಗೆ ಆಗುವ ಲಾಭವೇನು? ಧೂಳು ನಿಮ್ಮನ್ನು ಸ್ತುತಿಸುವುದೋ? ಅದು ನಿಮ್ಮ ನಂಬಿಗಸ್ತಿಕೆಯನ್ನು ಪ್ರಕಟಿಸುವುದೋ?

[10] ಯೆಹೋವ ದೇವರೇ, ಲಾಲಿಸು; ನನ್ನನ್ನು ಕರುಣಿಸಿರಿ; ಯೆಹೋವ ದೇವರೇ, ನನಗೆ ಸಹಾಯಕರಾಗಿರಿ.

[11] ನೀವು ನನ್ನ ಗೋಳಾಟವನ್ನು ಕುಣಿದಾಟಕ್ಕೆ ತಿರುಗಿಸಿದ್ದೀರಿ; ನೀವು ನನ್ನ ಗೋಣಿತಟ್ಟನ್ನು ತೆಗೆದುಹಾಕಿ ಹರ್ಷವಸ್ತ್ರವನ್ನು ನನಗೆ ಧರಿಸಿದ್ದೀರಿ.

[12] ಆದ್ದರಿಂದ ನನ್ನ ಹೃದಯವು ಮೌನವಿರದೆ ನಿಮ್ಮನ್ನು ಯುಗಯುಗಕ್ಕೂ ಕೊಂಡಾಡುತ್ತಿರುವುದು. ನನ್ನ ದೇವರಾದ ಯೆಹೋವ ದೇವರೇ, ನಾನು ನಿಮ್ಮನ್ನು ಸದಾಕಾಲವೂ ಸ್ತುತಿಸುವೆನು.

ಕೀರ್ತನೆಗಳು — Chapters