Skip to content
Opens in a new window
Listen to this chapter • 4:06

[1] ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ; ನನ್ನ ಮೊರೆಯು ನಿಮಗೆ ಮುಟ್ಟಲಿ.

[2] ನನಗೆ ಇಕ್ಕಟ್ಟು ಇರುವ ದಿವಸದಲ್ಲಿ ನಿಮ್ಮ ಮುಖವನ್ನು ನನಗೆ ಮರೆಮಾಡಬೇಡಿರಿ, ಸಹಾಯಮಾಡಿರಿ; ನಾನು ಕರೆಯುವಾಗ ನನ್ನ ಕಡೆಗೆ ತಿರುಗಿರಿ, ಬೇಗನೇ ನನಗೆ ಉತ್ತರಕೊಡಿರಿ.

[3] ನನ್ನ ದಿವಸಗಳು ಹೊಗೆಯಂತೆ ಕಳೆದುಹೋಗುತ್ತವೆ; ನನ್ನ ಎಲುಬುಗಳು ಬೂದಿ ಮುಚ್ಚಿದ ಕೆಂಡದಂತೆ ಸುಟ್ಟುಹೋಗಿವೆ.

[4] ನನ್ನ ಹೃದಯವು ಬಾಡಿಹೋಗಿ ಹುಲ್ಲಿನ ಹಾಗೆ ಒಣಗಿಹೋಗಿದೆ; ನಾನು ಊಟಮಾಡುವುದಕ್ಕೆ ಸಹ ಮರೆತುಬಿಡುತ್ತೇನೆ.

[5] ನಾನು ನನ್ನ ನಿಟ್ಟುಸಿರಿನಿಂದ ಮೊರೆಯಿಡುತ್ತಿದ್ದೇನೆ. ನನ್ನಲ್ಲಿ ಎಲುಬು ತೊಗಲು ಮಾತ್ರ ಉಳಿದಿರುತ್ತವೆ.

[6] ನಾನು ಅರಣ್ಯದ ಗೂಬೆಗೆ ಸಮಾನನಾಗಿದ್ದೇನೆ; ನಾನು ಹಾಳೂರಿನ ಗೂಬೆಯ ಹಾಗಿದ್ದೇನೆ.

[7] ನಿದ್ರೆಯಿಲ್ಲದೆ ಬಳಲುತ್ತಿದ್ದೇನೆ; ಮಾಳಿಗೆಯ ಮೇಲಿರುವ ಒಂಟಿಯಾದ ಪಕ್ಷಿಯ ಹಾಗಿದ್ದೇನೆ.

[8] ದಿನವೆಲ್ಲಾ ನನ್ನ ಶತ್ರುಗಳು ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಿಸಿಕೊಳ್ಳುವವರೆಲ್ಲರು ನನಗೆ ವಿರೋಧವಾಗಿ ಶಪಿಸುತ್ತಾರೆ.

[9] ನಿಮ್ಮ ದುಃಖ ಬೇಸರದ ನಿಮಿತ್ತ, ಬೂದಿಯನ್ನು ರೊಟ್ಟಿಯಂತೆ ತಿಂದಿದ್ದೇನೆ; ನನ್ನ ಪಾನವನ್ನು ಕಣ್ಣೀರಿನಿಂದ ಬೆರೆಸಿದ್ದೇನೆ.

[10] ಇದಕ್ಕೆ ಕಾರಣ ನೀವು ಗಮನ ಕೊಡದಿರುವುದೇ. ನೀವು ನನಗೆ ಲಕ್ಷ್ಯಕೊಡುತ್ತಾಯಿಲ್ಲ.

[11] ನನ್ನ ದಿವಸಗಳು ಸಾಯಂಕಾಲದ ನೆರಳಿನ ಹಾಗಿವೆ; ನಾನು ಹುಲ್ಲಿನ ಹಾಗೆ ಒಣಗುತಿದ್ದೇನೆ.

[12] ಆದರೆ ನೀವು ಯೆಹೋವ ದೇವರೇ, ಎಂದೆಂದಿಗೂ ಇರುತ್ತೀರಿ; ನಿಮ್ಮ ಪ್ರಸಿದ್ಧ ಕಾರ್ಯಗಳು ತಲತಲಾಂತರಕ್ಕೂ ಇರುತ್ತವೆ.

[13] ನೀವು ಎದ್ದು ಚೀಯೋನನ್ನು ಕನಿಕರಿಸುವಿರಿ; ಅದನ್ನು ಕರುಣಿಸುವ ಕಾಲ ಇದೇ; ಹೌದು, ನೀವು ನಿರ್ಣಯಿಸಿದ ಸಮಯವು ಬಂದಿದೆ.

[14] ಅದು ಕಲ್ಲು ಕುಪ್ಪೆಯಾಗಿ ಹೋಗಿದ್ದರೂ, ನಿಮ್ಮ ಸೇವಕರಿಗೆ ಅತಿ ಪ್ರಿಯವಾಗಿದೆ; ಅದರ ಧೂಳಿಗೆ ಅವರು ಮರಗುತ್ತಾರೆ.

[15] ಜನಾಂಗಗಳು ಯೆಹೋವ ದೇವರ ಹೆಸರಿಗೂ, ಭೂರಾಜರೆಲ್ಲರೂ ನಿಮ್ಮ ಮಹಿಮೆಗೂ ಭಯಪಡುವರು.

[16] ಏಕೆಂದರೆ ಯೆಹೋವ ದೇವರು ಚೀಯೋನನ್ನು ಮರಳಿ ಕಟ್ಟುವರು; ಅವರು ತಮ್ಮ ಮಹಿಮೆಯಲ್ಲಿ ಕಾಣಿಸಿಕೊಳ್ಳುವರು.

[17] ಅವರು ದಿಕ್ಕಿಲ್ಲದವರ ಪ್ರಾರ್ಥನೆಗೆ ಕಿವಿಗೊಡುತ್ತಾರೆ; ದೇವರು ಅವರ ಪ್ರಾರ್ಥನೆಯನ್ನು ತಿರಸ್ಕರಿಸುವುದಿಲ್ಲ.

[18] ಇದು ಮುಂದಿನ ಸಂತತಿಗೋಸ್ಕರ ಲಿಖಿತವಾಗಿರಲಿ; ಹುಟ್ಟಲಿಕ್ಕಿರುವ ಜನರು ಯೆಹೋವ ದೇವರನ್ನು ಸ್ತುತಿಸಲಿ.

[19] ಯೆಹೋವ ದೇವರು ಉನ್ನತವಾದ ಪವಿತ್ರ ಸ್ಥಾನದಿಂದ ಕೆಳಕ್ಕೆ ನೋಡಿದ್ದಾರೆ; ಅವರು ಪರಲೋಕದಿಂದ ಭೂಮಿಯನ್ನು ದೃಷ್ಟಿಸಿದ್ದಾರೆ.

[20] ಅವರು ಸೆರೆಯವರ ಗೋಳಾಟವನ್ನು ಕೇಳಿ, ಮರಣದಂಡನೆಗೆ ಪಾತ್ರನಾದವರನ್ನು ಬಿಡಿಸುವರು,

[21] ಬಿಡುಗಡೆಯಾದವರು ಚೀಯೋನಿನಲ್ಲಿ ಯೆಹೋವ ದೇವರ ನಾಮವನ್ನು ಸಾರುವಂತೆಯೂ, ಯೆರೂಸಲೇಮಿನಲ್ಲಿ ತಮ್ಮ ಸ್ತೋತ್ರವನ್ನು ಪ್ರಕಟಿಸುವಂತೆಯೂ ಮಾಡಿದ್ದಾರೆ.

[22] ಜನಾಂಗಗಳೂ, ರಾಜ್ಯಗಳೂ ಕೂಡಿಬಂದು ಇವರೊಡನೆ ಯೆಹೋವ ದೇವರನ್ನು ಸೇವಿಸುತ್ತವೆ, ಎಂದು ಹೇಳಲಾಗುವುದು.

[23] ದೇವರು ನನ್ನ ಜೀವಮಾನದ ಬಲವನ್ನು ಕುಂದಿಸಿದ್ದಾರೆ, ನನ್ನ ದಿನಗಳನ್ನೂ ಕಡಿಮೆ ಮಾಡಿದ್ದಾರೆ.

[24] ಆದ್ದರಿಂದ ನಾನು, “ನನ್ನ ದೇವರೇ, ನನ್ನ ಆಯುಷ್ಯದ ಮಧ್ಯದಲ್ಲಿ ನನ್ನನ್ನು ತೆಗೆದುಕೊಳ್ಳಬೇಡಿರಿ; ನಿಮ್ಮ ವರ್ಷಗಳು ತಲತಲಾಂತರಗಳಿಗೂ ಇವೆ.

[25] ಆದಿಯಲ್ಲಿ ನೀವು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀರಿ; ಆಕಾಶಗಳು ನಿಮ್ಮ ಕೈಕೆಲಸಗಳಾಗಿವೆ.

[26] ಅವು ನಾಶವಾಗುವುವು; ಆದರೆ ನೀವು ಸದಾಕಾಲವೂ ಜೀವಿಸುತ್ತೀರಿ. ಅವುಗಳೆಲ್ಲಾ ವಸ್ತ್ರದ ಹಾಗೆ ಹಳೆಯದಾಗುವುದು; ಅಂಗಿಯ ಹಾಗೆ ಅವುಗಳನ್ನು ಬದಲಾಯಿಸುವಿರಿ; ಅವು ತೆಗೆದುಹಾಕಲಾಗುವುದು.

[27] ಆದರೆ ನೀವು ಏಕರೀತಿಯಾಗಿದ್ದೀರಿ. ನಿಮ್ಮ ವರ್ಷಗಳು ಮುಗಿದುಹೋಗುವುದಿಲ್ಲ.

[28] ನಿಮ್ಮ ಸೇವಕರ ಮಕ್ಕಳು ನಿಮ್ಮ ಸನ್ನಿಧಿಯಲ್ಲಿ ಬದುಕುವರು; ಅವರ ಸಂತತಿಯು ನಿಮ್ಮ ಮುಂದೆ ನೆಲೆಯಾಗಿರುವುದು.”

ಕೀರ್ತನೆಗಳು — Chapters