Skip to content
Opens in a new window
Listen to this chapter • 2:44

[1] ಯೆಹೋವ ದೇವರೇ, ತಲತಲಾಂತರಗಳಲ್ಲಿ ನೀವು ನಮ್ಮ ವಾಸಸ್ಥಾನವಾಗಿದ್ದೀರಿ.

[2] ಬೆಟ್ಟಗಳು ಹುಟ್ಟುವುದಕ್ಕಿಂತ ಮುಂಚೆಯೂ ನೀವು ಲೋಕವನ್ನೂ ನಿರ್ಮಿಸುವುದಕ್ಕಿಂತ ಮುಂಚೆಯೂ ಯುಗಯುಗಾಂತರಕ್ಕೂ ನೀವು ದೇವರಾಗಿದ್ದೀರಿ.

[3] ನೀವು ಮನುಷ್ಯರನ್ನು ಪುನಃ ಮಣ್ಣಿಗೆ ಸೇರಿಸುತ್ತೀರಿ. “ಮನುಷ್ಯ ಪುತ್ರರೇ, ಮಣ್ಣಿಗೆ ಮರಳಿರಿ,” ಎಂದು ಹೇಳುತ್ತೀರಿ.

[4] ಸಾವಿರ ವರ್ಷಗಳು ನಿಮ್ಮ ದೃಷ್ಟಿಗೆ ಕಳೆದುಹೋದ ಒಂದು ದಿವಸದ ಹಾಗೆಯೂ ರಾತ್ರಿ ಜಾವದ ಹಾಗೆಯೂ ಇವೆ.

[5] ನೀವು ಜನರನ್ನು ಮರಣ ನಿದ್ರೆಯ ಪ್ರವಾಹದಂತೆ ಹೋಗಲು ಅನುಮತಿಸುತ್ತೀರಿ. ಅವರು ಬೆಳಿಗ್ಗೆ ಬೆಳೆಯುವ ಹುಲ್ಲಿನ ಹಾಗೆ ಇದ್ದಾರೆ.

[6] ಅದು ಬೆಳಿಗ್ಗೆ ಅರಳಿ ಬೆಳೆಯುತ್ತದೆ. ಸಂಜೆಯಲ್ಲಿ ಒಣಗಿ ಬಿದ್ದು ಹೋಗುತ್ತದೆ.

[7] ನಾವು ನಿಮ್ಮ ಬೇಸರದಿಂದ ಬಾಧಿತರಾಗಿದ್ದೇವೆ. ನಿಮ್ಮ ಖಂಡನೆಯಿಂದ ತಲ್ಲಣಿಸುತ್ತೇವೆ.

[8] ನಮ್ಮ ಅಕ್ರಮಗಳನ್ನು ನಿಮ್ಮ ಮುಂದೆ ಇಟ್ಟಿದ್ದೀರಿ. ನಾವು ಮುಚ್ಚಿಟ್ಟುಕೊಂಡಿರುವ ಪಾಪಗಳು ನಿಮ್ಮ ಸನ್ನಿಧಿಯಲ್ಲಿವೆ.

[9] ನಮ್ಮ ದಿವಸಗಳೆಲ್ಲಾ ನಿಮ್ಮ ಖಂಡನೆಯಿಂದಲೇ ದಾಟಿಹೋದವು. ನಮ್ಮ ವರ್ಷಗಳನ್ನು ನಿಟ್ಟುಸಿರಿನಲ್ಲಿ ಕಳೆಯುತ್ತಿದ್ದೇವೆ.

[10] ನಮ್ಮ ಜೀವನದ ದಿನಗಳು ಎಪ್ಪತ್ತು ವರ್ಷ, ಬಲದಿಂದಿದ್ದರೆ ಎಂಬತ್ತು ವರ್ಷ. ಆದಾಗ್ಯೂ ಅವುಗಳ ಉತ್ತಮ ವರ್ಷಗಳು ಕಷ್ಟವೂ ಪ್ರಯಾಸವೂ ಆಗಿವೆ. ನಮ್ಮ ದಿನಗಳು ಬೇಗ ತೀರಿಹೋಗುತ್ತವೆ. ನಾವು ಹಾರಿಹೋಗುತ್ತೇವೆ.

[11] ನಿಮ್ಮ ಕೋಪದ ಶಕ್ತಿಯನ್ನು ತಿಳಿದವರ‍್ಯಾರು? ನಿಮ್ಮ ಮೇಲಿನ ಭಯಭಕ್ತಿಗೆ ಕಾರಣವಾಗಿರುವ ನಿಮ್ಮ ಖಂಡನೆಯನ್ನು ಗ್ರಹಿಸುವವರ‍್ಯಾರು?

[12] ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ, ನಮ್ಮ ದಿನಗಳನ್ನು ಲೆಕ್ಕಿಸುವುದಕ್ಕೆ ನಮಗೆ ಕಲಿಸಿಕೊಡಿರಿ.

[13] ಯೆಹೋವ ದೇವರೇ, ಮನಸ್ಸು ಮಾರ್ಪಡಿಸಿಕೊಳ್ಳಿರಿ. ನೀವು ಎಷ್ಟರವರೆಗೆ ಬೇಸರಗೊಳ್ಳುವಿರಿ? ನಿಮ್ಮ ಸೇವಕರ ವಿಷಯದಲ್ಲಿ ಅನುಕಂಪ ತೋರಿಸಿರಿ.

[14] ಬೆಳಿಗ್ಗೆ ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನಮ್ಮನ್ನು ತೃಪ್ತಿಪಡಿಸಿರಿ. ಆಗ ನಮ್ಮ ದಿನಗಳೆಲ್ಲಾ ಉತ್ಸಾಹ ಧ್ವನಿಗೈದು ನಿಮ್ಮಲ್ಲಿ ಸಂತೋಷಪಡುವೆವು.

[15] ನೀವು ನಮ್ಮನ್ನು ಬಾಧಿಸಿದಷ್ಟು ಕಾಲ ಹರ್ಷಗೊಳಿಸಿರಿ. ನಾವು ತೊಂದರೆಯನ್ನು ನೋಡಿದಷ್ಟು ವರ್ಷಗಳು ನಮ್ಮನ್ನು ಸಂತೋಷಪಡಿಸಿರಿ.

[16] ನಿಮ್ಮ ಸೇವಕರಿಗೆ ನಿಮ್ಮ ಕೃತ್ಯಗಳನ್ನು ಪ್ರಕಟಿಸಿರಿ. ಅವರ ಮಕ್ಕಳಿಗೆ ನಿಮ್ಮ ಪ್ರಭೆಯೂ ತೋರಿ ಬರಲಿ.

[17] ನಮ್ಮ ದೇವರಾದ ಯೆಹೋವ ದೇವರ ಮೆಚ್ಚುಗೆಯು ನಮ್ಮ ಮೇಲೆ ಇರಲಿ. ನಮ್ಮ ಕೈಗಳ ಕೆಲಸವನ್ನು ಸ್ಥಿರಪಡಿಸಿರಿ. ಹೌದು, ನಮ್ಮ ಕೈಗಳ ಕೆಲಸವನ್ನು ಸ್ಥಾಪಿಸಿರಿ.

ಕೀರ್ತನೆಗಳು — Chapters