Skip to content
Opens in a new window
Listen to this chapter • 2:33

[1] ನಾನು ಯೆಹೋವ ದೇವರನ್ನು ಪ್ರೀತಿಸುತ್ತೇನೆ; ಏಕೆಂದರೆ ಅವರು ನನ್ನನ್ನು ಕರುಣಿಸಬೇಕೆಂಬ ನನ್ನ ವಿನಂತಿಯನ್ನೂ ಕೇಳಿದ್ದಾರೆ.

[2] ಅವರು ನನ್ನ ಸ್ವರಕ್ಕೆ ಕಿವಿಗೊಟ್ಟಿದ್ದರಿಂದ ನನ್ನ ಜೀವಮಾನಕಾಲವೆಲ್ಲಾ ಅವರನ್ನು ಬೇಡುವೆನು.

[3] ಮರಣದ ಪಾಶಗಳು ನನ್ನನ್ನು ಆವರಿಸಿಕೊಂಡವು; ನರಕದ ಬಾಧೆಗಳು ನನ್ನ ಮೇಲೆ ಬಂದವು; ಇಕ್ಕಟ್ಟೂ ದುಃಖವೂ ನನ್ನನ್ನು ಹಿಡಿದವು.

[4] ಆಗ ನಾನು, “ಓ ಯೆಹೋವ ದೇವರೇ, ನನ್ನನ್ನು ರಕ್ಷಿಸಿರಿ,” ಎಂದು ಯೆಹೋವ ದೇವರ ಹೆಸರಿನಲ್ಲಿ ಬೇಡಿದೆನು.

[5] ಯೆಹೋವ ದೇವರು ಕೃಪೆಯೂ ನೀತಿಯೂ ಉಳ್ಳವರು ನಮ್ಮ ದೇವರು ಅನುಕಂಪ ಭರಿತರು.

[6] ಯೆಹೋವ ದೇವರು ಸರಳ ಹೃದಯದವರನ್ನು ಕಾಪಾಡುತ್ತಾರೆ; ನಾನು ಕೊರತೆಯಲ್ಲಿದ್ದಾಗ, ಅವರು ನನ್ನನ್ನು ರಕ್ಷಿಸಿದರು.

[7] ನನ್ನ ಮನವೇ, ನೀನು ವಿಶ್ರಾಂತಿಯಿಂದಿರು; ಏಕೆಂದರೆ ಯೆಹೋವ ದೇವರು ನಿನಗೆ ಉಪಕಾರಿಯಾಗಿದ್ದಾರೆ.

[8] ಏಕೆಂದರೆ ಯೆಹೋವ ದೇವರೇ, ನೀವು ನನ್ನನ್ನು ಮರಣಕ್ಕೂ, ನನ್ನ ಕಣ್ಣುಗಳನ್ನು ಕಣ್ಣೀರಿಗೂ, ನನ್ನ ಪಾದಗಳನ್ನು ಬೀಳದಂತೆಯೂ ತಪ್ಪಿಸಿದ್ದೀರಿ.

[9] ಆದ್ದರಿಂದ ಜೀವಿತರ ಲೋಕದಲ್ಲಿ ಯೆಹೋವ ದೇವರ ಮುಂದೆ ನಡೆದುಕೊಳ್ಳುವೆನು.

[10] “ನಾನು ಬಹಳ ಕುಗ್ಗಿ ಹೋಗಿದ್ದೇನೆ,” ಎಂದು ನಾನು ದೇವರಲ್ಲಿ ಭರವಸೆ ಇಟ್ಟಾಗ ಹೇಳಿದೆ.

[11] “ಮನುಷ್ಯರೆಲ್ಲರು ಸುಳ್ಳುಗಾರರು,” ಎಂದು ನಾನು ನಿರಾಶೆಯಿಂದ ಹೇಳಿದ್ದೆನು.

[12] ದೇವರು ನನಗೆ ಮಾಡಿದ ಎಲ್ಲಾ ಉಪಕಾರಗಳಿಗೆ ಬದಲಾಗಿ ನಾನು ಯೆಹೋವ ದೇವರಿಗೆ ಏನು ಮಾಡಲಿ?

[13] ನಾನು ರಕ್ಷಣೆಯ ಪಾತ್ರೆಯನ್ನು ತೆಗೆದುಕೊಂಡು, ಯೆಹೋವ ದೇವರ ಹೆಸರನ್ನು ಕರೆಯುವೆನು.

[14] ನಾನು ಹೊತ್ತ ಹರಕೆಗಳನ್ನು ದೇವಜನರೆಲ್ಲರ ಮುಂದೆಯೇ ದೇವರಿಗೆ ಸಲ್ಲಿಸುವೆನು.

[15] ದೇವರ ಭಕ್ತರ ಮರಣವು ಯೆಹೋವ ದೇವರ ದೃಷ್ಟಿಯಲ್ಲಿ ಅಮೂಲ್ಯವಾಗಿದೆ.

[16] ಯೆಹೋವ ದೇವರೇ, ನಿಜವಾಗಿ ನಾನು ನಿಮ್ಮ ಸೇವಕನು; ಹೌದು, ನನ್ನ ತಾಯಿ ನಿಮಗೆ ಸೇವೆಮಾಡಿದಂತೆ ನಾನು ಸಹ ನಿಮ್ಮ ಸೇವಕನು; ನೀವು ನನ್ನ ಬಂಧನಗಳಿಂದ ನನ್ನನ್ನು ಬಿಡಿಸಿದ್ದೀರಿ.

[17] ನಾನು ನಿಮಗೆ ಕೃತಜ್ಞತೆಯ ಬಲಿಯನ್ನು ಅರ್ಪಿಸುವೆನು; ಯೆಹೋವ ದೇವರ ಹೆಸರನ್ನು ಕರೆಯುವೆನು.

[18] ಯೆರೂಸಲೇಮೇ, ನನ್ನ ಹರಕೆಗಳನ್ನು ದೇವಜನರೆಲ್ಲರ ಮುಂದೆಯೇ ಸಲ್ಲಿಸುವೆನು,

[19] ಯೆಹೋವ ದೇವರ ಆಲಯದ ಅಂಗಳಗಳಲ್ಲಿ ಯೆರೂಸಲೇಮ ಮಧ್ಯದಲ್ಲಿಯೇ ಯೆಹೋವ ದೇವರಿಗೆ ಸಲ್ಲಿಸುವೆನು. ಯೆಹೋವ ದೇವರನ್ನು ಸ್ತುತಿಸಿರಿ.

ಕೀರ್ತನೆಗಳು — Chapters