Skip to content
Opens in a new window
Listen to this chapter • 2:27

[1] ನನ್ನನ್ನು ರಕ್ಷಿಸುವ ದೇವರಾದ ಯೆಹೋವ ದೇವರೇ, ಹಗಲಿರುಳು ನಿಮ್ಮ ಮುಂದೆ ಮೊರೆಯಿಡುತ್ತೇನೆ.

[2] ನನ್ನ ಪ್ರಾರ್ಥನೆಯು ನಿಮ್ಮ ಮುಂದೆ ಬರಲಿ. ನನ್ನ ಮೊರೆಗೆ ನಿಮ್ಮ ಕಿವಿಕೊಡಿರಿ.

[3] ನನ್ನ ಪ್ರಾಣವು ಕಷ್ಟದಿಂದ ತುಂಬಿದೆ; ನನ್ನ ಜೀವವು ಸಮಾಧಿಯ ಸಮೀಪಕ್ಕೆ ಎಳೆಯುತ್ತದೆ.

[4] ಸಮಾಧಿ ಸೇರುವವರ ಸಂಗಡ ಎಣಿಸಲಾಗಿದ್ದೇನೆ; ನಾನು ಬಲವಿಲ್ಲದ ಪುರುಷನ ಹಾಗಿದ್ದೇನೆ.

[5] ಹತರಾದವರು ಸಮಾಧಿಯಲ್ಲಿ ಮಲಗಿದಂತೆ ನಾನೂ ಸತ್ತವರೊಂದಿಗೆ ಸೇರಿರುತ್ತೇನೆ. ಅವರನ್ನು ನೀನೆಂದೂ ಜ್ಞಾಪಿಸಿಕೊಳ್ಳುವುದಿಲ್ಲ. ನಿಮ್ಮ ಪರಿಪಾಲನೆಯಿಂದ ದೂರವಾಗಿದ್ದಾರೆ.

[6] ಅಧೋಲೋಕದಲ್ಲಿಯೂ ಗಾಡಾಂಧಕಾರದಲ್ಲಿಯೂ ಅಗಾಧಗಳಲ್ಲಿಯೂ ನನ್ನನ್ನು ಇಟ್ಟಿದ್ದೀರಿ.

[7] ನಿಮ್ಮ ಬೇಸರವು ನನ್ನ ಮೇಲೆ ಭಾರವಾಗಿದೆ. ನಿಮ್ಮ ಅಲೆಗಳಿಂದೆಲ್ಲಾ ನನ್ನನ್ನು ಮುಳುಗಿಸಿದ್ದೀರಿ.

[8] ನನ್ನ ಪರಿಚಿತರನ್ನು ನನ್ನಿಂದ ದೂರಮಾಡಿದ್ದೀರಿ. ನಾನು ಅವರಿಗೆ ಬೇಡವಾಗಿದ್ದೇನೆ. ನಾನು ಬಂಧಿತನಾಗಿದ್ದೇನೆ, ಹೊರಗೆ ಬರಲಾರೆನು.

[9] ಬಾಧೆಯ ದೆಸೆಯಿಂದ ನನ್ನ ಕಣ್ಣು ಮಂದವಾಗಿ ಹೋಗಿದೆ. ಯೆಹೋವ ದೇವರೇ, ದಿನವೆಲ್ಲಾ ನಿಮ್ಮನ್ನು ಕರೆಯುತ್ತೇನೆ. ನಾನು ನಿಮ್ಮ ಕಡೆಗೆ ನನ್ನ ಕೈಗಳನ್ನು ಚಾಚುತ್ತೇನೆ.

[10] ಸತ್ತವರಿಗೆ ಅದ್ಭುತಗಳನ್ನು ತೋರಿಸುವಿರೋ? ಸತ್ತವರು ಎದ್ದು ನಿಮ್ಮನ್ನು ಕೊಂಡಾಡುವರೋ?

[11] ಸಮಾಧಿಯಲ್ಲಿ ನಿಮ್ಮ ಪ್ರೀತಿ ಸಾರಲಾಗುವುದೇ? ನಾಶನ ಸ್ಥಳದಲ್ಲಿ ನಿಮ್ಮ ನಂಬಿಗಸ್ತಿಕೆಯು ಹೇಳಲಾಗುವುದೋ?

[12] ಕತ್ತಲೆಯಲ್ಲಿ ನಿಮ್ಮ ಅದ್ಭುತಗಳೂ ಮರೆತುಹೋಗಿರುವ ದೇಶದಲ್ಲಿ ನಿಮ್ಮ ನೀತಿಯೂ ತಿಳಿಯಲಾಗುವುದೋ?

[13] ಆದರೆ ನಾನು ಯೆಹೋವ ದೇವರೇ, ನಿಮ್ಮ ಕಡೆಗೆ ಮೊರೆಯಿಡುತ್ತೇನೆ. ಉದಯಕಾಲದಲ್ಲಿ ನನ್ನ ಪ್ರಾರ್ಥನೆಯು ನಿಮ್ಮನ್ನು ಎದುರುಗೊಳ್ಳುವುದು.

[14] ಯೆಹೋವ ದೇವರೇ, ನೀವೇಕೆ ನನ್ನನ್ನು ತಳ್ಳಿಬಿಟ್ಟಿದ್ದೀರಿ. ನನಗೆ ನಿಮ್ಮ ಮುಖ ಮರೆಮಾಡುತ್ತೀರಿ?

[15] ಬಾಲ್ಯದಿಂದಲೂ ನಾನು ಬಾಧಿತನು ಸಾಯುವುದಕ್ಕೆ ಸಿದ್ಧನೂ ಆಗಿದ್ದೇನೆ. ನಿಮ್ಮ ದಂಡನೆಯನ್ನು ನಾನು ತಾಳುತ್ತಾ ಭ್ರಮೆಗೊಳ್ಳುತ್ತೇನೆ.

[16] ನನ್ನ ಮೇಲೆ ನಿಮ್ಮ ಬೇಸರವು ಆವರಿಸಿದೆ. ನಿಮ್ಮ ದಂಡನೆಗಳು ನನ್ನನ್ನು ಬಾಧಿಸಿರುತ್ತವೆ.

[17] ಪ್ರವಾಹಗಳ ಹಾಗೆ ಅವು ಬಂದು ನನ್ನನ್ನು ದಿನವೆಲ್ಲಾ ಸುತ್ತಿಕೊಳ್ಳುತ್ತವೆ; ಅವು ಸಂಪೂರ್ಣವಾಗಿ ನನ್ನನ್ನು ಮುತ್ತಿಕೊಳ್ಳುತ್ತವೆ.

[18] ನನ್ನ ಆಪ್ತಮಿತ್ರರನ್ನು ದೂರ ಮಾಡಿದಿರಿ. ಅಂಧಕಾರವೇ ನನ್ನ ಪರಿಚಯವು.

ಕೀರ್ತನೆಗಳು — Chapters