[1] ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀರಿ? ನನ್ನನ್ನು ರಕ್ಷಿಸದೆ ಏಕೆ ದೂರವಾಗಿದ್ದೀರಿ? ನನ್ನ ನರಳುವಿಕೆಯ ಮೊರೆಗೆ ಉತ್ತರ ಕೊಡದೆ ಏಕೆ ದೂರವಾಗಿದ್ದೀರಿ?
[2] ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ, ಆದರೆ ನೀವು ಉತ್ತರ ಕೊಡುವುದಿಲ್ಲ; ರಾತ್ರಿಯಲ್ಲಿಯೂ ನನಗೆ ವಿಶ್ರಾಂತಿ ಇರುವುದಿಲ್ಲ.
[3] ನೀವು ಪರಿಶುದ್ಧರು; ನೀವು ಇಸ್ರಾಯೇಲರ ಸ್ತೋತ್ರ ಸಿಂಹಾಸನದಲ್ಲಿರುವಿರಿ.
[4] ನಿಮ್ಮಲ್ಲಿಯೇ ನಮ್ಮ ಪಿತೃಗಳು ಭರವಸೆಯಿಟ್ಟರು; ಅವರು ಭರವಸೆಯಿಟ್ಟಿದ್ದರಿಂದ ನೀವು ಅವರನ್ನು ವಿಮೋಚಿಸಿದಿರಿ.
[5] ಅವರು ನಿಮಗೆ ಮೊರೆಯಿಟ್ಟದ್ದರಿಂದ ನೀವು ಅವರನ್ನು ರಕ್ಷಿಸಿದಿರಿ; ನಿಮ್ಮಲ್ಲಿ ಭರವಸೆಯಿಟ್ಟಿದ್ದರಿಂದ ಅವರು ಅಪಮಾನಕ್ಕೆ ಗುರಿಯಾಗಲಿಲ್ಲ.
[6] ಆದರೆ ನಾನು ಹುಳದಂಥವನೇ ಹೊರತು ಮನುಷ್ಯನಲ್ಲ; ನಾನು ಮನುಷ್ಯರಿಂದ ನಿಂದೆ ಹಾಗು ತಿರಸ್ಕಾರಕ್ಕೆ ಗುರಿಯಾಗಿದ್ದೇನೆ.
[7] ನನ್ನನ್ನು ನೋಡುವವರೆಲ್ಲರೂ ನನ್ನನ್ನು ಗೇಲಿಮಾಡುತ್ತಾರೆ. ಅವರು ತಲೆ ಆಡಿಸುತ್ತಾ ಹೀಗೆ ಅವಮಾನಪಡಿಸುತ್ತಾರೆ:
[8] “ಆತನು ಯೆಹೋವ ದೇವರ ಮೇಲೆ ಭರವಸೆಯಿಟ್ಟಿದ್ದಾನಲ್ಲಾ, ಯೆಹೋವ ದೇವರೇ ಆತನನ್ನು ಕಾಪಾಡಲಿ. ಯೆಹೋವ ದೇವರು ಆತನಲ್ಲಿ ಹರ್ಷಿಸುವುದಾದರೆ, ಅವರೇ ಆತನನ್ನು ಬಿಡಿಸಲಿ.”
[9] ತಾಯಿಯ ಗರ್ಭದೊಳಗಿಂದ ನನ್ನನ್ನು ಹೊರತಂದವರು ನೀವು; ನನ್ನ ತಾಯಿಯ ಎದೆಯಲ್ಲಿ ಇದ್ದಾಗಲೇ ನಾನು ನಿಮ್ಮಲ್ಲಿ ಭರವಸೆಯಿಡುವಂತೆ ಮಾಡಿದಿರಿ.
[10] ಹುಟ್ಟಿದಂದಿನಿಂದಲೇ ನೀವೇ ನನಗೆ ಆಧಾರ ನನ್ನ ತಾಯಿಯ ಗರ್ಭದಿಂದಲೇ ನೀವು ನನ್ನ ದೇವರು.
[11] ನನ್ನಿಂದ ದೂರವಾಗಿರಬೇಡಿರಿ, ಏಕೆಂದರೆ ಇಕ್ಕಟ್ಟು ಸಮೀಪವಾಗಿದೆ, ಸಹಾಯಕರು ನನಗೆ ಯಾರೂ ಇಲ್ಲ.
[12] ಬಹಳ ಹೋರಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವಾದ ಹೋರಿಗಳು ನನ್ನನ್ನು ಮುತ್ತಿಕೊಂಡಿವೆ.
[13] ಹರಿದು ಬಿಡುವ ಗರ್ಜಿಸುವ ಸಿಂಹದ ಹಾಗೆ ನನ್ನ ಮೇಲೆ ತಮ್ಮ ಬಾಯಿತೆರೆದಿದ್ದಾರೆ.
[14] ನಾನು ಚೆಲ್ಲಿದ ನೀರಿನಂತಿದ್ದೇನೆ, ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿ ಹೋಗಿದೆ. ನನ್ನ ಹೃದಯವು ಮೇಣದ ಹಾಗೆ ನನ್ನೊಳಗೆ ಕರಗಿಹೋಗಿದೆ.
[15] ನನ್ನ ಬಾಯಿ ಬೋಕಿಯ ಹಾಗೆ ಒಣಗಿಹೋಗಿದೆ, ನನ್ನ ನಾಲಿಗೆ ಅಂಗಳಕ್ಕೆ ಹತ್ತಿದೆ, ನೀವು ನನ್ನನ್ನು ಮಣ್ಣಿಗೆ ಸೇರಿಸುವಿರಿ.
[16] ನಾಯಿಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಗುಂಪು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.
[17] ನನ್ನ ಎಲುಬುಗಳನ್ನೆಲ್ಲಾ ಎಣಿಸುವಂತಾಗಿದೆ; ಅವರು ನನ್ನನ್ನು ಕಂಡು ಹಿಗ್ಗುತ್ತಾರೆ.
[18] ನನ್ನ ಬಟ್ಟೆಯನ್ನು ಅವರು ತಮ್ಮೊಳಗೆ ಪಾಲು ಮಾಡಿಕೊಳ್ಳುತ್ತಾರೆ; ನನ್ನ ಅಂಗಿಗೋಸ್ಕರ ಚೀಟು ಹಾಕುತ್ತಾರೆ.
[19] ಆದರೆ ಯೆಹೋವ ದೇವರೇ, ನೀವು ನನ್ನಿಂದ ದೂರವಾಗಿರಬೇಡಿರಿ; ನೀವು ನನ್ನ ಬಲವಾಗಿದ್ದೀರಿ, ನನ್ನ ಸಹಾಯಕ್ಕೆ ಬೇಗ ಬನ್ನಿರಿ.
[20] ನನ್ನ ಪ್ರಾಣವನ್ನು ಖಡ್ಗದಿಂದಲೂ ನನ್ನ ಅಮೂಲ್ಯ ಜೀವವನ್ನು ನಾಯಿಗಳ ಬಲದಿಂದಲೂ ಬಿಡಿಸಿರಿ.
[21] ಸಿಂಹಗಳ ಬಾಯಿಂದ ನನ್ನನ್ನು ರಕ್ಷಿಸಿರಿ; ಕಾಡುಕೋಣಗಳ ಕೊಂಬುಗಳಿಂದ ನನ್ನನ್ನು ತಪ್ಪಿಸಿರಿ.
[22] ನಾನು ನಿಮ್ಮ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; ಸಭಾ ಮಧ್ಯದಲ್ಲಿ ನಿಮ್ಮನ್ನು ಸ್ತುತಿಸುವೆನು.
[23] ಯೆಹೋವ ದೇವರಿಗೆ ಭಯಪಡುವವರೇ, ಅವರನ್ನು ಸ್ತುತಿಸಿರಿ; ಯಾಕೋಬನ ಎಲ್ಲಾ ಸಂತತಿಯವರೇ, ಅವರನ್ನು ಕೊಂಡಾಡಿರಿ; ಇಸ್ರಾಯೇಲರ ಎಲ್ಲಾ ಸಂತತಿಯವರೇ, ಅವರಲ್ಲಿ ಭಯಭಕ್ತಿಯುಳ್ಳವರಾಗಿರಿ.
[24] ಏಕೆಂದರೆ ಸಂಕಟಪಡುವವನ ಸಂಕಟವನ್ನು ಅವರು ತಿರಸ್ಕರಿಸಲಿಲ್ಲ, ಅಸಹ್ಯಪಡಲಿಲ್ಲ; ತಮ್ಮ ಮುಖವನ್ನು ಅವನಿಂದ ಮರೆಮಾಡಲಿಲ್ಲ; ಆದರೆ ಆತನು ಮೊರೆ ಇಡಲು, ಅವರು ಕೇಳಿದರು.
[25] ಮಹಾಸಭೆಯಲ್ಲಿ ನಿಮ್ಮನ್ನು ಕುರಿತು ನನ್ನ ಸ್ತೋತ್ರವು ನಿಮ್ಮಿಂದ ಬರುವುದು; ನನ್ನ ಹರಕೆಗಳನ್ನು ನಿಮಗೆ ಭಯಪಡುವವರ ಮುಂದೆ ಸಲ್ಲಿಸುವೆನು.
[26] ದೀನರು ಉಂಡು ತೃಪ್ತರಾಗುವರು; ಯೆಹೋವ ದೇವರನ್ನು ಹುಡುಕುವವರು ಅವರನ್ನು ಸ್ತುತಿಸುವರು; ಅಂಥವರ ಹೃದಯವು ಎಂದೆಂದಿಗೂ ಚೈತನ್ಯ ಹೊಂದಲಿ.
[27] ಲೋಕದಲ್ಲಿರುವ ಎಲ್ಲರೂ ಎಚ್ಚರವಾಗಿ ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು; ಜನಾಂಗಗಳ ಕುಟುಂಬಗಳೆಲ್ಲಾ ದೇವರ ಮುಂದೆ ಅಡ್ಡಬೀಳುವವು.
[28] ಏಕೆಂದರೆ ರಾಜ್ಯವು ಯೆಹೋವ ದೇವರದೇ; ಜನಾಂಗಗಳನ್ನು ಆಳುವವರು ಅವರೇ.
[29] ಭೂಮಿಯ ಶ್ರೀಮಂತರೆಲ್ಲರು ಉಂಡು ಆರಾಧಿಸುವರು; ತಮ್ಮ ಪ್ರಾಣವನ್ನು ಬದುಕಿಸಲಾರದೆ ಧೂಳಿನಲ್ಲಿ ಇಳಿಯುವವರೆಲ್ಲರು ಅವರ ಮುಂದೆ ಅಡ್ಡಬೀಳುವರು.
[30] ಸಂತಾನವು ದೇವರನ್ನು ಸೇವಿಸುವುದು; ಮುಂದಿನ ಸಂತತಿಗಳಿಗೆ ಯೆಹೋವ ದೇವರ ಬಗ್ಗೆ ಹೇಳಲಾಗುವುದು.
[31] ಆ ಸಂತತಿಯವರು ದೇವರ ನೀತಿಯನ್ನು ಇನ್ನೂ ಜನಿಸದ ಜನಾಂಗಕ್ಕೆ ಸಾರಿ ತಿಳಿಸುವರು, ಏಕೆಂದರೆ ಇದನ್ನೆಲ್ಲ ಮಾಡಿದವರು ದೇವರೇ!