Skip to content
Opens in a new window
Listen to this chapter • 2:15

[1] ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ; ಸಮಸ್ತ ಭೂನಿವಾಸಿಗಳೇ, ಯೆಹೋವ ದೇವರಿಗೆ ಹಾಡಿರಿ.

[2] ಯೆಹೋವ ದೇವರಿಗೆ ಹಾಡಿರಿ, ಅವರ ನಾಮವನ್ನು ಸ್ತುತಿಸಿರಿ; ಅವರ ರಕ್ಷಣೆಯನ್ನು ದಿನಂಪ್ರತಿ ಸಾರಿ ಹೇಳಿರಿ.

[3] ಜನಾಂಗಗಳಲ್ಲಿ ಅವರ ಘನತೆಯನ್ನೂ, ಎಲ್ಲಾ ಜನಾಂಗಗಳಲ್ಲಿ ಅವರ ಅದ್ಭುತಗಳನ್ನೂ ವಿವರಿಸಿರಿ.

[4] ಯೆಹೋವ ದೇವರು ಮಹೋನ್ನತರಾಗಿದ್ದಾರೆ, ಬಹು ಸ್ತುತಿಗೆ ಪಾತ್ರರೂ ಆಗಿದ್ದಾರೆ; ಅವರು ಎಲ್ಲಾ ದೇವರುಗಳಿಗಿಂತ ಬಹುಭಯಭಕ್ತಿಗೆ ಪಾತ್ರರಾಗಿದ್ದಾರೆ.

[5] ಏಕೆಂದರೆ ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ; ಆದರೆ ಯೆಹೋವ ದೇವರು ಆಕಾಶಮಂಡಲವನ್ನು ನಿರ್ಮಿಸಿದವರು.

[6] ಘನತೆಯೂ, ಪ್ರಭೆಯೂ ಅವರ ಮುಂದೆ ಇವೆ; ಬಲವೂ, ಸೌಂದರ್ಯವೂ ಅವರ ಪರಿಶುದ್ಧ ಸ್ಥಳದಲ್ಲಿ ಇವೆ.

[7] ಜನಾಂಗದ ಕುಟುಂಬಗಳೇ, ಯೆಹೋವ ದೇವರ ಮುಂದೆ ನೀವು ಮಹಿಮೆಯನ್ನೂ ಬಲವನ್ನೂ ಅರ್ಪಿಸಿರಿ.

[8] ಯೆಹೋವ ದೇವರ ಹೆಸರಿಗೆ ಸಲ್ಲತಕ್ಕ ಗೌರವವನ್ನು ಸಲ್ಲಿಸಿರಿ; ಕಾಣಿಕೆಯನ್ನು ತೆಗೆದುಕೊಂಡು ಅವರ ಅಂಗಳಗಳಿಗೆ ಬನ್ನಿರಿ.

[9] ಪರಿಶುದ್ಧತೆ ಎಂಬ ಭೂಷಣದೊಡನೆ ಯೆಹೋವ ದೇವರನ್ನು ಆರಾಧಿಸಿರಿ; ಸಮಸ್ತ ಭೂನಿವಾಸಿಗಳೇ, ಅವರ ಮುಂದೆ ಭಯಪಡಿರಿ.

[10] “ಯೆಹೋವ ದೇವರು ಆಳಿಕೆ ಮಾಡುತ್ತಾರೆ; ಆದ್ದರಿಂದ ಲೋಕವು ಸ್ಥಿರವಾಗಿರುವುದು, ಕದಲುವುದಿಲ್ಲ; ಅವರು ಜನರಿಗೆ ನೀತಿಯಲ್ಲಿ ನ್ಯಾಯತೀರಿಸುತ್ತಾರೆ,” ಎಂದು ಎಲ್ಲಾ ಜನಾಂಗಗಳಲ್ಲಿ ಹೇಳಿರಿ.

[11] ಆಕಾಶವು ಸಂತೋಷಿಸಲಿ; ಭೂಮಿಯು ಉಲ್ಲಾಸಪಡಲಿ; ಸಮುದ್ರವೂ, ಅದರಲ್ಲಿರುವುದೆಲ್ಲವೂ ಘೋಷಿಸಲಿ.

[12] ಹೊಲಗಳೂ, ಅವುಗಳಲ್ಲಿರುವ ಸಮಸ್ತವೂ ಉತ್ಸಾಹಪಡಲಿ; ಆಗ ಅಡವಿಯ ಮರಗಳೆಲ್ಲಾ ಯೆಹೋವ ದೇವರ ಮುಂದೆಯೇ ಉತ್ಸಾಹಧ್ವನಿ ಮಾಡಲಿ.

[13] ಸಮಸ್ತ ಸೃಷ್ಟಿಯು ಯೆಹೋವ ದೇವರ ಸನ್ನಿಧಿಯಲ್ಲಿ ಹಾಡಲಿ, ಏಕೆಂದರೆ ಅವರು ಲೋಕಕ್ಕೆ ನೀತಿಯಿಂದಲೂ; ಜನರಿಗೆ ತಮ್ಮ ಸತ್ಯದಿಂದಲೂ ನ್ಯಾಯತೀರಿಸಲು ಬರುತ್ತಾರೆ.

ಕೀರ್ತನೆಗಳು — Chapters