Skip to content
Opens in a new window
Listen to this chapter • 3:07

[1] ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರ ಹೆಸರನ್ನು ಸ್ತುತಿಸಿರಿ; ಯೆಹೋವ ದೇವರ ಆಲಯದಲ್ಲಿಯೂ,

[2] ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವ ಯೆಹೋವ ದೇವರ ಸೇವಕರೇ, ಸ್ತುತಿಸಿರಿ.

[3] ಯೆಹೋವ ದೇವರನ್ನು ಸ್ತುತಿಸಿರಿ, ಯೆಹೋವ ದೇವರು ಒಳ್ಳೆಯವರು; ದೇವರ ಹೆಸರಿಗೆ ಸ್ತುತಿಗಳನ್ನು ಹಾಡಿರಿ, ಏಕೆಂದರೆ ಅದು ರಮ್ಯವಾದದ್ದು.

[4] ಯೆಹೋವ ದೇವರು ಯಾಕೋಬನನ್ನು ತಮಗೋಸ್ಕರ ಆಯ್ದುಕೊಂಡರು, ಇಸ್ರಾಯೇಲನ್ನು ತಮ್ಮ ಶ್ರೇಷ್ಠ ಸಂಪತ್ತಾಗಿಯೂ ಆಯ್ದುಕೊಂಡಿದ್ದಾರೆ.

[5] ಯೆಹೋವ ದೇವರು ದೊಡ್ಡವರು; ನಮ್ಮ ಯೆಹೋವ ದೇವರು ಎಲ್ಲಾ ದೇವರುಗಳಿಗಿಂತ ದೊಡ್ಡವರೆಂದು ನಾನು ತಿಳಿದಿದ್ದೇನೆ.

[6] ಯೆಹೋವ ದೇವರು ಆಕಾಶದಲ್ಲಿಯೂ, ಭೂಮಿಯಲ್ಲಿಯೂ, ಸಮುದ್ರದಲ್ಲಿಯೂ, ಎಲ್ಲಾ ಅಗಾಧಗಳಲ್ಲಿಯೂ ತಾವು ಅಪೇಕ್ಷಿಸುವುದನ್ನೆಲ್ಲಾ ಮಾಡುತ್ತಾರೆ.

[7] ಭೂಮಿಯ ಎಲ್ಲಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. ಮಳೆಯನ್ನೂ ಮಿಂಚನ್ನೂ ಕಳುಹಿಸುತ್ತಾರೆ. ಗಾಳಿಯನ್ನು ತಮ್ಮ ಉಗ್ರಾಣಗಳಿಂದ ಬೀಸುವಂತೆ ಮಾಡುತ್ತಾರೆ.

[8] ದೇವರು ಈಜಿಪ್ಟ್ ಜನರನ್ನು ಮೊದಲುಗೊಂಡು ಪಶುಗಳವರೆಗೂ ಚೊಚ್ಚಲುಗಳನ್ನೆಲ್ಲಾ ದಂಡಿಸಿದರು.

[9] ಈಜಿಪ್ಟೇ, ನಿಮ್ಮ ಮಧ್ಯದಲ್ಲಿ ಸೂಚಕಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ದೇವರು ಫರೋಹನಿಗೂ, ಅವನ ಸಕಲ ಸೇವಕರಿಗೂ ವಿರೋಧವಾಗಿ ಕಳುಹಿಸಿದನು.

[10] ದೇವರು ದೊಡ್ಡ ಜನಾಂಗಗಳನ್ನೂ, ಬಲವಾದ ಅರಸರನ್ನೂ ದಂಡಿಸಿದರು.

[11] ಅಮೋರಿಯರ ಅರಸನಾದ ಸೀಹೋನನನ್ನು, ಬಾಷಾನಿನ ಅರಸನಾದ ಓಗನನ್ನೂ, ಕಾನಾನಿನ ಎಲ್ಲಾ ಅರಸರನ್ನೂ ದಂಡಿಸಿದರು.

[12] ದೇವರು ದೇಶವನ್ನು ಸೊತ್ತಾಗಿ ತಮ್ಮ ಪ್ರಜೆಯಾದ ಇಸ್ರಾಯೇಲಿಗೆ ಕೊಟ್ಟರು.

[13] ಯೆಹೋವ ದೇವರೇ, ನಿಮ್ಮ ನಾಮವೂ, ನಿಮ್ಮ ಪ್ರಭಾವವೂ ತಲತಲಾಂತರಕ್ಕೂ ಸ್ಮರಣೆಯಾಗಿರುವುದು.

[14] ಯೆಹೋವ ದೇವರು ತಮ್ಮ ಜನರಿಗೆ ನ್ಯಾಯವನ್ನು ಸ್ಥಾಪಿಸುವರು, ತಮ್ಮ ಸೇವಕರ ಮೇಲೆ ಅನುಕಂಪವನ್ನೂ ತೋರಿಸುವರು.

[15] ವಿಗ್ರಹಗಳು ಬೆಳ್ಳಿ, ಬಂಗಾರದವುಗಳು, ಅವು ಮನುಷ್ಯರ ಕೈಯಿಂದ ಮಾಡಲಾಗಿವೆ.

[16] ಅವುಗಳಿಗೆ ಬಾಯಿಯಿದೆ, ಮಾತನಾಡುವುದಿಲ್ಲ; ಕಣ್ಣುಗಳಿವೆ, ಕಾಣುವುದಿಲ್ಲ.

[17] ಕಿವಿಗಳಿವೆ, ಕೇಳಿಸಿಕೊಳ್ಳುವುದಿಲ್ಲ; ಅವುಗಳ ಬಾಯಲ್ಲಿ ಶ್ವಾಸ ಇಲ್ಲ.

[18] ಅವುಗಳನ್ನು ಮಾಡುವವರು ಅವುಗಳಂತೆಯೇ ಇದ್ದಾರೆ; ಅವುಗಳಲ್ಲಿ ಭರವಸವಿಡುವವರು ಅವುಗಳಂತಾಗುವರು.

[19] ಇಸ್ರಾಯೇಲ್ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ; ಆರೋನನ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ.

[20] ಲೇವಿಯ ಮನೆತನದವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ; ದೇವರಲ್ಲಿ ಭಯಭಕ್ತಿಯುಳ್ಳವರೇ, ಯೆಹೋವ ದೇವರನ್ನು ಕೊಂಡಾಡಿರಿ ಸ್ತುತಿಸಿರಿ.

[21] ಯೆರೂಸಲೇಮಿನಲ್ಲಿ ವಾಸಿಸುವವ ಯೆಹೋವ ದೇವರನ್ನು ಕೊಂಡಾಡಿ ಸ್ತುತಿಸಿರಿ; ಅವರ ಕೀರ್ತಿಯು ಚೀಯೋನಿನಿಂದ ಹೊರಗೂ ಹಬ್ಬಲಿ. ಯೆಹೋವ ದೇವರಿಗೆ ಸ್ತೋತ್ರ.

ಕೀರ್ತನೆಗಳು — Chapters