Skip to content
Opens in a new window
Listen to this chapter • 5:21

[1] ದೇವರೇ, ನನ್ನನ್ನು ರಕ್ಷಿಸಿರಿ. ಏಕೆಂದರೆ, ಪ್ರವಾಹ ಕುತ್ತಿಗೆಯ ವರೆಗೆ ಬಂದಿದೆ.

[2] ನೆಲವಿಲ್ಲದಿರುವ ಆಳವಾದ ಕೆಸರಿನಲ್ಲಿ ನಾನು ಮುಳುಗುತ್ತಿದ್ದೇನೆ. ಪ್ರವಾಹಗಳು ನನ್ನ ಮೇಲೆ ಹಾದುಹೋಗುವ ನೀರಿನ ಅಗಾಧಕ್ಕೆ ನಾನು ಬಂದಿದ್ದೇನೆ.

[3] ನಾನು ಮೊರೆಯಿಟ್ಟು ದಣಿದಿದ್ದೇನೆ. ನನ್ನ ಗಂಟಲು ಒಣಗಿದೆ. ನಾನು ದೇವರನ್ನು ಎದುರು ನೋಡುವುದರಿಂದ ನನ್ನ ಕಣ್ಣು ಕ್ಷೀಣವಾಗಿವೆ.

[4] ಕಾರಣವಿಲ್ಲದೆ ನನ್ನನ್ನು ದ್ವೇಷಿಸುವವರು ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ. ನನ್ನನ್ನು ನಾಶಮಾಡ ಬಯಸುವವರೂ ಕಾರಣವಿಲ್ಲದೆ ನನಗೆ ಶತ್ರುಗಳಾಗಿದ್ದಾರೆ. ನಾನು ಅಪಹರಿಸದಿದ್ದರೂ ದಂಡ ಕೊಡಬೇಕಾಯಿತು.

[5] ದೇವರೇ, ನೀವು ನನ್ನ ಮೂರ್ಖತನವನ್ನು ತಿಳಿದಿದ್ದೀರಿ. ನನ್ನ ಅಪರಾಧಗಳು ನಿಮಗೆ ಮರೆಯಾಗಿಲ್ಲ.

[6] ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮನ್ನು ನಂಬಿದವರಿಗೆ ನನ್ನಿಂದ ನಿರಾಶೆಯಾಗದಿರಲಿ; ಇಸ್ರಾಯೇಲರ ದೇವರೇ, ನಿಮ್ನನ್ನು ಹುಡುಕುವವರು ನನ್ನಿಂದ ಅಪಮಾನಕ್ಕೆ ಗುರಿಯಾಗದಿರಲಿ.

[7] ನಾನು ನಿಮ್ಮ ನಿಮಿತ್ತ ನಿಂದೆಗೆ ಒಳಗಾಗಿದ್ದೇನೆ. ಅವಮಾನವು ನನ್ನ ಮುಖವನ್ನು ಮುಚ್ಚಿದೆ.

[8] ನನ್ನ ಸಹೋದರರಿಗೆ ಅನ್ಯನಾಗಿದ್ದೇನೆ. ನನ್ನ ಒಡಹುಟ್ಟಿದವರಿಗೇ ಪರಕೀಯನಾಗಿದ್ದೇನೆ.

[9] ಏಕೆಂದರೆ ನಿಮ್ಮ ಆಲಯದ ಮೇಲಿನ ಆಸಕ್ತಿಯು ಬೆಂಕಿಯಂತೆ ನನ್ನನ್ನು ದಹಿಸಿಬಿಟ್ಟಿದೆ. ನಿಮ್ಮನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಿದ್ದಿವೆ.

[10] ನಾನು ಅತ್ತು ಉಪವಾಸ ಮಾಡಿದಾಗ ನಿಂದೆಗೆ ಒಳಗಾಗಬೇಕಾಯಿತು.

[11] ಗೋಣಿತಟ್ಟನ್ನು ನನ್ನ ಉಡುಪಾಗಿ ಮಾಡಿಕೊಂಡಿದ್ದೇನೆ. ಇದರಿಂದ ನಾನು ಅವರಿಗೆ ಗಾದೆಯ ಮಾತಾದೆನು.

[12] ಊರುಬಾಗಿಲಲ್ಲಿ ಕೂತುಕೊಳ್ಳುವವರು ಪರಿಹಾಸ್ಯ ಮಾಡುತ್ತಾರೆ. ನಾನು ಮದ್ಯಪಾನಿಗಳಿಗೆ ಗಾಯನ ವಿಷಯವಾಗಿದ್ದೇನೆ.

[13] ಯೆಹೋವ ದೇವರೇ, ನಾನಾದರೋ ನಿಮಗೆ ಮೊರೆಯಿಟ್ಟಿದ್ದೇನೆ. ಇದು ನಿಮ್ಮ ಮೆಚ್ಚಿಕೆಯ ಸಕಾಲ. ಓ ದೇವರೇ, ನಿಮ್ಮ ಮಹಾಪ್ರೀತಿಯಿಂದ ನನಗೆ ನಿಮ್ಮ ನಿಶ್ಚಯ ರಕ್ಷಣೆಯನ್ನು ದಯಪಾಲಿಸಿರಿ.

[14] ನನ್ನನ್ನು ಕೆಸರಿನೊಳಗಿಂದ ಬಿಡಿಸಿರಿ. ನಾನು ಮುಳುಗದೆ ಇರಲಿ. ನನ್ನನ್ನು ದ್ವೇಷಿಸಿಸುವವರಿಂದಲೂ ನೀರಿನ ಅಗಾಧದಿಂದಲೂ ನನಗೆ ಬಿಡುಗಡೆ ಆಗಲಿ.

[15] ನೀರಿನ ಪ್ರವಾಹವು ನನ್ನ ಮೇಲೆ ಹಾದುಹೋಗದೆ ಇರಲಿ. ಅಗಾಧವು ನನ್ನನ್ನು ನುಂಗದೆ ಇರಲಿ. ಕುಣಿಯು ನನ್ನ ಮೇಲೆ ತನ್ನ ಬಾಯನ್ನು ಮುಚ್ಚದೆ ಇರಲಿ.

[16] ಯೆಹೋವ ದೇವರೇ, ನಿಮ್ಮ ಪ್ರೀತಿಯ ಒಳ್ಳೆಯತನದಿಂದ ನನಗೆ ಉತ್ತರಕೊಡಿರಿ. ನಿಮ್ಮ ಮಹಾ ಕರುಣೆಯಿಂದ ನನ್ನ ಕಡೆಗೆ ತಿರುಗಿರಿ.

[17] ನಿಮ್ಮ ಮುಖವನ್ನು ನಿಮ್ಮ ಸೇವಕನಿಗೆ ಮರೆಮಾಡಬೇಡಿರಿ. ನಾನು ಇಕ್ಕಟ್ಟಿನಲ್ಲಿದ್ದೇನೆ. ಬೇಗ ನನಗೆ ಉತ್ತರಕೊಡಿರಿ.

[18] ನನಗೆ ಸಮೀಪವಾಗಿ ನನ್ನನ್ನು ಕಾಪಾಡಿರಿ. ನನ್ನ ಶತ್ರುಗಳ ನಿಮಿತ್ತ ನನ್ನನ್ನು ಬಿಡಿಸಿರಿ.

[19] ನೀವು ನನಗಿರುವ ನಿಂದೆ, ನಾಚಿಕೆ ಹಾಗೂ ನನ್ನ ಅವಮಾನವನ್ನೂ ತಿಳಿದಿದ್ದೀರಿ. ನನ್ನ ವೈರಿಗಳೆಲ್ಲರು ನಿಮ್ಮ ಮುಂದೆ ಇದ್ದಾರೆ.

[20] ನಿಂದೆಯು ನನ್ನ ಹೃದಯವನ್ನು ಮುರಿದಿದೆ. ನನ್ನನ್ನು ನಿಸ್ಸಹಾಯಕನನ್ನಾಗಿ ಮಾಡಿದೆ. ಅನುತಾಪಕ್ಕೋಸ್ಕರ ಕೆಲವರನ್ನು ನಿರೀಕ್ಷಿಸಿದೆನು, ಆದರೆ ಒಬ್ಬರೂ ಇರಲಿಲ್ಲ. ಸಂತೈಸುವವರಿಗೋಸ್ಕರ ಸಹ ಎದುರು ನೋಡಿದೆನು, ಆದರೆ ಯಾರೂ ಸಿಕ್ಕಲಿಲ್ಲ.

[21] ನನ್ನ ಆಹಾರಕ್ಕಾಗಿ ಕಹಿಯಾದದ್ದನ್ನು ಕೊಟ್ಟರು. ನನ್ನ ದಾಹಕ್ಕಾಗಿ ನನಗೆ ಹುಳಿರಸವನ್ನು ಕುಡಿಯಲು ಕೊಟ್ಟರು.

[22] ಅವರ ಊಟವೇ ಅವರಿಗೆ ಉರುಲಾಗಲಿ. ಸುಖವಾಗಿರುವವರಿಗೆ ಅದು ಬೋನಾಗಲಿ.

[23] ಅವರ ಕಣ್ಣುಗಳು ಕಾಣದ ಹಾಗೆ ಕತ್ತಲಾಗಲಿ. ಮತ್ತು ಅವರ ಬೆನ್ನು ಎಂದೆಂದಿಗೂ ಬಗ್ಗಿ ಹೋಗಲಿ

[24] ಅವರು ಕೋಪಕ್ಕೆ ಗುರಿಯಾಗಲಿ. ಅವರು ಬೇಸರಕ್ಕೆ ತುತ್ತಾಗಲಿ.

[25] ಅವರ ವಾಸಸ್ಥಾನವು ಹಾಳಾಗಲಿ; ಅವರ ಗುಡಾರಗಳಲ್ಲಿ ನಿವಾಸಿಯು ಇಲ್ಲದೆ ಹೋಗಲಿ.

[26] ನೀವು ಗಾಯಮಾಡಿದ ನನ್ನನ್ನು ಹಿಂಸಿಸುತ್ತಾರೆ. ನೀವು ನೋಯಿಸಿದ ನನ್ನನ್ನು ಕುರಿತು ಚುಚ್ಚಿಮಾತನಾಡಿಕೊಳ್ಳುತ್ತಾರೆ.

[27] ಅಪರಾಧದ ಮೇಲೆ ಅಪರಾಧವು ಅವರ ಮೇಲೆ ಬರಲಿ. ಅವರು ನಿಮ್ಮ ರಕ್ಷಣೆಯಲ್ಲಿ ಸೇರದೆ ಇರಲಿ.

[28] ಜೀವಪುಸ್ತಕದೊಳಗಿಂದ ಅವರ ಹೆಸರು ಅಳಿದು ಹೋಗಲಿ. ನೀತಿವಂತರ ಸಂಗಡ ಅವರ ಹೆಸರು ಬರೆಯದೆ ಇರಲಿ.

[29] ದೇವರೇ, ನಾನು ನೊಂದು ವ್ಯಥೆಗೊಂಡಿದ್ದೇನೆ. ನಿಮ್ಮ ರಕ್ಷಣೆಯು ನನ್ನನ್ನು ಕಾಪಾಡಲಿ.

[30] ನಾನು ದೇವರ ಹೆಸರನ್ನು ಹಾಡಿ ಸ್ತುತಿಸುವೆನು. ಸ್ತೋತ್ರದಿಂದ ದೇವರನ್ನು ಸ್ತುತಿಸುವೆನು.

[31] ಅದು ಯೆಹೋವ ದೇವರಿಗೆ ಎಳೆಯ ಎತ್ತು ಯಜ್ಞಗಳಿಗಿಂತ, ಕೊಂಬೂ ಗೊರಸುಗಳುಳ್ಳ ಹೋರಿಗಳಿಗಿಂತ ಮೆಚ್ಚಿಕೆಯಾಗಿರುವುದು.

[32] ಇದನ್ನು ದೀನರು ಕಂಡು ಸಂತೋಷಪಡುವರು. ದೇವರನ್ನು ಹುಡುಕುವವರೇ, ನಿಮ್ಮ ಹೃದಯವು ಚೈತನ್ಯಗೊಳ್ಳಲಿ.

[33] ಯೆಹೋವ ದೇವರು ಬಡವರ ಮೊರೆಗೆ ಕಿವಿಗೊಡುತ್ತಾರೆ. ಸೆರೆಯಲ್ಲಿರುವ ತಮ್ಮ ಜನರನ್ನು ತಿರಸ್ಕರಿಸುವುದಿಲ್ಲ.

[34] ಆಕಾಶವೂ ಭೂಮಿಯೂ ಸಮುದ್ರಗಳೂ, ಅವುಗಳಲ್ಲಿ ಸಂಚರಿಸುವುದೆಲ್ಲವೂ ದೇವರನ್ನು ಸ್ತುತಿಸಲಿ.

[35] ದೇವರು ಚೀಯೋನನ್ನು ರಕ್ಷಿಸುವರು. ದೇವರು ಯೆಹೂದದ ಪಟ್ಟಣಗಳನ್ನು ಕಟ್ಟುವರು. ಜನರು ಅಲ್ಲಿ ವಾಸಮಾಡಿ, ಅದನ್ನು ಸ್ವಾಧೀನಮಾಡಿಕೊಳ್ಳುವರು.

[36] ದೇವರ ಸೇವಕರ ಸಂತತಿಯು ಅದನ್ನು ಬಾಧ್ಯವಾಗಿ ಹೊಂದುವುದು. ದೇವರ ಹೆಸರನ್ನು ಪ್ರೀತಿಸುವವರು ಅದರಲ್ಲಿ ವಾಸಮಾಡುವರು.

ಕೀರ್ತನೆಗಳು — Chapters