Skip to content
Opens in a new window
Listen to this chapter • 4:00

[1] ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ; ಅವರು ಒಳ್ಳೆಯವರು. ಅವರ ಪ್ರೀತಿ ಶಾಶ್ವತವಾಗಿರುವುದು.

[2] “ದೇವರ ಪ್ರೀತಿಯು ಯುಗಯುಗಕ್ಕೂ ಇದೆ,” ಎಂದು ಇಸ್ರಾಯೇಲ್ ಹೇಳಲಿ.

[3] “ದೇವರ ಪ್ರೀತಿಯು ಸದಾಕಾಲವೂ ಇರುವುದು,” ಎಂದು ಆರೋನನ ಮನೆಯವರು ಹೇಳಲಿ.

[4] “ದೇವರ ಪ್ರೀತಿಯು ಸದಾಕಾಲವೂ ಇರುವುದು,” ಎಂದು ಯೆಹೋವ ದೇವರಿಗೆ ಭಯಪಡುವವರು ಹೇಳಲಿ.

[5] ಇಕ್ಕಟ್ಟಿನೊಳಗಿಂದ ಯೆಹೋವ ದೇವರಿಗೆ ಕೂಗಿದೆನು; ಯೆಹೋವ ದೇವರು ಉತ್ತರಕೊಟ್ಟು, ನನ್ನನ್ನು ವಿಶಾಲವಾದ ಸ್ಥಳಕ್ಕೆ ತಂದರು.

[6] ಯೆಹೋವ ದೇವರು ನನ್ನ ಪರವಾಗಿದ್ದಾರೆ, ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಬಲ್ಲನು?

[7] ಯೆಹೋವ ದೇವರು ನನ್ನೊಂದಿಗಿದ್ದಾರೆ, ಅವರು ನನಗೆ ಸಹಾಯಕರು; ನಾನು ವೈರಿಗಳ ಮೇಲೆ ಜಯ ಸಾಧಿಸುವೆನು.

[8] ಮನುಷ್ಯರಲ್ಲಿ ಭರವಸೆ ಇಡುವುದಕ್ಕಿಂತ ಯೆಹೋವ ದೇವರಲ್ಲಿ ಆಶ್ರಯ ಪಡೆಯುವುದು ಒಳ್ಳೆಯದು.

[9] ಅಧಿಪತಿಗಳಲ್ಲಿ ಭರವಸೆ ಇಡುವುದಕ್ಕಿಂತ ಯೆಹೋವ ದೇವರ ಆಶ್ರಯ ಪಡೆಯುವುದು ಒಳ್ಳೆಯದು.

[10] ಎಲ್ಲಾ ರಾಷ್ಟ್ರದವರು ನನ್ನನ್ನು ಸುತ್ತಿಕೊಂಡರು; ಆದರೆ ನಾನು ಯೆಹೋವ ದೇವರ ಹೆಸರಿನಲ್ಲಿ ಅವರನ್ನು ದಂಡಿಸುವೆನು.

[11] ಅವರು ನನ್ನನ್ನು ಎಲ್ಲಾ ದಿಕ್ಕುಗಳಿಂದ ಸುತ್ತಿಕೊಂಡರು; ಯೆಹೋವ ದೇವರ ಹೆಸರಿನಲ್ಲಿ ಅವರನ್ನು ಸೋಲಿಸುವೆನು.

[12] ಜೇನುನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ, ಅವರು ಮುಳ್ಳಿನ ಬೆಂಕಿಯ ಹಾಗೆ ಕ್ಷಣಮಾತ್ರದಲ್ಲಿ ಇಲ್ಲವಾಗಿ ಹೋದರು; ಯೆಹೋವ ದೇವರ ಹೆಸರಿನಲ್ಲಿ ನಾನು ಅವರನ್ನು ಸೋಲಿಸುವೆನು.

[13] ನಾನು ಬೀಳುವ ಹಾಗೆ ವೈರಿಯು ನನ್ನನ್ನು ನೂಕಿದನು; ಆದರೆ ಯೆಹೋವ ದೇವರು ನನಗೆ ಸಹಾಯ ಮಾಡಿದರು.

[14] ನನ್ನ ಬಲವೂ, ಬೆಂಬಲವೂ ಯೆಹೋವ ದೇವರೇ; ಅವರೇ ನನಗೆ ರಕ್ಷಣೆಯಾದರು.

[15] ಜಯಘೋಷವೂ ಹರ್ಷಧ್ವನಿಯೂ ನೀತಿವಂತರ ಗುಡಾರಗಳಲ್ಲಿ ಪ್ರತಿಧ್ವನಿಸುತ್ತಿರುವುದು; ಯೆಹೋವ ದೇವರ ಬಲಗೈ ಪರಾಕ್ರಮವನ್ನು ನಡೆಸಿದೆ.

[16] ಯೆಹೋವ ದೇವರ ಬಲಗೈ ಎತ್ತರವಾಗಿ ಎತ್ತಲಾಗಿದೆ; ಯೆಹೋವ ದೇವರ ಬಲಗೈ ಪರಾಕ್ರಮವನ್ನು ನಡೆಸಿದೆ.

[17] ನಾನು ಸಾಯದೆ ಬದುಕಿರುವೆನು, ಯೆಹೋವ ದೇವರು ಮಾಡಿದ್ದನ್ನು ಸಾರುವೆನು.

[18] ಏಕೆಂದರೆ ಯೆಹೋವ ದೇವರು ನನ್ನನ್ನು ಕಠಿಣವಾಗಿ ಶಿಕ್ಷಿಸಿದರು; ಆದರೆ ಮರಣಕ್ಕೆ ನನ್ನನ್ನು ಒಪ್ಪಿಸಲಿಲ್ಲ.

[19] ನೀತಿಯ ಬಾಗಿಲುಗಳನ್ನು ನನಗೆ ತೆರೆಯಿರಿ; ಅವುಗಳೊಳಗೆ ಪ್ರವೇಶಿಸಿ ಯೆಹೋವ ದೇವರಿಗೆ ಧನ್ಯವಾದ ಸಲ್ಲಿಸು.

[20] ಇದೇ ಯೆಹೋವ ದೇವರ ಬಾಗಿಲು; ನೀತಿವಂತರು ಇದರಲ್ಲಿ ಪ್ರವೇಶಿಸುವರು.

[21] ನಿಮಗೆ ಕೃತಜ್ಞತಾವಂದನೆ ಸಲ್ಲಿಸುವೆನು; ಏಕೆಂದರೆ ನನಗೆ ನೀವು ಉತ್ತರಕೊಟ್ಟು, ನನಗೆ ರಕ್ಷಣೆಯಾದಿರಿ.

[22] ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.

[23] ಇದು ಯೆಹೋವ ದೇವರಿಂದಲೇ ಉಂಟಾಯಿತು; ಇದು ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಯಿತು.

[24] ಯೆಹೋವ ದೇವರು ಮಾಡಿದ ದಿನವು ಇದೇ; ಇದರಲ್ಲಿ ನಾವು ಉಲ್ಲಾಸಿಸಿ ಸಂತೋಷಪಡೋಣ.

[25] ಯೆಹೋವ ದೇವರೇ ನಮ್ಮನ್ನು ರಕ್ಷಿಸಿರಿ, ಯೆಹೋವ ದೇವರೇ ನಮಗೆ ಜಯಕೊಡಿರಿ.

[26] ಯೆಹೋವ ದೇವರ ಹೆಸರಿನಲ್ಲಿ ಬರುವವನು ಧನ್ಯನು; ಯೆಹೋವ ದೇವರ ಆಲಯದೊಳಗಿಂದ ನಾವು ನಿಮ್ಮನ್ನು ಆಶೀರ್ವದಿಸುವೆವು.

[27] ಯೆಹೋವ ದೇವರು ದೇವರಾಗಿದ್ದಾನೆ; ನಮ್ಮ ಮೇಲೆ ಅವರ ಬೆಳಕನ್ನು ಪ್ರಕಾಶಿಸುವಂತೆ ಮಾಡಿದ್ದಾರೆ. ಕೊಂಬೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬಲಿಪೀಠದ ಕೊಂಬುಗಳವರೆಗೆ ಮೆರವಣಿಗೆಯಾಗಿ ಬನ್ನಿರಿ.

[28] ನೀವು ನನ್ನ ದೇವರಾಗಿದ್ದೀರಿ, ನಿಮಗೆ ಉಪಕಾರ ಸಲ್ಲಿಸುವೆನು; ನೀವು ನನ್ನ ದೇವರು; ನಿಮ್ಮನ್ನು ನಾನು ಉನ್ನತಪಡಿಸುವೆನು.

[29] ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ; ಅವರು ಒಳ್ಳೆಯವರು; ಅವರ ಪ್ರೀತಿ ಶಾಶ್ವತವಾಗಿರುವುದು.

ಕೀರ್ತನೆಗಳು — Chapters