[1] ದೇವರೇ ಕರುಣಿಸು, ಏಕೆಂದರೆ ಮನುಷ್ಯರು ನನ್ನನ್ನು ಬೆನ್ನಟ್ಟುತ್ತಿದ್ದಾರೆ. ದಿನವೆಲ್ಲಾ ವಿರೋಧಿಸುತ್ತಾ ನನ್ನನ್ನು ಬಾಧಿಸುತ್ತಿದ್ದಾರೆ.
[2] ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ಬೆನ್ನಟ್ಟುತ್ತಿದ್ದಾರೆ. ಗರ್ವದಿಂದ ನನಗೆ ವಿರೋಧವಾಗಿ ಯುದ್ಧ ಮಾಡುತ್ತಿದ್ದಾರೆ.
[3] ನಾನು ಭಯಪಡುವ ಸಮಯದಲ್ಲಿ ನಿಮ್ಮಲ್ಲಿ ಭರವಸೆ ಇಡುವೆನು.
[4] ದೇವರ ಮಾತುಗಳಲ್ಲಿ ನಾನು ಹೆಮ್ಮೆಪಡುವೆನು. ದೇವರಲ್ಲಿಯೇ ಭರವಸೆ ಇಡುವೆನು, ನಾನು ಭಯಪಡುವುದಿಲ್ಲ. ಸಾಯುವ ಮನುಷ್ಯನು ನನಗೇನು ಮಾಡಬಲ್ಲ?
[5] ಶತ್ರುಗಳು ನನ್ನ ಮಾತುಗಳನ್ನು ಸದಾ ಅಪಾರ್ಥ ಮಾಡಿಕೊಳ್ಳುತ್ತಾರೆ. ನನಗೆ ವಿರೋಧವಾಗಿರುವ ಅವರ ಆಲೋಚನೆಗಳೆಲ್ಲಾ ಕೇಡಿಗಾಗಿವೆ.
[6] ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ. ನನ್ನ ಪ್ರಾಣ ತೆಗೆಯಲು ಕುತೂಹಲದಿಂದ ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ.
[7] ಅಪರಾಧದಿಂದ ಅವರು ತಪ್ಪಿಸಿಕೊಂಡಾರೋ? ದೇವರೇ ಜನರನ್ನು ಕಠಿಣವಾಗಿ ದಂಡಿಸಿರಿ.
[8] ನನ್ನ ಗೋಳಾಟವನ್ನು ಎಣಿಕೆ ಮಾಡಿರಿ, ನಿಮ್ಮ ಸುರುಳಿಯಲ್ಲಿ ನನ್ನ ಕಣ್ಣೀರ ಲೆಕ್ಕಮಾಡಿರಿ, ಅವು ನಿಮ್ಮ ಗ್ರಂಥದಲ್ಲಿ ಬರೆದಿದೆಯಲ್ಲವೇ?
[9] ನಾನು ನಿಮಗೆ ಮೊರೆಯಿಟ್ಟಾಗ, ನನ್ನ ಶತ್ರುಗಳು ಹಿಂದಿರುಗುವರು. ಇದರಿಂದ ದೇವರು ನನಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವೆನು.
[10] ನಾನು ದೇವರಲ್ಲಿಯೂ ದೇವರ ವಾಕ್ಯದಲ್ಲಿಯೂ ಹೆಮ್ಮೆಪಡುವೆನು. ಹೌದು, ದೇವರಲ್ಲಿಯೂ ಯೆಹೋವ ದೇವರ ವಾಕ್ಯದಲ್ಲಿಯೂ ಹೆಮ್ಮೆಪಡುವೆನು.
[11] ನಾನು ದೇವರಲ್ಲಿ ಭರವಸೆಯಿಡುವೆನು. ನಾನು ಭಯಪಡುವುದಿಲ್ಲ. ಮಾನವನು ನನಗೇನು ಮಾಡುವನು?
[12] ನನ್ನ ದೇವರೇ ನಾನು ನಿಮಗೆ ಸಲ್ಲಿಸಿದ ಹರಕೆಗಳಿಗೆ ಅಧೀನವಾಗಿದ್ದೇನೆ. ನಾನು ಉಪಕಾರ ಸ್ತುತಿಯ ಕಾಣಿಕೆಗಳನ್ನು ನಿಮಗೆ ಸಲ್ಲಿಸುವೆನು.
[13] ಏಕೆಂದರೆ ನೀವು ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀರಿ. ನಾನು ಜೀವದ ಬೆಳಕಿನಲ್ಲಿ ನಿಮ್ಮ ಮುಂದೆ ನಡೆದುಕೊಳ್ಳುವ ಹಾಗೆ ನೀವು ನನ್ನ ಪಾದಗಳನ್ನು ಎಡವದಂತೆ ಕಾಪಾಡಿದ್ದೀರಿ.