Skip to content
Opens in a new window
Listen to this chapter • 2:07

[1] ಯೆಹೋವ ದೇವರು ಮಹೋನ್ನತರೂ ನಮ್ಮ ದೇವರು ತಮ್ಮ ಪರಿಶುದ್ಧ ಪರ್ವತ ಪಟ್ಟಣದಲ್ಲಿ ಬಹಳವಾಗಿ ಸ್ತುತಿಗೆ ಪಾತ್ರರಾಗಿದ್ದಾರೆ.

[2] ಉತ್ತರ ದಿಕ್ಕಿನಲ್ಲಿರುವ ಮಹಾರಾಜರ ಪಟ್ಟಣವಾದ ಚೀಯೋನ್ ಪರ್ವತವು ಸುಂದರವಾಗಿ ಚಾಪೋನಿನ ಶಿಖರದಂತೆ ಇಡೀ ಭೂಮಿಗೆ ಸಂತೋಷಕರವಾದದ್ದಾಗಿದೆ.

[3] ದೇವರು ಅದರ ಅರಮನೆಗಳಲ್ಲಿ ವಾಸಿಸುತ್ತಾರೆ. ದೇವರು ತಾವೇ ಅದರ ಭದ್ರಕೋಟೆಯಾಗಿದ್ದಾರೆ.

[4] ಏಕೆಂದರೆ, ಇಗೋ, ಅರಸರು ಕೂಡಿಬಂದರು. ಅವರು ಒಟ್ಟಾಗಿ ದಾಳಿಮಾಡಲು ಬಂದರು.

[5] ಅವರು ಪಟ್ಟಣವನ್ನು ಕಂಡು, ಬೆರಗಾದರು. ಅವರು ಭಯಪಟ್ಟು ಓಡಿಹೋದರು.

[6] ಅಲ್ಲಿ ನಡುಕವವೂ ಹೆರುವವಳ ಹಾಗೆ ನೋವೂ ಅವರನ್ನು ಹಿಡಿಯಿತು.

[7] ಪೂರ್ವದಿಕ್ಕಿನ ಗಾಳಿಯಿಂದ ತಾರ್ಷೀಷ್ ಹಡಗುಗಳನ್ನು ನೀವು ಒಡೆಯುತ್ತೀರಲ್ಲಾ.

[8] ನಾವು ಹೇಗೆ ಕೇಳಿದೆವೋ ಹಾಗೆಯೇ ಕಣ್ಣಾರೆ ಕಂಡೆವು, ಸೇನಾಧೀಶ್ವರ ಯೆಹೋವ ದೇವರ ಪಟ್ಟಣವಾಗಿರುವ, ನಮ್ಮ ದೇವರ ಪಟ್ಟಣದಲ್ಲಿ ಇದನ್ನು ಕಂಡೆವು: ದೇವರು ಪಟ್ಟಣವನ್ನು ಎಂದೆಂದಿಗೂ ಸ್ಥಿರಪಡಿಸುವರು.

[9] ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯನ್ನು ನಿಮ್ಮ ಮಂದಿರದಲ್ಲಿ ನಾವು ಸ್ಮರಿಸುತ್ತೇವೆ.

[10] ದೇವರೇ, ನಿಮ್ಮ ಹೆಸರಿಗೆ ತಕ್ಕಂತೆಯೇ ನಿಮ್ಮ ಸ್ತೋತ್ರವು ಭೂಮಿಯ ಕಟ್ಟಕಡೆಯವರೆಗೂ ಇದೆ; ನಿಮ್ಮ ಬಲಗೈ ನೀತಿಯಿಂದ ತುಂಬಿದೆ.

[11] ನಿಮ್ಮ ನ್ಯಾಯ ನಿರ್ಣಯಗಳ ನಿಮಿತ್ತ ಚೀಯೋನ್ ಪರ್ವತವು ಸಂತೋಷಪಡಲಿ; ಯೆಹೂದ ಪುತ್ರಿಯರು ಉಲ್ಲಾಸಪಡಲಿ.

[12] ಚೀಯೋನನ್ನು ಸುತ್ತಿ ಅದರ ಸುತ್ತಲೂ ತಿರುಗಾಡಿ ಅದರ ಗೋಪುರಗಳನ್ನು ಎಣಿಸಿರಿ.

[13] ಮುಂದಿನ ತಲಾಂತರಕ್ಕೆ ತಿಳಿಸುವುದಕ್ಕೋಸ್ಕರ ಅದರ ಗೋಪುರಗಳನ್ನು ಕಣ್ಣಿಟ್ಟು ನೋಡಿರಿ, ಅದರ ಅರಮನೆಗಳನ್ನು ಲಕ್ಷಿಸಿರಿ.

[14] ಏಕೆಂದರೆ, ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವರಾಗಿದ್ದಾರೆ; ಅವರು ಅಂತ್ಯದವರೆಗೂ ನಮ್ಮ ಮಾರ್ಗದರ್ಶಿಯಾಗಿರುವರು.

ಕೀರ್ತನೆಗಳು — Chapters