Skip to content
Opens in a new window
Listen to this chapter • 5:55

[1] ಕೆಟ್ಟವರನ್ನು ನೋಡಿ ಕೋಪಿಸಿಕೊಳ್ಳಬೇಡ. ಇಲ್ಲವೆ ಅಕ್ರಮ ಮಾಡುವವರ ಬಗ್ಗೆ ಹೊಟ್ಟೆಕಿಚ್ಚುಪಡಬೇಡ.

[2] ಏಕೆಂದರೆ, ಅವರು ಹುಲ್ಲಿನ ಹಾಗೆ ಬೇಗ ಒಣಗಿ ಹೋಗುವರು. ಹಸಿರಾದ ಸೊಪ್ಪಿನ ಹಾಗೆ ಬಾಡಿಹೋಗುವರು.

[3] ಯೆಹೋವ ದೇವರಲ್ಲಿ ಭರವಸೆ ಇಟ್ಟು ಒಳ್ಳೆಯದನ್ನು ಮಾಡು; ಆಗ ದೇಶದಲ್ಲಿ ವಾಸಮಾಡಿ ಹಸಿರುಗಾವಲನ್ನು ಅನುಭವಿಸುವಿ.

[4] ಯೆಹೋವ ದೇವರಲ್ಲಿ ಆನಂದವಾಗಿರು; ಆಗ ಅವರು ನಿನ್ನ ಹೃದಯದ ಅಪೇಕ್ಷೆಗಳನ್ನು ಈಡೇರಿಸುವರು.

[5] ನಿನ್ನ ಮಾರ್ಗವನ್ನು ಯೆಹೋವ ದೇವರಿಗೆ ಒಪ್ಪಿಸು; ಅವರಲ್ಲಿ ಭರವಸೆ ಇಡು; ಅವರು ನಿನಗೆ ಇದನ್ನು ಮಾಡುವರು:

[6] ಅವರು ನಿನ್ನ ನೀತಿಯನ್ನು ಉದಯದ ಬೆಳಕಿನ ಹಾಗೆ ಮಾಡುವರು, ಅವರು ನಿನ್ನ ನ್ಯಾಯವನ್ನು ಮಧ್ಯಾಹ್ನದ ಸೂರ್ಯನ ಹಾಗೆ ಹೊಳೆಯುವಂತೆ ಮಾಡುವರು.

[7] ಯೆಹೋವ ದೇವರ ಮುಂದೆ ಶಾಂತನಾಗಿರು; ಮೌನವಾಗಿದ್ದು ಅವರಿಗಾಗಿ ಎದುರು ನೋಡು; ತಮ್ಮ ಮಾರ್ಗದಲ್ಲಿ ಸಫಲವಾಗುವವರನ್ನು ಕಂಡು ಸಿಡುಕಬೇಡ. ಕುಯುಕ್ತಿಗಳನ್ನು ನಡೆಸುವ ಮನುಷ್ಯರನ್ನು ಕಂಡು ಕೋಪ ಮಾಡಿಕೊಳ್ಳಬೇಡ.

[8] ಕೋಪವನ್ನು ಅಡಗಿಸು ಮತ್ತು ರೋಷವನ್ನು ಬಿಡು. ಸಿಡುಕಬೇಡ, ಅದು ಕೆಟ್ಟತನಕ್ಕೆ ನಡೆಸುತ್ತದೆ.

[9] ಏಕೆಂದರೆ, ದುರ್ಮಾರ್ಗಿಗಳು ನಾಶವಾಗುವರು; ಯೆಹೋವ ದೇವರನ್ನು ನಿರೀಕ್ಷಿಸುವವರೇ ಭೂಮಿಯನ್ನು ಸ್ವಾಧೀನಮಾಡಿಕೊಳ್ಳುವರು.

[10] ಇನ್ನು ಸ್ವಲ್ಪ ಸಮಯದಲ್ಲಿ ದುಷ್ಟನು ಕಾಣದೆ ಹೋಗುವನು. ಅವನನ್ನು ಹುಡುಕಿದರೂ ಸಿಕ್ಕುವುದೇ ಇಲ್ಲ.

[11] ಆದರೆ ಸಾತ್ವಿಕರು ಭೂಮಿಯನ್ನು ಸ್ವಾಧೀನಮಾಡಿಕೊಳ್ಳುವರು. ದೀನರು ಬಹಳ ಸಮಾಧಾನವನ್ನೂ ಸಮೃದ್ಧಿಯನ್ನು ಅನುಭವಿಸುವರು.

[12] ದುಷ್ಟನು ನೀತಿವಂತನಿಗಾಗಿ ಒಳಸಂಚು ಮಾಡುತ್ತಾನೆ, ಆದರೆ ಅವನನ್ನು ಕಂಡು ಹಲ್ಲು ಕಡಿಯುತ್ತಾನೆ.

[13] ದುಷ್ಟನ ದಿವಸ ಬರುತ್ತದೆಂದು ತಿಳಿದು ಯೆಹೋವ ದೇವರು ನಗುತ್ತಾರೆ.

[14] ದುಷ್ಟರು ಬಡವನನ್ನೂ ದೀನನನ್ನೂ ಬೀಳಿಸಬೇಕೆಂದು ಖಡ್ಗವನ್ನು ಹಿರಿದಿದ್ದಾರೆ, ಸನ್ಮಾರ್ಗದವರನ್ನು ಕೊಲ್ಲುವುದಕ್ಕೂ ತಮ್ಮ ಬಿಲ್ಲುಗಳನ್ನು ಬಗ್ಗಿಸಿದ್ದಾರೆ.

[15] ಆದರೆ ಅವರ ಖಡ್ಗ ಅವರ ಹೃದಯದಲ್ಲಿ ಇರಿದು ಬಿಡುವುದು; ಅವರ ಬಿಲ್ಲುಗಳು ಮುರಿದುಹೋಗುವವು.

[16] ದುಷ್ಟರ ಐಶ್ವರ್ಯಕ್ಕಿಂತ ನೀತಿವಂತರ ಅಲ್ಪವೇ ಲೇಸು.

[17] ಏಕೆಂದರೆ ದುಷ್ಟರ ತೋಳುಗಳು ಮುರಿದುಹೋಗುವವು, ಆದರೆ ನೀತಿವಂತರನ್ನು ಯೆಹೋವ ದೇವರು ಉದ್ಧಾರ ಮಾಡುವರು.

[18] ನಿರ್ದೋಷಿಗಳು ತಮ್ಮ ದಿವಸಗಳನ್ನು ಯೆಹೋವ ದೇವರ ಪರಾಮರಿಕೆಯಲ್ಲಿ ಕಳೆಯುವರು. ನಿರಪರಾಧಿಯ ಬಾಧ್ಯತೆಯು ಯುಗಯುಗಕ್ಕೂ ಇರುವುದು.

[19] ಆಪತ್ಕಾಲದಲ್ಲಿ ಅವರು ಕುಂದುವುದಿಲ್ಲ; ಕ್ಷಾಮದ ದಿವಸಗಳಲ್ಲಿ ಸಮೃದ್ಧಿಯನ್ನು ಅನುಭವಿಸುವರು.

[20] ಆದರೆ ದುಷ್ಟರು ನಾಶವಾಗುವರು; ಯೆಹೋವ ದೇವರ ಶತ್ರುಗಳು ಗದ್ದೆಯ ಹೂಗಳಂತೆ ಬಾಡಿಹೋಗುವರು; ಹೊಗೆಯಂತೆ ಮಾಯವಾಗುವರು.

[21] ದುಷ್ಟನು ಸಾಲ ಮಾಡಿ ಹಿಂದಿರುಗಿ ಕೊಡದೆ ಹೋಗುವನು. ಆದರೆ ನೀತಿವಂತನು ಧಾರಾಳವಾಗಿ ಕೊಡುತ್ತಾನೆ.

[22] ಯೆಹೋವ ದೇವರು ಆಶೀರ್ವದಿಸುವವರು, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವರು; ಆದರೆ ದೇವರ ಶಾಪಕ್ಕೆ ಗುರಿಯಾಗುವವರು ನಾಶವಾಗುವರು.

[23] ಯೆಹೋವ ದೇವರಲ್ಲಿ ಯಾರು ಹರ್ಷಿಸುತ್ತಾರೋ ಅವರ ಹೆಜ್ಜೆಗಳನ್ನು ಸ್ಥಿರಪಡಿಸುವರು.

[24] ಅವನು ಎಡವಿದರೂ ಬಿದ್ದುಹೋಗುವುದಿಲ್ಲ. ಏಕೆಂದರೆ ಯೆಹೋವ ದೇವರು ತಾವೇ ತಮ್ಮ ಕೈಯಿಂದ ಅವನನ್ನು ಎತ್ತಿಹಿಡಿಯುವರು.

[25] ನಾನು ಬಾಲಕನಾಗಿದ್ದೆನು, ಈಗ ಮುದುಕನಾಗಿದ್ದೇನೆ; ಆದರೆ ನೀತಿವಂತನು ಕೈಬಿಟ್ಟಿರುವುದನ್ನಾಗಲಿ ಅವನ ಸಂತತಿಯು ರೊಟ್ಟಿಗಾಗಿ ಭಿಕ್ಷೆ ಬೇಡುವುದನ್ನಾಗಲಿ ಎಂದೂ ನಾನು ನೋಡಲಿಲ್ಲ.

[26] ಅವರು ಯಾವಾಗಲೂ ಧಾರಾಳವಾಗಿ ಸಾಲ ಕೊಡುತ್ತಾರೆ; ನೀತಿವಂತನ ಸಂತತಿಯವರು ಆಶೀರ್ವಾದ ಹೊಂದುವರು.

[27] ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು, ಆಗ ಯುಗಯುಗಕ್ಕೂ ನಾಡಿನಲ್ಲಿ ವಾಸಮಾಡುವೆ.

[28] ಏಕೆಂದರೆ ಯೆಹೋವ ದೇವರು ನ್ಯಾಯವನ್ನು ಪ್ರೀತಿಸುತ್ತಾರೆ; ತಮ್ಮ ನಂಬಿಗಸ್ತ ಜನರನ್ನು ತೊರೆದುಬಿಡರು. ನೀತಿವಂತರು ಸದಾಕಾಲಕವೂ ಸುರಕ್ಷಿತರಾಗಿರುವರು; ಆದರೆ ದುಷ್ಟರ ಸಂತತಿಯು ಅಳಿದುಹೋಗುವುದು.

[29] ನೀತಿವಂತರು ಭೂಮಿಯನ್ನು ಸ್ವಾಧೀನಮಾಡಿಕೊಂಡು ಎಂದೆಂದಿಗೂ ಅದರಲ್ಲಿ ವಾಸವಾಗಿರುವರು.

[30] ನೀತಿವಂತನ ಬಾಯಿ ಜ್ಞಾನವನ್ನು ನುಡಿಯುವುದು; ಅವನ ನಾಲಿಗೆ ನ್ಯಾಯವನ್ನು ಮಾತನಾಡುವುದು.

[31] ಅವನ ದೇವರ ನಿಯಮವೂ ಅವನ ಹೃದಯದಲ್ಲಿ ಇದೆ; ಅವನ ಹೆಜ್ಜೆ ಕದಲುವುದಿಲ್ಲ.

[32] ದುಷ್ಟನು ನೀತಿವಂತನಿಗಾಗಿ ಒಳಸಂಚು ಮಾಡುತ್ತಾನೆ; ಅವನನ್ನು ಕೊಲ್ಲಲು ಹುಡುಕುತ್ತಾನೆ.

[33] ಆದರೆ ಯೆಹೋವ ದೇವರು ಅವನನ್ನು ದುಷ್ಟನ ಕೈಯಲ್ಲಿ ಬಿಡುವುದಿಲ್ಲ; ನ್ಯಾಯ ವಿಚಾರಣೆಯಲ್ಲಿ ನೀತಿವಂತನನ್ನು ಅಪರಾಧಿಯೆಂದು ತೀರ್ಪು ಕೊಡುವುದಿಲ್ಲ.

[34] ಯೆಹೋವ ದೇವರನ್ನು ನಿರೀಕ್ಷಿಸು; ಅವರ ಮಾರ್ಗದಲ್ಲಿ ನಡೆ; ಆಗ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವಂತೆ ನಿನ್ನನ್ನು ಅವರು ಉನ್ನತಕ್ಕೆ ತರುವರು; ದುಷ್ಟರ ವಿನಾಶವನ್ನು ನೀವು ಕಾಣುವಿರಿ.

[35] ದುಷ್ಟರು ದೊಡ್ಡ ಅಧಿಕಾರದಲ್ಲಿರುವುದನ್ನು ನಾನು ಕಂಡೆನು; ಅವರು ಹಸಿರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದರು.

[36] ಆದರೆ ಅವರು ಅಳಿದೇ ಹೋದರು; ಅವರನ್ನು ಹುಡುಕಿದೆನು; ಆದರೆ ಅವರು ಸಿಕ್ಕಲಿಲ್ಲ.

[37] ನಿರ್ದೋಷಿಯನ್ನು ಗಮನಿಸು; ಯಥಾರ್ಥನನ್ನು ನೋಡು; ಸಮಾಧಾನ ಹುಡುಕುವವರಿಗೆ ಒಳ್ಳೆಯ ಭವಿಷ್ಯವಿದೆ.

[38] ಆದರೆ ದ್ರೋಹಿಗಳೆಲ್ಲರೂ ನಾಶವಾಗುವರು; ದುಷ್ಟರಿಗೆ ಒಳ್ಳೆಯ ಭವಿಷ್ಯವಿಲ್ಲ.

[39] ನೀತಿವಂತರ ರಕ್ಷಣೆಯು ಯೆಹೋವ ದೇವರಿಂದಲೇ; ಇಕ್ಕಟ್ಟಿನ ಕಾಲದಲ್ಲಿ ದೇವರೇ ಅವರ ಕೋಟೆ.

[40] ಯೆಹೋವ ದೇವರು ಅವರಿಗೆ ಸಹಾಯಮಾಡಿ ಅವರನ್ನು ಬಿಡಿಸುವರು. ದುಷ್ಟರಿಂದ ಅವರನ್ನು ತಪ್ಪಿಸಿ ಬಿಡಿಸುವರು. ಏಕೆಂದರೆ ಅವರು ದೇವರಲ್ಲಿ ಆಶ್ರಯ ಪಡೆದಿದ್ದಾರೆ.

ಕೀರ್ತನೆಗಳು — Chapters