[1] ದೇವರು ನಿಜವಾಗಿಯೂ ಇಸ್ರಾಯೇಲಿಗೂ ಶುದ್ಧ ಹೃದಯದವರಿಗೂ ಒಳ್ಳೆಯವರು.
[2] ನನ್ನ ಪಾದಗಳು ಬಹಳಮಟ್ಟಿಗೆ ತಪ್ಪುವ ಹಾಗಿದ್ದವು. ನನ್ನ ಹೆಜ್ಜೆಗಳು ಜಾರುವುದಕ್ಕೆ ಬಹು ಸಮೀಪವಾಗಿದ್ದವು.
[3] ಏಕೆಂದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡಾಗ ಮೂರ್ಖರ ಮೇಲೆ ಹೊಟ್ಟೆಕಿಚ್ಚುಪಟ್ಟೆನು.
[4] ಏಕೆಂದರೆ ಅವರಿಗೆ ಹೋರಾಟಗಳು ಇಲ್ಲ. ಅವರ ದೇಹವು ಆರೋಗ್ಯಕರ ಮತ್ತು ದೃಢವಾಗಿದೆ.
[5] ಇತರರ ಹಾಗೆ ಅವರಿಗೆ ಯಾವುದೇ ಹೊರೆ ಇಲ್ಲ ಮಾನವರಿಗೆ ತಗುಲುವ ಯಾವುದೇ ವ್ಯಾಧಿಯೂ ಅವರಿಗೆ ತಗುಲುವುದಿಲ್ಲ.
[6] ಆದ್ದರಿಂದ ಗರ್ವವು ಕಂಠಮಾಲೆಯಂತೆ ಅವರನ್ನು ಸುತ್ತಿದೆ. ದಬ್ಬಾಳಿಕೆ ಅವರನ್ನು ಬಟ್ಟೆಯ ಹಾಗೆ ಮುಚ್ಚುತ್ತಿದೆ.
[7] ಅವರ ಹೃದಯವು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ; ಅವರ ದುಷ್ಕಲ್ಪನೆಗಳಿಗೆ ಮಿತಿಯೇ ಇಲ್ಲ.
[8] ಅವರು ಹಾಸ್ಯಮಾಡುವವರಾಗಿ ಕೇಡನ್ನೇ ಮಾತನಾಡುತ್ತಾರೆ ದಬ್ಬಾಳಿಕೆ ಮಾಡಲು ಗರ್ವದಿಂದ ಅವರು ಬೆದರಿಕೆ ಹಾಕುತ್ತಾರೆ.
[9] ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ. ಭೂಲೋಕದಲ್ಲೆಲ್ಲಾ ಅವರ ಮಾತು ಮುಂದುವರೆದಿದೆ.
[10] ಆದ್ದರಿಂದ ಜನರು ಅವರ ಕಡೆಗೆ ತಿರುಗುತ್ತಾರೆ. ಜನರಿಗೆ ಅವರ ಮಾತು ಬಹಳವಾಗಿ ದೊರೆಯುತ್ತದೆ.
[11] ಅವರು, “ದೇವರಿಗೆ ಹೇಗೆ ಗೊತ್ತಾಗುವುದು? ಮಹೋನ್ನತನಿಗೆ ಏನಾದರೂ ತಿಳಿಯಲು ಸಾಧ್ಯವೇ?” ಎನ್ನುತ್ತಾರೆ.
[12] ದುಷ್ಟರು ನಿಶ್ಚಿಂತರಾಗಿ, ಐಶ್ವರ್ಯದಲ್ಲಿ ಇವರು ಹೆಚ್ಚುತ್ತಾರೆ.
[13] ನನ್ನ ಹೃದಯವನ್ನು ಶುದ್ಧ ಮಾಡಿಕೊಂಡಿದ್ದು ವ್ಯರ್ಥವೋ? ನನ್ನ ಅಂಗೈಗಳನ್ನು ನಿರಪರಾಧದಲ್ಲಿ ತೊಳೆದಿದ್ದೂ ವ್ಯರ್ಥವೋ?
[14] ಏಕೆಂದರೆ ನಾನು ದಿನವೆಲ್ಲಾ ಬಾಧೆಪಡುತ್ತಿದ್ದೇನೆ. ಪ್ರತಿ ಉದಯವೂ ನನಗೆ ಹೊಸ ಶಿಕ್ಷೆಯಾಗುತ್ತಿದೆ.
[15] ನಾನು ಈ ಪ್ರಕಾರ ಬಾಯಿತೆರೆದು ಮಾತಾಡಿದ್ದರೆ, ನಿಮ್ಮ ಪ್ರಜೆಗೆ ದ್ರೋಹಿಯಾಗುತ್ತಿದ್ದೆನು.
[16] ಇದನ್ನೆಲ್ಲಾ ತಿಳಿದುಕೊಳ್ಳುವುದಕ್ಕೆ ನಾನು ಪ್ರಯತ್ನಿಸಿದಾಗ, ಅದು ನನಗೆ ಬಹಳವಾಗಿ ಕಷ್ಟಕರವಾಗಿತ್ತು.
[17] ನಾನು ದೇವರ ಪರಿಶುದ್ಧ ಆಲಯಕ್ಕೆ ಬರುವವರೆಗೆ ನನಗೆ ಅರ್ಥವಾಗಲಿಲ್ಲ. ಅನಂತರ ಅವರ ಅಂತ್ಯವನ್ನು ನನಗೆ ಅರ್ಥವಾಯಿತು.
[18] ನಿಶ್ಚಯವಾಗಿ ನೀವು ಜಾರುವ ಸ್ಥಳಗಳಲ್ಲಿ ಅವರನ್ನು ಬಿಟ್ಟಿದ್ದೀರಿ. ಅವರನ್ನು ದಂಡಿಸಿಬಿಡು.
[19] ಕ್ಷಣಮಾತ್ರದಲ್ಲಿ ಅವರು ನಾಶವಾದರು. ಅವರು ದಿಗಿಲುಬಿದ್ದು ಸಂಪೂರ್ಣವಾಗಿ ನಾಶವಾದರು.
[20] ಅವರು ನಿದ್ದೆಯಿಂದ ಎಚ್ಚರಗೊಂಡ ಕನಸಿನಂತೆ ಇರುತ್ತಾರೆ. ಯೆಹೋವ ದೇವರೇ, ನಿಮ್ಮ ದೃಷ್ಟಿಯಲ್ಲಿ ಅವರು ಅಲ್ಪರಾಗಿರಲಿ.
[21] ನನ್ನ ಹೃದಯವು ದುಃಖಗೊಂಡು, ನನ್ನ ಆತ್ಮವು ಕಹಿಗೊಂಡಿತು.
[22] ಆಗ ನಾನು ಮೂರ್ಖನಾಗಿ ಏನೂ ತಿಳಿಯದೆ ನಿಮ್ಮ ಮುಂದೆ ಪಶುವಿನಂತೆ ಇದ್ದೆನು.
[23] ಆದರೂ ನಾನು ನಿಮ್ಮ ಸಂಗಡ ಯಾವಾಗಲೂ ಇದ್ದೇನೆ. ನೀವು ನನ್ನ ಬಲಗೈಯನ್ನು ಹಿಡಿದಿದ್ದೀರಿ.
[24] ನಿಮ್ಮ ಆಲೋಚನೆಯಂತೆ ನನ್ನನ್ನು ನಡೆಸಿ, ತರುವಾಯ ಮಹಿಮೆಗೆ ನನ್ನನ್ನು ಸೇರಿಸುವಿರಿ.
[25] ಪರಲೋಕದಲ್ಲಿ ನನಗೆ ನೀವಲ್ಲದೆ ಮತ್ಯಾರಿದ್ದಾರೆ? ಇಹಲೋಕದಲ್ಲಿ ನಿಮ್ಮನ್ನಲ್ಲದೆ ಇನ್ನಾರನ್ನೂ ನಾನು ಬಯಸುವುದಿಲ್ಲ.
[26] ನನ್ನ ತನುಮನಗಳು ಕುಂದುತ್ತವೆ; ಆದರೆ ದೇವರು ಯುಗಯುಗಕ್ಕೂ ನನ್ನ ಹೃದಯದ ಬಲವೂ, ನನ್ನ ಪಾಲೂ ಆಗಿದ್ದಾರೆ.
[27] ದೇವರೇ, ನಿಮ್ಮಿಂದ ದೂರವಾಗಿರುವವರು ನಾಶವಾಗುತ್ತಾರೆ; ನಿಮ್ಮನ್ನು ಬಿಟ್ಟು ದ್ರೋಹ ಮಾಡುವವರೆಲ್ಲರೂ ದಂಡನೆಗೆ ಗುರಿಯಾಗುವರು.
[28] ನನಗಾದರೋ ದೇವರ ಸಮೀಪಕ್ಕೆ ಬರುವುದೇ ಒಳ್ಳೆಯದು. ನಿಮ್ಮ ಕ್ರಿಯೆಗಳನ್ನೆಲ್ಲಾ ಸಾರುವುದಕ್ಕೆ ಸಾರ್ವಭೌಮ ಯೆಹೋವ ದೇವರಲ್ಲಿ ನನ್ನ ಭರವಸೆಯನ್ನು ಇಟ್ಟಿದ್ದೇನೆ.