[1] ನನ್ನ ಸಹಾಯಕ್ಕಾಗಿ ದೇವರ ಕಡೆಗೆ ಕೂಗುತ್ತೇನೆ. ಹೌದು, ನನ್ನ ಸ್ವರದಿಂದ ದೇವರ ಕಡೆಗೆ ಕೂಗುತ್ತೇನೆ, ನನಗೆ ದೇವರು ಕಿವಿಗೊಡುವರು.
[2] ನನ್ನ ಇಕ್ಕಟ್ಟಿನ ದಿವಸದಲ್ಲಿ ಯೆಹೋವ ದೇವರನ್ನು ಹುಡುಕಿದೆನು. ನಾನು ರಾತ್ರಿಯೆಲ್ಲಾ ಬೇಸರವಿಲ್ಲದೆ ಕೈಚಾಚಿದೆ. ನನ್ನ ಮನಸ್ಸಿಗೆ ಶಾಂತಿ ಇರಲಿಲ್ಲ.
[3] ನಾನು ವ್ಯಥೆಪಡುತ್ತಿರುವಾಗ, ದೇವರನ್ನು ಜ್ಞಾಪಕಮಾಡಿಕೊಂಡೆನು. ನಾನು ಚಿಂತಿಸುವುದರಿಂದ ನನ್ನ ಆತ್ಮವು ಬಳಲಿ ಹೋಯಿತು.
[4] ನನ್ನ ಕಣ್ಣುಗಳನ್ನು ಮುಚ್ಚದಿರುವಾಗ, ನಾನು ಮಾತನಾಡಲಾರದಂತೆ ಕಳವಳಪಟ್ಟೆನು.
[5] ಪೂರ್ವದ ದಿವಸಗಳನ್ನೂ ಆದಿಕಾಲದ ವರ್ಷಗಳನ್ನೂ ಯೋಚಿಸಿದೆ.
[6] ನನ್ನ ಹಾಡನ್ನು ರಾತ್ರಿಯಲ್ಲಿ ಜ್ಞಾಪಕಮಾಡಿಕೊಂಡೆನು. ನನ್ನ ಹೃದಯದಲ್ಲಿ ನಾನು ಧ್ಯಾನ ಮಾಡಿದೆ. ನನ್ನ ಆತ್ಮದಲ್ಲಿ ಪ್ರಶ್ನೆ ಹೀಗೆ ಮೂಡುತ್ತಿತ್ತು:
[7] “ನಿರಂತರವಾಗಿ ಯೆಹೋವ ದೇವರು ತಳ್ಳಿಬಿಡುವರೋ? ಇನ್ನೆಂದಿಗೂ ದಯೆತೋರದೆ ಇರುವರೋ?
[8] ದೇವರ ಒಡಂಬಡಿಕೆಯ ಪ್ರೀತಿಯು ಸದಾಕಾಲಕ್ಕೆ ನಿಂತು ಹೋಯಿತೋ? ತಲತಲಾಂತರಕ್ಕೂ ವಾಗ್ದಾನ ಮುಗಿದು ಹೋಯಿತೋ?
[9] ದೇವರು ಕರುಣಿಸುವುದನ್ನು ಮರೆತು ಬಿಟ್ಟಿದ್ದಾರೋ? ತಮ್ಮ ಅಂತಃಕರಣವನ್ನು ಬೇಸರದಿಂದ ತಡೆಹಿಡಿದಿದ್ದಾರೋ?”
[10] ನಂತರ ನಾನು ಯೋಚಿಸಿದ್ದೇನಂದರೆ, “ಹೀಗೆ ನೆನಸಿದ್ದು ನನ್ನ ಬಲಹೀನತೆಯೇ. ಮಹೋನ್ನತ ದೇವರ ಬಲಗೈಯ ಪರಾಕ್ರಮದ ವರ್ಷಗಳನ್ನು ನಾನು ಸ್ಮರಿಸುವೆನು.
[11] ಯೆಹೋವ ದೇವರ ಕ್ರಿಯೆಗಳನ್ನು ಜ್ಞಾಪಕಮಾಡಿಕೊಳ್ಳುವೆನು. ಹೌದು, ಆದಿಯಿಂದಲೂ ನೀವು ನಡೆಸಿದ ಅದ್ಭುತಗಳನ್ನು ನೆನಪುಮಾಡಿಕೊಳ್ಳುವೆನು.
[12] ನಿಮ್ಮ ಮಹಾಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು, ನಿಮ್ಮ ಕೃತ್ಯಗಳನ್ನು ಯೋಚಿಸುವೆನು.”
[13] ದೇವರೇ, ನಿಮ್ಮ ಮಾರ್ಗಗಳು ಪರಿಶುದ್ಧವಾದವುಗಳು. ನಮ್ಮ ದೇವರ ಹಾಗೆ ಮಹಾ ದೇವರು ಯಾರು?
[14] ಅದ್ಭುತಗಳನ್ನು ಮಾಡುವ ದೇವರು ನೀವೇ. ಜನರಲ್ಲಿ ನಿಮ್ಮ ಬಲವನ್ನು ತಿಳಿಯಮಾಡಿದ್ದೀರಿ.
[15] ಯಾಕೋಬನ ಮತ್ತು ಯೋಸೇಫನ ಸಂತತಿಯವರಾದ ನಿಮ್ಮ ಜನರನ್ನು ನಿಮ್ಮ ಬಲವಾದ ತೋಳಿನಿಂದ ವಿಮೋಚಿಸಿದ್ದೀರಿ.
[16] ಜಲರಾಶಿಗಳು ನಿಮ್ಮನ್ನು ಕಂಡವು. ದೇವರೇ, ಜಲರಾಶಿಗಳು ನಿಮ್ಮನ್ನು ಕಂಡು ಹೊರಳಾಡಿದವು. ಅಗಾಧ ಸಾಗರಗಳು ಅಲ್ಲಕಲ್ಲೋಲವಾದವು.
[17] ಮೋಡಗಳು ನೀರನ್ನು ಸುರಿಸಿದವು. ಆಕಾಶಗಳು ಗುಡುಗಿನಿಂದ ಶಬ್ದಮಾಡಿದವು. ನಿಮ್ಮ ಬಾಣಗಳು ಹಿಂದೆಯೂ ಮುಂದೆಯೂ ಹಾರಿ ಬಂದವು.
[18] ನಿಮ್ಮ ಗುಡುಗಿನ ಶಬ್ದವು ಸುಂಟರಗಾಳಿಯಲ್ಲಿ ಕೇಳುತ್ತಿತ್ತು. ಮಿಂಚುಗಳು ಜಗತ್ತನ್ನು ಬೆಳಗಿಸಿದವು. ಭೂಮಿಯು ನಡುಗಿ ಕದಲಿತು.
[19] ನೀವು ಸಮುದ್ರದಲ್ಲಿ ಮಾರ್ಗಮಾಡಿದಿರಿ. ಮಹಾಜಲರಾಶಿಗಳನ್ನು ದಾಟಿದಿರಿ. ಆದರೂ ನಿಮ್ಮ ಹೆಜ್ಜೆಯ ಗುರುತು ಕಾಣಲಿಲ್ಲ.
[20] ಮೋಶೆ ಆರೋನರ ಕೈಯಿಂದ ನಿಮ್ಮ ಜನರನ್ನು ಮಂದೆಯ ಹಾಗೆ ನಡೆಸಿದಿರಿ.