[1] ನಾನು ಸ್ತುತಿಸುವ ದೇವರೇ, ನೀವು ಮೌನವಾಗಿರಬೇಡಿರಿ.
[2] ದುಷ್ಟರೂ, ವಂಚಕರೂ ತಮ್ಮ ಬಾಯಿಯನ್ನು ನನಗೆ ವಿರೋಧವಾಗಿ ತೆರೆದಿದ್ದಾರೆ; ಸುಳ್ಳಿನ ನಾಲಿಗೆಯಿಂದ ನನಗೆ ವಿರೋಧವಾಗಿ ಮಾತಾಡಿದ್ದಾರೆ.
[3] ದ್ವೇಷ ಮಾತುಗಳಿಂದ ನನ್ನನ್ನು ಸುತ್ತಿಕೊಂಡಿದ್ದಾರೆ, ನನಗೆ ವಿರೋಧವಾಗಿ ಕಾರಣವಿಲ್ಲದೆ ಯುದ್ಧ ಮಾಡುತ್ತಿದ್ದಾರೆ.
[4] ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ; ಆದರೆ ನಾನು ಪ್ರಾರ್ಥನೆಯ ಮನುಷ್ಯನು.
[5] ನನಗೆ ಉಪಕಾರಕ್ಕೆ ಬದಲಾಗಿ ಕೇಡನ್ನು ಮಾಡುತ್ತಿದ್ದಾರೆ, ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ.
[6] ದುಷ್ಟನು ನನ್ನ ವೈರಿಯ ಮೇಲೆ ನೇಮಕವಾಗಲಿ; ಸೈತಾನನು ಅವನ ಬಲಗಡೆಯಲ್ಲಿ ನಿಂತುಕೊಳ್ಳಲಿ.
[7] ಅವನಿಗೆ ನ್ಯಾಯತೀರಿಸುವಾಗ ಅಪರಾಧಿಯೆಂದು ತೀರ್ಪು ಹೊಂದಲಿ; ಅವನ ಪ್ರಾರ್ಥನೆಯೇ ಅವನನ್ನು ಖಂಡಿಸಲಿ.
[8] ಅವನ ದಿವಸಗಳು ಸ್ವಲ್ಪವಾಗಿರಲಿ; ಅವನ ಹುದ್ದೆಯನ್ನು ಇನ್ನೊಬ್ಬನು ತೆಗೆದುಕೊಳ್ಳಲಿ.
[9] ಅವನ ಮಕ್ಕಳು ದಿಕ್ಕಿಲ್ಲದವರಾಗಲಿ, ಅವನ ಹೆಂಡತಿ ವಿಧವೆಯೂ ಆಗಲಿ.
[10] ಅವನ ಮಕ್ಕಳು ಅಲೆದು ಅಲೆದು ಭಿಕ್ಷೆಬೇಡಲಿ, ತಮ್ಮ ಹಾಳು ಮನೆಯಿಂದ ಹೊರಟು ಹೋಗಲಿ.
[11] ಸಾಲಗಾರರು ಅವನಿಗೆ ಇರುವುದನ್ನೆಲ್ಲಾ ದೋಚಿಕೊಳ್ಳಲಿ; ಪರರು ಅವನ ಕಷ್ಟಾರ್ಜಿತವನ್ನು ಸುಲಿದುಕೊಳ್ಳಲಿ.
[12] ಅವನಿಗೆ ದಯೆ ತೋರಿಸುವವನು ಯಾವನೂ ಇಲ್ಲದೆ ಇರಲಿ; ದಿಕ್ಕಿಲ್ಲದ ಅವನ ಮಕ್ಕಳನ್ನು ಯಾವನೂ ಕನಿಕರಿಸದಿರಲಿ.
[13] ಅವನ ಸಂತಾನವು ಮುಗಿದು ಹೋಗಲಿ; ಎರಡನೆಯ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ.
[14] ಅವನ ಪಿತೃಗಳ ಅಕ್ರಮವು ಯೆಹೋವ ದೇವರ ಮುಂದೆ ಜ್ಞಾಪಕವಾಗಲಿ; ಅವನ ತಾಯಿಯ ಪಾಪವು ಅಳಿದು ಹೋಗದಿರಲಿ.
[15] ಅವು ಯಾವಾಗಲೂ ಯೆಹೋವ ದೇವರ ಮುಂದೆ ಇರಲಿ; ದೇವರು ಅವರ ನೆನಪನ್ನು ಭೂಮಿಯೊಳಗಿಂದ ತೆಗೆದುಬಿಡಲಿ.
[16] ಏಕೆಂದರೆ ಅವನು ಯಾರಿಗೂ ದಯೆ ತೋರಿಸಲಿಲ್ಲ. ಬಡವನನ್ನೂ, ದೀನನನ್ನೂ, ಮನಗುಂದಿದವನನ್ನೂ ಹಿಂಸಿಸಿ ಸಾಯಿಸಬೇಕೆಂದು ಯತ್ನಿಸಿದನು.
[17] ಅವನು ಶಾಪಕೊಡಲು ಇಷ್ಟಪಟ್ಟನು; ಅದೇ ಅವನಿಗೆ ಬರಲಿ; ಅವನು ಆಶೀರ್ವಾದವನ್ನು ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ.
[18] ಅವನು ತನ್ನ ವಸ್ತ್ರದಂತೆ ಶಾಪವನ್ನು ಹೊದ್ದುಕೊಂಡನು; ಅದು ನೀರಿನಂತೆ ಅವನ ಅಂತರಂಗದಲ್ಲಿಯೂ, ಎಣ್ಣೆಯಂತೆ ಅವನ ಎಲುಬುಗಳಲ್ಲಿಯೂ ಸೇರಿತು.
[19] ಶಾಪವು ಅವನಿಗೆ ತೊಟ್ಟುಕೊಂಡ ಅಂಗಿಯ ಹಾಗೆಯೂ, ಯಾವಾಗಲೂ ಸೊಂಟಕ್ಕೆ ಕಟ್ಟುವ ನಡುಕಟ್ಟಿನ ಹಾಗೆಯೂ ಇರಲಿ.
[20] ಇದು ನನಗೆ ವಿರೋಧವಾಗಿ ಕೇಡು ಮಾತಾಡುವ ನನ್ನ ಎದುರಾಳಿಗಳಿಗೆ ಯೆಹೋವ ದೇವರಿಂದ ಪ್ರತಿಫಲವಾಗಿರಲಿ.
[21] ಆದರೆ ಸಾರ್ವಭೌಮ ಯೆಹೋವ ದೇವರೇ, ನಿಮ್ಮ ಹೆಸರಿಗೋಸ್ಕರ ನನಗೆ ಸಹಾಯಮಾಡಿರಿ. ನಿಮ್ಮ ಪ್ರೀತಿಯ ಒಳ್ಳೆಯತನದಿಂದ ನನ್ನನ್ನು ಬಿಡಿಸಿರಿ.
[22] ಏಕೆಂದರೆ ನಾನು ಬಡವನೂ ಅಗತ್ಯತೆಯಲ್ಲಿ ಇರುವವನೂ ಆಗಿದ್ದೇನೆ; ನನ್ನ ಹೃದಯವು ನನ್ನ ಅಂತರಂಗದಲ್ಲಿ ಗಾಯಗೊಂಡಿದೆ.
[23] ನಾನು ಇಳಿಯುವ ನೆರಳಿನ ಹಾಗೆ ಆಗಿದ್ದೇನೆ; ಮಿಡತೆಯ ಹಾಗೆ ಹಾರಾಡುತ್ತಿದ್ದೇನೆ.
[24] ನನ್ನ ಮೊಣಕಾಲುಗಳು ಉಪವಾಸದಿಂದ ಬಲಹೀನವಾಗಿವೆ; ನನ್ನ ದೇಹಕ್ಕೆ ಸಾರವಿಲ್ಲದೆ ಹೋಯಿತು.
[25] ನಾನು ನನ್ನ ದೂರುಗಾರರಿಗೆ ನಿಂದೆಯಾಗಿದ್ದೇನೆ; ಅವರು ನನ್ನನ್ನು ಕಂಡು ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾರೆ.
[26] ನನ್ನ ದೇವರಾದ ಯೆಹೋವ ದೇವರೇ, ನನಗೆ ಸಹಾಯಮಾಡಿರಿ; ನಿಮ್ಮ ಒಡಂಬಡಿಕೆಯ ಪ್ರೀತಿಯ ಪ್ರಕಾರ ನನ್ನನ್ನು ರಕ್ಷಿಸಿರಿ.
[27] ಇದು ನಿಮ್ಮ ಕೈ ಕೆಲಸ ಎಂದು ಅವರಿಗೆ ಗೊತ್ತಾಗಲಿ, ಇದು ನಿನ್ನಿಂದಲೇ ಆಯಿತೆಂದು ಅವರು ತಿಳಿದುಕೊಳ್ಳಲಿ.
[28] ಅವರು ಶಪಿಸಲಿ, ಆದರೆ ನೀವು ಆಶೀರ್ವದಿಸಿರಿ. ನನಗೆ ಹಾನಿಮಾಡುವವರು ನಾಚಿಕೆಪಡಲಿ; ಆದರೆ ನಿಮ್ಮ ಸೇವಕನಾದ ನಾನು ಸಂತೋಷಿಸಲಿ.
[29] ನನ್ನ ಎದುರಾಳಿಗಳು ಅವಮಾನವನ್ನು ಹೊದ್ದುಕೊಳ್ಳಲಿ, ತಮ್ಮ ನಾಚಿಕೆಯನ್ನು ಹೊದಿಕೆಯಂತೆ ತೊಟ್ಟುಕೊಳ್ಳಲಿ.
[30] ನಾನು ಯೆಹೋವ ದೇವರನ್ನು ನನ್ನ ಬಾಯಿಯಿಂದ ಬಹಳವಾಗಿ ಕೊಂಡಾಡುವೆನು; ಅನೇಕರ ಮಧ್ಯದಲ್ಲಿ ದೇವರನ್ನು ಸ್ತುತಿಸುವೆನು.
[31] ದೇವರು ಬಡವನ ಬಲಗಡೆಯಲ್ಲಿ ನಿಂತು, ಅವನ ಪ್ರಾಣವನ್ನು ಖಂಡಿಸುವವರಿಂದ ಅವನನ್ನು ರಕ್ಷಿಸುವರು.