Skip to content
Opens in a new window
Listen to this chapter • 3:35

[1] ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡಿರಿ, ನನ್ನ ವಿಜ್ಞಾಪನೆಗೆ ನಿಮ್ಮನ್ನು ಮರೆಮಾಡಿಕೊಳ್ಳಬೇಡಿರಿ.

[2] ನನ್ನನ್ನು ಆಲೈಸಿರಿ, ನನಗೆ ಉತ್ತರಕೊಡಿರಿ. ನಾನು ನನ್ನ ಚಿಂತೆಯಿಂದ ದುಃಖಿಸುತ್ತಾ ಬೇಸರವಾಗಿದ್ದೇನೆ.

[3] ಶತ್ರುವಿನ ಗರ್ಜನೆಯಿಂದಲೂ ದುಷ್ಟರ ಬೆದರಿಕೆಯಿಂದಲೂ ನರಳುತ್ತೇನೆ. ಏಕೆಂದರೆ ಅವರು ಅಪರಾಧವನ್ನು ನನ್ನ ಮೇಲೆ ಬರಮಾಡಿ, ಕೋಪದಿಂದ ನನ್ನನ್ನು ಹಗೆ ಮಾಡುತ್ತಾರೆ.

[4] ನನ್ನ ಹೃದಯವು ನನ್ನ ಅಂತರಂಗದಲ್ಲಿ ನೊಂದುಕೊಳ್ಳುತ್ತದೆ. ಮರಣದ ಬೆದರಿಕೆಗಳು ನನ್ನ ಮೇಲೆ ಬಿದ್ದಿವೆ.

[5] ಭಯವೂ ನಡುಗೂ ನನಗೆ ಬಂದಿವೆ; ಭೀತಿಯು ನನ್ನನ್ನು ಮುಚ್ಚಿದೆ.

[6] “ಓ, ಪಾರಿವಾಳದಂತೆ ನನಗೆ ರೆಕ್ಕೆಗಳು ಇರುತ್ತಿದ್ದರೆ, ಹಾರಿಹೋಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದೆ.

[7] ನಾನು ದೂರ ಹಾರಿಹೋಗಿ ಮರುಭೂಮಿಯಲ್ಲಿ ವಾಸಿಸುತ್ತಿದ್ದೆ.

[8] ಚಂಡಮಾರುತದಿಂದಲೂ ಬಿರುಗಾಳಿಯಿಂದಲೂ ತಪ್ಪಿಸಿಕೊಳ್ಳುತ್ತಿದ್ದೆ,” ಎಂದುಕೊಂಡೆನು.

[9] ಯೆಹೋವ ದೇವರೇ, ದುಷ್ಟರನ್ನು ಕಳವಳಗೊಳಿಸಿರಿ, ಅವರ ಮಾತುಗಳನ್ನು ನಿಲ್ಲಿಸಿಬಿಡಿರಿ. ಬಲಾತ್ಕಾರವನ್ನೂ ವಿವಾದವನ್ನೂ ಪಟ್ಟಣದಲ್ಲಿ ನಾನು ಕಾಣುತ್ತಿದ್ದೇನೆ.

[10] ಅವರು ಹಗಲಿರುಳು ಪಟ್ಟಣದ ಗೋಡೆಗಳನ್ನು ಸುತ್ತುತ್ತಾರೆ. ಕೇಡು ಅನಾಚಾರಗಳು ಅದರ ಮಧ್ಯದಲ್ಲಿ ಇವೆ.

[11] ನಾಶಕರ ಶಕ್ತಿಗಳು ನಗರ ಮಧ್ಯದಲ್ಲಿ ಇವೆ. ಬೀದಿಗಳೊಳಗಿಂದ ಬೆದರಿಕೆಯೂ ವಂಚನೆಯೂ ತೊಲಗುವುದಿಲ್ಲ.

[12] ನನ್ನನ್ನು ನಿಂದಿಸುವವನು ಶತ್ರುವಲ್ಲ, ಶತ್ರುವಾದರೆ ತಾಳಿಕೊಳ್ಳುತ್ತಿದ್ದೆ. ನನಗೆ ವಿರೋಧವಾಗಿರುವವನು ನನ್ನ ವೈರಿಯಾಗಿದ್ದರೆ, ಅವನಿಂದ ಅಡಗಿಕೊಳ್ಳುತ್ತಿದ್ದೆನು.

[13] ಆದರೆ ನನ್ನ ಜೊತೆಗಾರನೂ ನನ್ನ ಆಪ್ತನೂ, ನನಗೆ ಸಮನಾದವನೇ ವಿರೋಧವಾಗಿದ್ದಾನೆ.

[14] ದೇವರ ಆಲಯಕ್ಕೆ ಆರಾಧಕರ ಗುಂಪಿನೊಂದಿಗೆ ನಾವಿಬ್ಬರೂ ನಡೆದು ಹೋಗುವಾಗ ಮಧುರ ಅನ್ಯೋನ್ಯತೆಯನ್ನು ಅನುಭವಿಸಿದೆವು.

[15] ಮರಣ ನನ್ನ ವೈರಿಗಳನ್ನು ತಟ್ಟನೆ ಹಿಡಿಯಲಿ. ಜೀವಸಹಿತ ಪಾತಾಳಕ್ಕೆ ಅವರು ಇಳಿಯಲಿ, ಅವರ ಮನೆಯಲ್ಲಿ ದುಷ್ಟತನವು ಇದೆ.

[16] ಆದರೆ ನಾನು ದೇವರನ್ನು ಕರೆಯುವೆನು. ಯೆಹೋವ ದೇವರು ನನ್ನನ್ನು ರಕ್ಷಿಸುವರು.

[17] ಸಂಜೆ, ಮುಂಜಾನೆ, ಮಧ್ಯಾಹ್ನಗಳಲ್ಲಿ ಹಂಬಲಿಸಿ ಮೊರೆಯಿಡುವೆನು. ದೇವರು ನನ್ನ ಧ್ವನಿಯನ್ನು ಕೇಳುವರು.

[18] ಅನೇಕರು ನನ್ನನ್ನು ವಿರೋಧಿಸಿದರೂ ನನಗೆ ವಿರೋಧವಾಗಿ ಆಗುವ ಯುದ್ಧಗಳಲ್ಲಿ ದೇವರು ನನ್ನನ್ನು ಯಾವುದೇ ಹಾನಿಯಾಗದಂತೆ ವಿಮೋಚಿಸುವರು.

[19] ಆದಿಯಿಂದ ಸಿಂಹಾಸನಾರೂಢರಾಗಿರುವ ದೇವರು, ಅವರ ಮೊರೆಯನ್ನು ಕೇಳಿ ಅವರನ್ನು ತಗ್ಗಿಸುವರು, ಏಕೆಂದರೆ, ಅವರು ದೇವರಿಗೆ ಭಯಪಡುವುದಿಲ್ಲ. ದೇವರು ಬದಲಾಗುವುದಿಲ್ಲ.

[20] ನನ್ನ ಜೊತೆಗಾರನು ತನ್ನ ಸ್ನೇಹಿತನ ಮೇಲೆ ದಾಳಿಮಾಡಿದ್ದಾನೆ. ತಾನು ಮಾಡಿದ ಒಡಂಬಡಿಕೆಯನ್ನು ಭಂಗಪಡಿಸಿದ್ದಾನೆ.

[21] ಅವನ ಬಾಯಿಯ ಮಾತುಗಳು ಬೆಣ್ಣೆಗಿಂತ ನುಣ್ಣಗಾಗಿವೆ; ಆದರೆ ಅವನ ಹೃದಯದಲ್ಲಿ ಕಾಳಗವಿದೆ; ಅವನ ಮಾತುಗಳು ಎಣ್ಣೆಗಿಂತ ನಯವಾಗಿವೆ; ಆದರೆ ಅವು ಬಿಚ್ಚುಗತ್ತಿಗಳಾಗಿವೆ.

[22] ಯೆಹೋವ ದೇವರ ಮೇಲೆ ನಿಮ್ಮ ಭಾರವನ್ನು ಹಾಕಿರಿ. ಅವರು ನಿಮಗೆ ಆಧಾರವಾಗಿರುವರು. ದೇವರು ಎಂದೆಂದಿಗೂ ನೀತಿವಂತನನ್ನು ಕದಲಗೊಡಿಸುವುದಿಲ್ಲ.

[23] ಆದರೆ ದೇವರೇ, ದುಷ್ಟರನ್ನು ನಾಶದ ಕುಣಿಯಲ್ಲಿ ಇಳಿಯ ಮಾಡುವಿರಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಕಾಲದಲ್ಲಿ ಅರ್ಧವನ್ನೂ ಜೀವಿಸುವುದಿಲ್ಲ. ನಾನಾದರೋ ನಿಮ್ಮಲ್ಲಿ ಭರವಸವಿಡುತ್ತೇನೆ.

ಕೀರ್ತನೆಗಳು — Chapters