[1] ದೇವರಲ್ಲಿಯೇ ನನ್ನ ಪ್ರಾಣಕ್ಕೆ ಶಾಂತಿ, ನನ್ನ ರಕ್ಷಣೆಯು ದೇವರಿಂದಲೇ.
[2] ದೇವರು ಮಾತ್ರವೇ ನನ್ನ ಬಂಡೆಯೂ ನನ್ನ ರಕ್ಷಣೆಯೂ, ನನ್ನ ಕೋಟೆಯೂ ಆಗಿದ್ದಾರೆ. ನಾನೆಂದಿಗೂ ಕದಲೆನು.
[3] ಹಾನಿಮಾಡುವವರೇ, ಎಷ್ಟರವರೆಗೆ ನೀವು ದಾಳಿಮಾಡುವಿರಿ. ಬಾಗುವ ಗೋಡೆಯಂತೆಯೂ, ಅಲ್ಲಾಡುವ ಬೇಲಿಯಂತೆಯೂ ನನ್ನನ್ನು ಕೆಡವಲು ಯತ್ನಿಸುವಿರಾ?
[4] ಅವರು ನನ್ನನ್ನು ಉನ್ನತ ಸ್ಥಾನದಿಂದ ದಬ್ಬುವುದಕ್ಕೆ ಆಲೋಚಿಸುತ್ತಿದ್ದಾರೆ. ಅವರು ಸುಳ್ಳನ್ನು ಇಷ್ಟಪಡುತ್ತಾರೆ; ತಮ್ಮ ಬಾಯಿಂದ ಆಶೀರ್ವದಿಸಿ, ಹೃದಯದಲ್ಲಿ ಶಪಿಸುತ್ತಾರೆ.
[5] ಹೌದು, ದೇವರಲ್ಲಿಯೇ ನನ್ನ ಪ್ರಾಣಕ್ಕೆ ಶಾಂತಿ. ನನ್ನ ನಿರೀಕ್ಷೆಯು ದೇವರಿಂದಲೇ.
[6] ದೇವರೇ ನನ್ನ ಬಂಡೆಯೂ ನನ್ನ ರಕ್ಷಣೆಯೂ, ನನ್ನ ಕೋಟೆಯೂ ಆಗಿದ್ದಾರೆ. ನಾನೆಂದಿಗೂ ಕದಲೆನು.
[7] ದೇವರು ನನ್ನ ರಕ್ಷಣೆಗೂ ನನ್ನ ಗೌರವಕ್ಕೂ ಆಧಾರವಾಗಿದ್ದಾರೆ. ದೇವರು ನನ್ನ ಬಲವಾದ ಬಂಡೆಯೂ ನನ್ನ ಆಶ್ರಯವೂ ಆಗಿದ್ದಾರೆ.
[8] ಜನರೇ, ಎಲ್ಲಾ ಕಾಲದಲ್ಲಿಯೂ ದೇವರಲ್ಲಿ ಭರವಸೆ ಇಡಿರಿ. ನಿಮ್ಮ ಹೃದಯವನ್ನು ದೇವರ ಮುಂದೆ ಒಯ್ಯಿರಿ. ದೇವರು ನಮಗೆ ಆಶ್ರಯವಾಗಿದ್ದಾರೆ.
[9] ಸಾಮಾನ್ಯ ಜನರು ಬರೀ ಉಸಿರೇ, ಉನ್ನತ ಜನರು ಬರೀ ಸುಳ್ಳೇ. ತಕ್ಕಡಿಯಲ್ಲಿ ತೂಗಿದರೆ ಅವರೇನೂ ಇಲ್ಲ, ಎಲ್ಲರೂ ಬರೀ ಉಸಿರೇ.
[10] ಅನ್ಯಾಯದ ಸುಲಿಗೆಯಲ್ಲಿ ಭರವಸೆ ಇಡಬೇಡಿರಿ. ಸೂರೆಮಾಡಿದ್ದರಲ್ಲಿ ಗರ್ವಪಡಬೇಡಿರಿ. ಆಸ್ತಿಯು ಹೆಚ್ಚಾದರೆ ಅದರ ಮೇಲೆ ಮನಸ್ಸಿಡಬೇಡಿರಿ.
[11] ಒಂದು ಸಾರಿ ದೇವರು ಮಾತನಾಡಿದ್ದಾರೆ. ನಾನು ಎರಡು ಸಾರಿ ಇದನ್ನು ಹೀಗೆಂದು ಕೇಳಿದ್ದೇನೆ: “ದೇವರೇ, ಶಕ್ತಿಯು ನಿಮಗೇ ಸೇರಿದೆ.
[12] ಯೆಹೋವ ದೇವರೇ, ನಿಮ್ಮಲ್ಲಿ ಒಡಂಬಡಿಕೆಯ ಪ್ರೀತಿ ಇದೆ. ನೀವು ಪ್ರತಿ ಮನುಷ್ಯನಿಗೂ ಅವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುತ್ತೀರಿ.”