[1] ಯೆಹೋವ ದೇವರು ಇಕ್ಕಟ್ಟಿನಲ್ಲಿ ನಿಮಗೆ ಉತ್ತರವನ್ನು ನೀಡಲಿ; ಯಾಕೋಬನ ದೇವರ ಹೆಸರು ನಿಮ್ಮನ್ನು ಕಾಪಾಡಲಿ.
[2] ದೇವರು ಪರಿಶುದ್ಧ ಸ್ಥಳದೊಳಗಿಂದ ನಿಮಗೆ ಸಹಾಯ ಕಳುಹಿಸಲಿ; ಅವರು ಚೀಯೋನಿನಿಂದ ನಿಮಗೆ ಆಧಾರ ನೀಡಲಿ.
[3] ನಿಮ್ಮ ಯಜ್ಞಾರ್ಪಣೆಗಳನ್ನೆಲ್ಲಾ ಜ್ಞಾಪಕಮಾಡಿಕೊಂಡು, ನಿಮ್ಮ ದಹನಬಲಿಗಳನ್ನು ಸ್ವೀಕರಿಸಲಿ.
[4] ದೇವರು ನಿಮ್ಮ ಹೃದಯದ ಬಯಕೆಯನ್ನು ನಿಮಗೆ ದಯಪಾಲಿಸಲಿ; ನಿಮ್ಮ ಎಲ್ಲಾ ಯೋಜನೆಗಳಲ್ಲಿಯೂ ಯಶಸ್ಸನ್ನು ನೀಡಲಿ.
[5] ನಾವು ದೇವರ ಜಯದಲ್ಲಿ ಆನಂದ ಘೋಷಮಾಡಿ, ನಮ್ಮ ದೇವರ ಹೆಸರಿನಲ್ಲಿಯೇ ನಾವು ನಮ್ಮ ಧ್ವಜಗಳನ್ನು ಎತ್ತುವೆವು. ಯೆಹೋವ ದೇವರು ನಿಮ್ಮ ಬಿನ್ನಹಗಳನ್ನೆಲ್ಲಾ ಪೂರೈಸಲಿ.
[6] ಈಗ ನಾನು ಇದನ್ನು ಬಲ್ಲೆನು: ಯೆಹೋವ ದೇವರು ತಮ್ಮ ಅಭಿಷಿಕ್ತನಿಗೆ ಜಯ ನೀಡುವರು. ತಮ್ಮ ಜಯದ ಬಲಗೈಯ ಶಕ್ತಿಯಿಂದಲೂ ತಮ್ಮ ಪರಿಶುದ್ಧ ಪರಲೋಕದಿಂದಲೂ ಅವನಿಗೆ ಉತ್ತರಕೊಡುವರು.
[7] ಕೆಲವರು ರಥಗಳಲ್ಲಿಯೂ ಕೆಲವರು ಕುದುರೆಗಳಲ್ಲಿಯೂ ಭರವಸೆಯಿಡುತ್ತಾರೆ; ನಾವಾದರೋ ನಮ್ಮ ಯೆಹೋವ ದೇವರ ಹೆಸರಿನಲ್ಲಿ ಭರವಸೆಯನ್ನಿಡುತ್ತೇವೆ.
[8] ಅವರು ಬಗ್ಗಿ ಬೀಳುತ್ತಾರೆ, ನಾವಾದರೋ ಎದ್ದು ಸ್ಥಿರವಾಗಿ ನಿಲ್ಲುವೆವು.
[9] ಯೆಹೋವ ದೇವರೇ, ಅರಸನಿಗೆ ಜಯಕೊಡಿರಿ! ನಾವು ಕರೆಯುವಾಗ ನಮಗೆ ಉತ್ತರಕೊಡಿರಿ!