[1] ನಿಮ್ಮನ್ನು ಕೊಂಡಾಡುತ್ತೇವೆ; ದೇವರೇ, ನಿಮ್ಮನ್ನು ಕೊಂಡಾಡುತ್ತೇವೆ; ಏಕೆಂದರೆ ಜನರು ನಿಮ್ಮ ನಾಮವನ್ನು ಜಪಿಸಿ, ನಿಮ್ಮ ಅದ್ಭುತಗಳನ್ನು ಕುರಿತು ಹೇಳುತ್ತಾರೆ.
[2] “ನಿಯಮಿತ ಸಮಯವನ್ನು ಆಯ್ದುಕೊಳ್ಳುವೆನು. ನ್ಯಾಯಕ್ಕೆ ಸರಿಯಾಗಿ ನ್ಯಾಯತೀರಿಸುವೆನು,
[3] ಭೂಮಿಯೂ ಅದರ ನಿವಾಸಿಗಳೆಲ್ಲರೂ ಬೆರಗಾಗಿದ್ದಾರೆ. ನಾನು ಅದರ ಸ್ತಂಭಗಳನ್ನು ನಿಲ್ಲಿಸಿದ್ದೇನೆ.
[4] ‘ಅಹಂಕಾರದಿಂದ ವರ್ತಿಸಬೇಡಿರಿ,’ ಎಂದು ಅಹಂಕಾರಿಗೆ ಹೇಳುತ್ತೇನೆ. ‘ನಿಮ್ಮ ಕೊಂಬು ಎತ್ತಬೇಡಿರಿ,’ ಎಂದು ದುಷ್ಟರಿಗೆ ಹೇಳುವೆನು.
[5] ನಿಮ್ಮ ಕೊಂಬನ್ನು ಪರಲೋಕದ ಕಡೆಗೆ ಎತ್ತಬೇಡಿರಿ. ಹಟಮಾರಿತನದಿಂದ ಮಾತನಾಡಬೇಡಿರಿ,” ಎಂದು ನೀವು ಹೇಳಿದ್ದೀರಿ.
[6] ಏಕೆಂದರೆ ಉದ್ಧಾರವು ಪೂರ್ವದಿಂದಲೂ ಪಶ್ಚಿಮದಿಂದಲೂ ಅಲ್ಲ, ಇಲ್ಲವೆ ದಕ್ಷಿಣದ ಮರುಭೂಮಿಯಿಂದಲೂ ಬರುವುದಿಲ್ಲ.
[7] ಆದರೆ ದೇವರು ನ್ಯಾಯತೀರಿಸುವವರಾಗಿದ್ದಾರೆ. ದೇವರು ಒಬ್ಬನನ್ನು ತಗ್ಗಿಸುತ್ತಾರೆ, ಒಬ್ಬನನ್ನು ಎತ್ತುತ್ತಾರೆ.
[8] ಯೆಹೋವ ದೇವರ ಕೈಯಲ್ಲಿ ಒಂದು ಪಾತ್ರೆಯು ಇದೆ. ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿ ಇದೆ. ಅದನ್ನು ಅವರು ಹೊಯ್ಯುತ್ತಾರೆ. ಅದರ ಮಡ್ಡಿಯನ್ನು ಸಹ ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು.
[9] ನಾನಾದರೋ ಸದಾ ವರ್ಣಿಸುವವನಾಗಿ ಯಾಕೋಬ ವಂಶದವರ ದೇವರನ್ನು ಸಂಕೀರ್ತಿಸುವೆನು.
[10] ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಹೋಗುವುದು. ಆದರೆ ನೀತಿವಂತನ ಕೊಂಬುಗಳು ಎತ್ತಲಾಗುವುದು.