[1] ದೇವರು ಕ್ರಿಯಾಶೀಲರಾಗಲಿ. ಅವರ ಶತ್ರುಗಳು ಚದರಿಹೋಗಲಿ. ದೇವರನ್ನು ವಿರೋಧಿಸುವವರು ಅವರ ಸಮ್ಮುಖದಿಂದ ಓಡಿಹೋಗಲಿ.
[2] ಗಾಳಿಯಿಂದ ಹೊಗೆ ಹಾರಿಹೋಗುವಂತೆ ಅವರು ಹಾರಿಹೋಗಲಿ. ಮೇಣವು ಬೆಂಕಿಯ ಮುಂದೆ ಕರಗುವಂತೆ, ದುಷ್ಟರು ದೇವರ ಮುಂದೆ ನಾಶವಾಗಲಿ.
[3] ಆದರೆ ನೀತಿವಂತರು ಸಂತೋಷಿಸಲಿ. ದೇವರ ಮುಂದೆ ಉಲ್ಲಾಸಪಡಲಿ. ಹೌದು, ಅವರು ಹರ್ಷಾನಂದರಾಗಲಿ.
[4] ದೇವರಿಗೆ ಹಾಡಿರಿ, ದೇವರ ಹೆಸರಿಗೆ ಸ್ತುತಿಗಳನ್ನು ಹಾಡಿರಿ. ಮೇಘಾರೂಢರಾಗಿರುವ ದೇವರನ್ನು ಕೊಂಡಾಡಿರಿ. ಅವರ ಹೆಸರು ಯೆಹೋವ ದೇವರು, ಅವರ ಮುಂದೆ ಉಲ್ಲಾಸಪಡಿರಿ.
[5] ದೇವರು ತಮ್ಮ ಪರಿಶುದ್ಧ ಸ್ಥಳದಲ್ಲಿ ದಿಕ್ಕಿಲ್ಲದವರಿಗೆ ತಂದೆ, ವಿಧವೆಯರಿಗೆ ರಕ್ಷಕರಾಗಿದ್ದಾರೆ.
[6] ದೇವರು ಒಂಟಿಗರನ್ನು ಕುಟುಂಬಸ್ತರನ್ನಾಗಿ ಮಾಡುತ್ತಾರೆ. ಸೆರೆಯವರನ್ನು ಹರ್ಷಗೊಳಿಸಿ ಬಿಡುಗಡೆ ಮಾಡುತ್ತಾರೆ. ಆದರೆ ಎದುರು ಬೀಳುವವರು ಒಣಭೂಮಿಯಲ್ಲಿ ವಾಸಿಸುತ್ತಾರೆ.
[7] ದೇವರೇ, ನೀವು ನಿಮ್ಮ ಜನರ ಮುಂದೆ ಹೊರಟು ಕಾಡಿನಲ್ಲಿ ನಡೆದಾಗ,
[8] ಭೂಮಿಯು ಕದಲಿತು, ಆಕಾಶಗಳು ಸಹ ನಿಮ್ಮ ಮುಂದೆ ಮಳೆಗರೆದವು. ಇಸ್ರಾಯೇಲರ ದೇವರ ಮುಂದೆ, ಹೌದು, ದೇವರ ಮುಂದೆಯೇ ಸೀನಾಯಿ ಸಹ ಕದಲಿತು.
[9] ದೇವರೇ, ನೀವು ಹೇರಳವಾಗಿ ಮಳೆಯನ್ನು ಸುರಿಸಿ, ದಣಿದ ನಿಮ್ಮ ಬಾಧ್ಯತೆಯನ್ನು ನೀವು ಉತ್ಸಾಹಪಡಿಸಿದಿರಿ.
[10] ನಿಮ್ಮ ಪ್ರಜೆಗಳು ಅದರಲ್ಲಿ ವಾಸಮಾಡಿದರು. ದೇವರೇ, ನಿಮ್ಮ ಒಳ್ಳೆಯತನದಿಂದ ಬಡವರಿಗೋಸ್ಕರ ಒದಗಿಸಿದ್ದೀರಿ.
[11] ಯೆಹೋವ ದೇವರು ವಾಕ್ಯವನ್ನು ಕೊಟ್ಟರು. ಆ ವಾಕ್ಯವನ್ನು ಹೀಗೆಂದು ಪ್ರಕಟಿಸಿದ ಮಹಿಳೆಯರ ಗುಂಪು ದೊಡ್ಡದಾಗಿತ್ತು:
[12] “ಸೈನ್ಯದೊಡನೆ ಅರಸರು ಓಡಿಹೋದರು. ಪಾಳೆಯದಲ್ಲಿರುವ ಮಹಿಳೆಯರು ಕೊಳ್ಳೆಯನ್ನು ಹಂಚಿಕೊಳ್ಳುವರು.
[13] ನೀವು ಪಾಳೆಯದ ಬೆಂಕಿಯ ಬಳಿ ಮಲಗಿದರೂ, ಪಾರಿವಾಳದ ರೆಕ್ಕೆಗಳು ಬೆಳ್ಳಿಯಿಂದಲೂ, ಅದರ ಗರಿಗಳು ಬಂಗಾರದಿಂದಲೂ ಹೊಳೆಯುವಂತಿರುವಿರಿ.”
[14] ಸರ್ವಶಕ್ತರಾದ ದೇವರು ಅರಸರನ್ನು ಅಲ್ಲಿ ಚದರಿಸಿದಾಗ ಸಲ್ಮೋನಿನಲ್ಲಿ ಬಿಳೀ ಹಿಮ ಬಿದ್ದಂತಿತ್ತು.
[15] ಬಾಷಾನ್ ಬೆಟ್ಟವು ದೇವರ ಬೆಟ್ಟದಂತೆ ಇದೆ; ಬಾಷಾನ್ ಬೆಟ್ಟವು ಉನ್ನತ ಬೆಟ್ಟವಾಗಿದೆ.
[16] ಉನ್ನತ ಬೆಟ್ಟಗಳೇ, ಏಕೆ ಕುಣಿಯುತ್ತೀರಿ? ದೇವರು ನಿವಾಸಕ್ಕಾಗಿ ಅಪೇಕ್ಷಿಸುವ ಬೆಟ್ಟವು ಇದೇ ಹೌದು, ಯೆಹೋವ ದೇವರು ಅದರಲ್ಲಿ ಸದಾಕಾಲವೂ ವಾಸಿಸುವರು.
[17] ದೇವರಿಗೆ ಸಹಸ್ರಾರು ಮಾತ್ರವಲ್ಲ ಲಕ್ಷಾಂತರ ರಥಗಳು ಇವೆ. ಕರ್ತ ಆಗಿರುವ ಯೆಹೋವ ದೇವರು ಅವುಗಳ ಸಮೇತವಾಗಿ ಸೀನಾಯಿ ಬೆಟ್ಟದಲ್ಲಿದ್ದ ಹಾಗೆ ಪವಿತ್ರಾಲಯದಲ್ಲಿದ್ದಾರೆ.
[18] ನೀವು ಅನೇಕ ಸೆರೆಯವರ ಹಿಡಿದುಕೊಂಡು ಉನ್ನತಕ್ಕೆ ಹೋದಾಗ, ಯೆಹೋವ ದೇವರು ತಿರುಗಿಬೀಳುವವರ ಮಧ್ಯದಲ್ಲಿ ಸಹ ನಿವಾಸಿಸುವಂತೆ ಆ ತಿರುಗಿಬಿದ್ದ ಮನುಷ್ಯರಿಂದ ದಾನಗಳನ್ನು ಅಂಗೀಕರಿಸಿದ್ದೀರಿ.
[19] ಪ್ರತಿದಿನವೂ ನಮ್ಮ ಭಾರವನ್ನು ಹೊರುವ ಕರ್ತದೇವರಿಗೆ ಸ್ತೋತ್ರ. ನಮ್ಮನ್ನು ರಕ್ಷಿಸುವ ದೇವರು ಸ್ತುತಿಹೊಂದಲಿ.
[20] ನಮ್ಮ ದೇವರು ರಕ್ಷಣೆಯ ದೇವರಾಗಿದ್ದಾರೆ. ಸಾರ್ವಭೌಮ ಯೆಹೋವ ದೇವರು ಮರಣದಿಂದ ಬಿಡುಗಡೆ ಮಾಡುತ್ತಾರೆ.
[21] ದೇವರು ತಮ್ಮ ಶತ್ರುಗಳ ತಲೆಯನ್ನೂ, ತನ್ನ ಅಪರಾಧಗಳಲ್ಲಿ ಇನ್ನೂ ಮುಂದುವರಿಯುವವರ ಕೂದಲುಳ್ಳ ಮಂಡೆಯನ್ನೂ ಗಾಯಮಾಡುವರು.
[22] ಯೆಹೋವ ದೇವರು ಹೀಗೆ ಹೇಳುತ್ತಾರೆ, “ಬಾಷಾನಿನಿಂದ ಅವರನ್ನು ತಿರುಗಿ ಬರಮಾಡುವೆನು; ಸಮುದ್ರದ ಅಗಾಧಗಳಿಂದ ಜನರನ್ನು ತಿರುಗಿ ಬರಮಾಡುವೆನು.
[23] ಆಗ ನಿಮ್ಮ ಪಾದಗಳು ನಿಮ್ಮ ವೈರಿಗಳ ರಕ್ತದ ಮೇಲಿರಲಿ. ನಾಯಿಗಳು ಅದನ್ನು ನೆಕ್ಕಲಿ.”
[24] ದೇವರೇ, ನಿಮ್ಮ ಮೆರವಣಿಗೆಯು ಪ್ರಕಟವಾಗಿದೆ. ನನ್ನ ಅರಸರಾಗಿರುವ ದೇವರ ಮೆರವಣಿಗೆಯು ಪರಿಶುದ್ಧ ಸ್ಥಳವನ್ನು ಪ್ರವೇಶಿಸುವುದು.
[25] ಹಾಡುವವರು ಮುಂದಾಗಿಯೂ, ಬಾರಿಸುವವರು ಹಿಂದಾಗಿಯೂ, ದಮ್ಮಡಿ ಬಡಿಯುವ ಕನ್ಯೆಯರು ಮಧ್ಯದಲ್ಲಿಯೂ ಹಿಂಬಾಲಿಸುವರು.
[26] ಮಹಾಸಭೆಯಲ್ಲಿ ದೇವರನ್ನು ಸ್ತುತಿಸಿರಿ. ಇಸ್ರಾಯೇಲರ ಸಮೂಹದವರಲ್ಲಿ ಯೆಹೋವ ದೇವರನ್ನು ಸ್ತುತಿಸಿರಿ.
[27] ಬೆನ್ಯಾಮೀನನ ಚಿಕ್ಕ ಗೋತ್ರವು ಅವರನ್ನು ನಡೆಸುವುದು. ಯೆಹೂದದ ಪ್ರಧಾನರೂ, ಜೆಬುಲೂನನ ಪ್ರಧಾನರೂ ನಫ್ತಾಲಿಯ ಪ್ರಧಾನರೂ ಅಲ್ಲಿ ಇದ್ದಾರೆ.
[28] ದೇವರೇ, ನಿಮ್ಮ ಶಕ್ತಿಯನ್ನು ಪ್ರಕಟಿಸಿರಿ, ಮೊದಲು ಮಾಡಿದಂತೆಯೇ ಈಗಲೂ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿರಿ.
[29] ಯೆರೂಸಲೇಮಿನ ನಿಮ್ಮ ಮಂದಿರದ ನಿಮಿತ್ತ ಅರಸರು ನಿಮಗೆ ಕಾಣಿಕೆಗಳನ್ನು ಸಮರ್ಪಿಸಲಿ.
[30] ಆಪು ಹುಲ್ಲಿನ ಮಧ್ಯದಲ್ಲಿರುವ ಕಾಡುಮೃಗಗಳ ಹಾಗೆಯೂ ಕರುಗಳ ಮಧ್ಯದಲ್ಲಿರುವ ಹೋರಿಗಳ ಹಾಗೆಯೂ ಇರುವ ಜನಾಂಗವನ್ನು ಗದರಿಸಿರಿ. ಮೃಗದಂಥವರು ತಗ್ಗಿಸಿಕೊಂಡು ಬೆಳ್ಳಿ ಗಟ್ಟಿಗಳನ್ನು ನಿಮಗೆ ತರಲಿ. ಆದರೆ ಯುದ್ಧದಲ್ಲಿ ಆನಂದಿಸುವ ರಾಷ್ಟ್ರಗಳನ್ನು ಚದರಿಸಿರಿ.
[31] ಈಜಿಪ್ಟಿನಿಂದ ರಾಯಭಾರಿಗಳು ಬರುವರು. ಕೂಷ್ ದೇಶದವರು ತಾವಾಗಿಯೇ ಬಂದು ದೇವರಿಗೆ ಅಧೀನವಾಗುವರು.
[32] ಭೂಮಿಯ ರಾಜ್ಯಗಳೇ, ದೇವರಿಗೆ ಹಾಡಿರಿ. ಯೆಹೋವ ದೇವರನ್ನು ಕೀರ್ತಿಸಿರಿ.
[33] ಪೂರ್ವದ ಆಕಾಶಗಳಲ್ಲಿ ಸವಾರಿ ಮಾಡುವ ದೇವರಿಗೆ ಹಾಡಿರಿ. ದೇವರ ಸ್ವರವು ಗುಡುಗಿನಂತೆ ಇರುವುದು.
[34] ದೇವರ ಶಕ್ತಿಯನ್ನು ಘೋಷಿಸಿರಿ. ಇಸ್ರಾಯೇಲರ ಮೇಲೆ ಅವರ ಪ್ರಭಾವವಿರುತ್ತದೆ. ಮೇಘಗಳಲ್ಲಿ ಅವರ ಶಕ್ತಿಯು ಇರುತ್ತದೆ.
[35] ದೇವರೇ, ನಿಮ್ಮ ಪರಿಶುದ್ಧ ಸ್ಥಳದಲ್ಲಿ ನೀವು ಅತಿಶಯವಾಗಿದ್ದೀರಿ. ಇಸ್ರಾಯೇಲರ ದೇವರೇ ಜನರಿಗೆ ಬಲವನ್ನೂ ಶಕ್ತಿಯನ್ನೂ ಕೊಡುವರು. ದೇವರಿಗೆ ಸ್ತುತಿಯಾಗಲಿ.