Skip to content
Opens in a new window
Listen to this chapter • 7:05

[1] ಯೆಹೋವ ದೇವರ ಮಹಾ ಪ್ರೀತಿಯನ್ನು ಯುಗಯುಗಕ್ಕೂ ಹಾಡುವೆನು. ತಲತಲಾಂತರಕ್ಕೂ ನಿಮ್ಮ ನಂಬಿಗಸ್ತಿಕೆಯನ್ನು ನನ್ನ ಬಾಯಿ ತಿಳಿಯಪಡಿಸುವುದು.

[2] ಎಂದೆಂದಿಗೂ ನಿಮ್ಮ ಪ್ರೀತಿಯನ್ನು ಸಾರುವೆನು. ಪರಲೋಕದಲ್ಲಿ ನಿಮ್ಮ ನಂಬಿಗಸ್ತಿಕೆಯನ್ನು ಸ್ಥಿರಪಡಿಸಿದ್ದೀರಿ ಎಂದು ಘೋಷಿಸುವೆನು.

[3] ನೀವು ಹೇಳಿದ್ದೇನಂದರೆ, “ನಾನು ಆಯ್ದುಕೊಂಡವನ ಸಂಗಡ ನಾನು ಒಡಂಬಡಿಕೆ ಮಾಡಿಕೊಂಡಿದ್ದೇನೆ. ನಾನು ನನ್ನ ಸೇವಕನಾದ ದಾವೀದನಿಗೆ ಪ್ರಮಾಣ ಮಾಡಿದ್ದೇನೆ.

[4] ‘ಎಂದೆಂದಿಗೂ ನಿಮ್ಮ ಸಂತತಿಯನ್ನು ಸ್ಥಿರಪಡಿಸುವೆನು ತಲತಲಾಂತರಕ್ಕೂ ನಿಮ್ಮ ಸಿಂಹಾಸನವನ್ನು ಕಟ್ಟುವೆನು.’ ”

[5] ಯೆಹೋವ ದೇವರೇ, ಆಕಾಶಗಳು ನಿಮ್ಮ ಅದ್ಭುತಗಳನ್ನೂ ಪರಿಶುದ್ಧರ ಸಭೆಯಲ್ಲಿ ನಿಮ್ಮ ನಂಬಿಗಸ್ತಿಕೆಯನ್ನೂ ಕೊಂಡಾಡುವುವು.

[6] ಪ್ರಪಂಚದಲ್ಲಿ ಯೆಹೋವ ದೇವರಿಗೆ ಸಮಾನನಾದವನು ಯಾರು? ಪರಲೋಕ ಜೀವಿಗಳಲ್ಲಿ ಯೆಹೋವ ದೇವರಿಗೆ ಸಮಾನನಾದವನು ಯಾರು?

[7] ಅವರು ಪರಿಶುದ್ಧರ ಸಭೆಯಲ್ಲಿ ಭಯಭಕ್ತಿಗೆ ಪಾತ್ರರಾದ ದೇವರು. ತಮ್ಮ ಎಲ್ಲಾ ಪರಿವಾರದವರಿಗಿಂತ ಅವರು ಅತಿಶಯವಾದವರು.

[8] ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮ ಹಾಗೆ ಶಕ್ತರು ಯಾರು ಇದ್ದಾರೆ? ಯೆಹೋವ ದೇವರೇ, ನೀವು ಶಕ್ತರು, ನಿಮ್ಮ ನಂಬಿಗಸ್ತಿಕೆಯು ನಿಮ್ಮನ್ನು ಸುತ್ತುವರಿದಿದೆ.

[9] ನೀವು ಸಮುದ್ರದ ಏರುವಿಕೆಯನ್ನು ಆಳುತ್ತೀರಿ. ಅದರ ತೆರೆಗಳು ಏಳುವಾಗ ಅವುಗಳನ್ನು ಸುಮ್ಮನಿರಿಸುತ್ತೀರಿ.

[10] ಹತನಾದವನಂತೆ ನೀವು ರಹಬನ್ನು ಜಯಿಸಿದ್ದೀರಿ. ನಿಮ್ಮ ಭುಜಬಲದಿಂದ ನಿಮ್ಮ ಶತ್ರುಗಳನ್ನು ಚದರಿಸಿದ್ದೀರಿ.

[11] ಆಕಾಶಗಳು ನಿಮ್ಮವು, ಭೂಮಿಯು ಸಹ ನಿಮ್ಮದು. ಲೋಕವನ್ನೂ ಅದರಲ್ಲಿರುವುದೆಲ್ಲವನ್ನೂ ನೀವು ಉಂಟುಮಾಡಿದ್ದೀರಿ.

[12] ಉತ್ತರವನ್ನೂ ದಕ್ಷಿಣವನ್ನೂ ನೀವೇ ನಿರ್ಮಿಸಿದ್ದೀರಿ. ತಾಬೋರೂ, ಹೆರ್ಮೋನೂ ನಿಮ್ಮ ಹೆಸರಿನಲ್ಲಿ ಉತ್ಸಾಹ ಧ್ವನಿಗೈಯುತ್ತವೆ.

[13] ನಿಮ್ಮ ಭುಜವು ಶಕ್ತಿಯುತವಾದದ್ದು. ನಿಮ್ಮ ಕೈ ಬಲವುಳ್ಳದ್ದು; ನಿಮ್ಮ ಬಲಗೈ ಉನ್ನತವಾದದ್ದು.

[14] ನೀತಿಯೂ, ನ್ಯಾಯವೂ ನಿಮ್ಮ ಸಿಂಹಾಸನದ ಅಸ್ತಿವಾರವಾಗಿವೆ. ಪ್ರೀತಿಯೂ, ಸತ್ಯತೆಯೂ ನಿಮ್ಮ ಮುಂದೆ ಹೋಗುತ್ತವೆ.

[15] ನಿಮ್ಮ ಉತ್ಸಾಹ ಧ್ವನಿಯನ್ನು ಕೇಳಿದ ಜನರು ಧನ್ಯರು. ಯೆಹೋವ ದೇವರೇ, ನಿಮ್ಮ ಸನ್ನಿಧಿಯ ಬೆಳಕಿನಲ್ಲಿ ನಡೆಯುವವರು ಧನ್ಯರು.

[16] ನಿಮ್ಮ ಹೆಸರಿನಿಂದ ದಿನವೆಲ್ಲಾ ಉಲ್ಲಾಸಪಟ್ಟು, ನಿಮ್ಮ ನೀತಿಯಲ್ಲಿ ಅವರು ಉನ್ನತಕ್ಕೇರುವರು.

[17] ಏಕೆಂದರೆ ಅವರ ಬಲವೂ ಮಹಿಮೆಯೂ ನೀವೇ. ನಿಮ್ಮ ಮೆಚ್ಚುಗೆಯಿಂದ ನಮ್ಮ ಬಲವೆಂಬ ಕೊಂಬು ಉನ್ನತವಾಗುವುದು.

[18] ನಮ್ಮ ಗುರಾಣಿಯು ಯೆಹೋವ ದೇವರದೇ. ನಮ್ಮ ಅರಸರು ಇಸ್ರಾಯೇಲರ ಪರಿಶುದ್ಧರಾಗಿರುವರು.

[19] ಆ ಕಾಲದಲ್ಲಿ ನೀವು ದರ್ಶನದಲ್ಲಿ ನಿಮ್ಮ ಭಕ್ತರಿಗೆ ಹೇಳಿದ್ದೇನೆಂದರೆ: “ಒಬ್ಬ ಶೂರನಿಗೆ ನಾನು ಬಲವನ್ನು ಅನುಗ್ರಹಿಸಿದ್ದೇನೆ. ಪ್ರಜೆಗಳಲ್ಲಿ ಒಬ್ಬ ಯೌವನಸ್ಥನನ್ನು ಆರಿಸಿ ಉನ್ನತ ಸ್ಥಾನದಲ್ಲಿಟ್ಟಿದ್ದೇನೆ.

[20] ನನ್ನ ಸೇವಕನಾದ ದಾವೀದನನ್ನು ಕಂಡು, ನನ್ನ ಪರಿಶುದ್ಧ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದ್ದೇನೆ.

[21] ನನ್ನ ಕೈ ಅವನನ್ನು ಪರಿಪಾಲಿಸುವುದು; ನನ್ನ ಭುಜವು ಅವನನ್ನು ಬಲಪಡಿಸುವುದು.

[22] ಶತ್ರುವು ಅವನನ್ನು ಜಯಿಸಲಾರನು. ಯಾವ ದುಷ್ಟನೂ ಅವನನ್ನು ಹಿಂಸೆಪಡಿಸನು.

[23] ಅವನ ಮುಂದೆ ಅವನ ವೈರಿಗಳನ್ನು ಓಡಿಸಿಬಿಡುವೆನು; ಅವನ ವಿರೋಧಿಗಳನ್ನು ದಂಡಿಸುವೆನು.

[24] ನನ್ನ ನಂಬಿಗಸ್ತಿಕೆಯೂ ಪ್ರೀತಿಯೂ ಅವನ ಸಂಗಡ ಇರುವುವು. ನನ್ನ ಹೆಸರಿನಲ್ಲಿ ಅವನ ಬಲವೆಂಬ ಕೊಂಬು ಉನ್ನತವಾಗುವುದು.

[25] ಸಮುದ್ರ ಹಾಗು ನದಿಗಳ ಮೇಲೆ ಅವನ ಬಲಗೈಯನ್ನೂ ಇರಿಸುವೆನು.

[26] ಅವನು, ‘ನೀವು ನನ್ನ ತಂದೆಯೂ ನನ್ನ ದೇವರೂ ನನ್ನ ರಕ್ಷಣೆಯ ಬಂಡೆಯೂ ಆಗಿದ್ದೀರಿ’ ಎಂದು ನನಗೆ ಮೊರೆಯಿಡುವನು.

[27] ನಾನು ಆತನನ್ನು ನನ್ನ ಚೊಚ್ಚಲ ಮಗನನ್ನಾಗಿಯೂ ಭೂಮಿಯ ಅರಸರಿಗಿಂತ ಉನ್ನತನನ್ನಾಗಿಯೂ ಮಾಡಿಕೊಳ್ಳುವೆನು.

[28] ಎಂದೆಂದಿಗೂ ಆತನಿಗೋಸ್ಕರ ನನ್ನ ಪ್ರೀತಿಯನ್ನು ಕಾದಿಡುವೆನು. ನನ್ನ ಒಡಂಬಡಿಕೆಯು ಆತನೊಂದಿಗೆ ದೃಢವಾಗಿರುವುದು.

[29] ಆತನ ಸಂತತಿಯನ್ನು ಸಹ ಎಂದೆಂದಿಗೂ ಆತನ ಸಿಂಹಾಸನವನ್ನು ಆಕಾಶ ಇರುವವರೆಗೂ ಮಾಡುವೆನು.

[30] “ಆತನ ಸಂತತಿಯು ನನ್ನ ನಿಯಮವನ್ನು ಬಿಟ್ಟು, ನನ್ನ ಶಾಸನಗಳನ್ನು ಅನುಸರಿಸಿ ನಡೆಯದೆ,

[31] ಅವರು ನನ್ನ ತೀರ್ಪುಗಳನ್ನು ಮುರಿದು, ನನ್ನ ಆಜ್ಞೆಗಳನ್ನು ಕೈಗೊಳ್ಳದೆ ಹೋದರೆ,

[32] ಕೋಲಿನಿಂದ ಅವರ ದ್ರೋಹವನ್ನೂ ಪೆಟ್ಟುಗಳಿಂದ ಅವರ ಅಕ್ರಮವನ್ನೂ ದಂಡಿಸುವೆನು.

[33] ಆದರೂ ನನ್ನ ಪ್ರೀತಿ, ಕರುಣೆಯನ್ನು ಆತನಿಂದ ಸಂಪೂರ್ಣವಾಗಿ ತೊಲಗಿಸೆನು. ಇಲ್ಲವೆ ನನ್ನ ನಂಬಿಗಸ್ತಿಕೆಯಿಂದ ನಾನು ಜಾರಿಹೋಗೆನು.

[34] ನನ್ನ ಒಡಂಬಡಿಕೆಯನ್ನು ನಾನು ಮುರಿಯೆನು. ಇಲ್ಲವೆ ನನ್ನ ತುಟಿಗಳಿಂದ ಹೊರಟದ್ದನ್ನು ಬದಲಾಯಿಸೆನು.

[35] ಒಂದೇ ಸಾರಿ ನನ್ನ ಪರಿಶುದ್ಧತ್ವದಿಂದ ಆಣೆಯಿಟ್ಟು ಹೇಳಿದ್ದೇನೆ. ದಾವೀದನಿಗೆ ಸುಳ್ಳಾಡೆನು.

[36] ಆತನ ಸಂತತಿಯು ಯುಗಯುಗಕ್ಕೂ ಇರುವುದು. ಆತನ ಸಿಂಹಾಸನವು ನನ್ನ ಮುಂದೆ ಸೂರ್ಯನ ಹಾಗೆಯೂ ಇರುವುದು.

[37] ಚಂದ್ರನ ಹಾಗೆ ಅದು ಯುಗಯುಗಕ್ಕೂ ಸ್ಥಿರವಾಗಿರುವುದು; ಆಕಾಶದಲ್ಲಿರುವ ಸಾಕ್ಷಿಯ ಹಾಗೆ ನಂಬಿಗಸ್ತಿಕೆಯುಳ್ಳದ್ದಾಗಿರುವುದು.”

[38] ಆದರೆ ನೀವು ತಿರಸ್ಕರಿಸಿ ಬಿಟ್ಟುಬಿಟ್ಟ, ನಿಮ್ಮ ಅಭಿಷಿಕ್ತನಿಗೆ ವಿರೋಧವಾಗಿ ಬೇಸರವಾದಿರಿ.

[39] ನಿಮ್ಮ ಸೇವಕನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಅಸಡ್ಡೆಮಾಡಿ, ಅವನ ಕಿರೀಟವನ್ನು ಮಣ್ಣುಪಾಲು ಮಾಡಿದ್ದೀರಿ.

[40] ಅವನ ಗೋಡೆಗಳನ್ನೆಲ್ಲಾ ಮುರಿದು, ಅವನ ಕೋಟೆಗಳನ್ನು ಹಾಳುಮಾಡಲು ಅನುಮತಿಸಿದ್ದೀರಿ.

[41] ದಾರಿಯಲ್ಲಿ ಹೋಗುವವರು ಅವನನ್ನು ಕೊಳ್ಳೆ ಹೊಡೆಯುತ್ತಾರೆ. ತನ್ನ ನೆರೆಯವರಿಗೆ ಅವನು ನಿಂದೆಯಾಗಿದ್ದಾನೆ.

[42] ಅವನ ವೈರಿಗಳ ಬಲಗೈ ಉನ್ನತವಾಗಿದೆ. ಅವನ ವೈರಿಗಳೆಲ್ಲಾ ಆನಂದಿಸುತ್ತಿದ್ದಾರೆ.

[43] ಅವನ ಖಡ್ಗದ ಮೊನೆ ಮೊಂಡಾಗಿದೆ. ಯುದ್ಧದಲ್ಲಿ ನೀವು ಅವನನ್ನು ನಿಲ್ಲುವಂತೆ ಮಾಡಲಿಲ್ಲ.

[44] ಅವನ ಪ್ರಭೆ ಮುಗಿದು ಹೋಗಿದೆ. ಅವನ ಸಿಂಹಾಸನ ಉರುಳಿಬಿಟ್ಟಿದೆ.

[45] ಅವನ ಯೌವನದ ದಿವಸಗಳು ಕಡಿಮೆಯಾಗಿದೆ. ನಾಚಿಕೆ ಎಂಬ ವಸ್ತ್ರ ಅವನನ್ನು ಮುಚ್ಚಲು ನೀವು ಅನುಮತಿಸಿದ್ದೀರಿ.

[46] ಯೆಹೋವ ದೇವರೇ, ಇನ್ನೂ ಎಷ್ಟರವರೆಗೆ? ಸದಾಕಾಲಕ್ಕೆ ನೀವು ಅಡಗಿಕೊಳ್ಳುವಿರಾ? ನಿಮ್ಮ ಬೇಸರವು ಬೆಂಕಿಯ ಹಾಗೆ ಉರಿಯುವುದು ಎಷ್ಟರವರೆಗೆ?

[47] ನನ್ನ ಆಯುಸ್ಸು ಎಷ್ಟು ಕಡಿಮೆ ಎಂದು ಜ್ಞಾಪಕಮಾಡಿಕೊಳ್ಳಿರಿ. ನಿರ್ಮಿಸಿದ ಎಲ್ಲಾ ಮನುಷ್ಯರೂ ವ್ಯರ್ಥವಾಗಿದ್ದಾರೆ.

[48] ಮರಣವನ್ನು ಕಾಣದೆ ಬದುಕುವಂಥವರು ಯಾರು? ಸಮಾಧಿಯ ಶಕ್ತಿಯಿಂದ ಪ್ರಾಣವನ್ನು ತಪ್ಪಿಸಿಕೊಳ್ಳುವಂಥವರು ಯಾರು?

[49] ಯೆಹೋವ ದೇವರೇ, ನಿಮ್ಮ ಸತ್ಯದಲ್ಲಿ ನೀವು ದಾವೀದನಿಗೆ ಆಣೆಯಿಟ್ಟೆ. ನಿಮ್ಮ ಮೊದಲಿನ ಮಹಾ ಪ್ರೀತಿ ಎಲ್ಲಿ?

[50] ಯೆಹೋವ ದೇವರೇ, ನಿಮ್ಮ ಸೇವಕನು ನಿಂದೆ ಹೊಂದಿರುವದನ್ನು ನೆನಸಿಕೊಳ್ಳಿರಿ. ಎಲ್ಲಾ ರಾಷ್ಟ್ರಗಳ ಅಪಹಾಸ್ಯವನ್ನು ನಾನು ಹೇಗೆ ಸಹಿಸಿದೆನೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.

[51] ಯೆಹೋವ ದೇವರೇ, ನಿಮ್ಮ ಶತ್ರುಗಳು ನಿಂದಿಸುತ್ತಿದ್ದಾರೆ. ನಿಮ್ಮ ಅಭಿಷಿಕ್ತನ ಹೆಜ್ಜೆ ಹೆಜ್ಜೆಗೂ ನಿಂದಿಸುತ್ತಾರಲ್ಲಾ?

[52] ಯೆಹೋವ ದೇವರಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್, ಆಮೆನ್.

ಕೀರ್ತನೆಗಳು — Chapters