Skip to content
Opens in a new window
Listen to this chapter • 3:17

[1] ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು; ನನ್ನ ಅಂತರಾತ್ಮವೇ ಅವರ ಪರಿಶುದ್ಧ ನಾಮವನ್ನು ಸ್ತುತಿಸು.

[2] ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು; ಅವರ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ.

[3] ದೇವರು ನಿಮ್ಮ ಪಾಪಗಳನ್ನೆಲ್ಲಾ ಕ್ಷಮಿಸುತ್ತಾರೆ. ನಿಮ್ಮ ರೋಗಗಳನ್ನೆಲ್ಲಾ ವಾಸಿಮಾಡುತ್ತಾರೆ.

[4] ದೇವರು ನಿಮ್ಮ ಜೀವವನ್ನು ಪಾತಾಳದಿಂದ ವಿಮೋಚಿಸುವರು; ಪ್ರೀತಿ ಅನುಕಂಪವನ್ನು ನಿನಗೆ ಕಿರೀಟವಾಗಿ ಶೃಂಗರಿಸುವರು.

[5] ನಿಮ್ಮ ಯೌವನವು ಹದ್ದಿನ ಹಾಗೆ ನವೀಕರಿಸುವಂತೆ ಮಾಡುವರು. ಅವರು ನಿಮ್ಮ ಆಶೆಗಳನ್ನು ಒಳ್ಳೆಯವುಗಳಿಂದ ತೃಪ್ತಿಪಡಿಸುವರು.

[6] ಯೆಹೋವ ದೇವರು ಕುಗ್ಗಿದವರೆಲ್ಲರಿಗೂ ನೀತಿಯನ್ನೂ, ನ್ಯಾಯವನ್ನೂ ಕಾರ್ಯರೂಪಕ್ಕೆ ತರುವರು.

[7] ಅವರು ತಮ್ಮ ಮಾರ್ಗಗಳನ್ನು ಮೋಶೆಗೂ, ತಮ್ಮ ಕ್ರಿಯೆಗಳನ್ನು ಇಸ್ರಾಯೇಲರಿಗೂ ಪ್ರಕಟಿಸಿದರು:

[8] ಯೆಹೋವ ದೇವರು, ಅನುಕಂಪವೂ ದಯೆಯೂ ದೀರ್ಘಶಾಂತಿಯೂ ಪೂರ್ಣ ಪ್ರೀತಿಯೂ ಉಳ್ಳವರಾಗಿದ್ದಾರೆ.

[9] ಅವರು ಯಾವಾಗಲೂ ತಪ್ಪುಹುಡುಕುವವರಲ್ಲ; ದೇವರು ತಮ್ಮ ಕೋಪವನ್ನು ಎಂದೆಂದಿಗೂ ಕೂಡಿಟ್ಟುಕೊಳ್ಳುವವರು ಅಲ್ಲ;

[10] ದೇವರು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಧರ್ಮಗಳ ಪ್ರಕಾರ ನಮಗೆ ಮುಯ್ಯಿತೀರಿಸಲಿಲ್ಲ.

[11] ಏಕೆಂದರೆ, ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ದೇವರ ಪ್ರೀತಿಯು ತಮಗೆ ಭಯಪಡುವವರ ಮೇಲೆ ಅಷ್ಟು ಮಹೋನ್ನತವಾಗಿದೆ;

[12] ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ, ಅವರು ನಮ್ಮ ಅತಿಕ್ರಮಗಳನ್ನು ನಮ್ಮಿಂದ ಅಷ್ಟು ದೂರ ಮಾಡಿದ್ದಾರೆ.

[13] ಒಬ್ಬ ತಂದೆಯು ತಮ್ಮ ಮಕ್ಕಳ ಮೇಲೆ ಅನುಕಂಪಗೊಳ್ಳುವಂತೆ, ಯೆಹೋವ ದೇವರು ತಮಗೆ ಭಯಪಡುವವರ ಮೇಲೆ ಅನುಕಂಪ ತೋರಿಸುವವರಾಗಿದ್ದಾರೆ.

[14] ದೇವರು ನಮ್ಮ ಪ್ರಕೃತಿಯನ್ನು ಬಲ್ಲವರಾಗಿದ್ದಾರೆ; ನಾವು ಧೂಳಾಗಿದ್ದೇವೆಂದು ಅವರು ನೆನಪುಮಾಡಿ ಕೊಳ್ಳುತ್ತಾರೆ.

[15] ಮನುಷ್ಯನ ಆಯುಷ್ಕಾಲವು ಹುಲ್ಲಿನಂತಿದೆ, ಅವನು ಹೊಲದ ಹೂವಿನ ಹಾಗೆಯೇ ಶೋಭಿಸುತ್ತಾನೆ;

[16] ಗಾಳಿಯು ಅದರ ಮೇಲೆ ಬೀಸುತ್ತಲೇ ಹೂವು ಇಲ್ಲದೆ ಹೋಗುತ್ತದೆ; ಅದು ಇದ್ದ ಸ್ಥಳವನ್ನು ಪುನಃ ಕಾಣುವುದಿಲ್ಲ.

[17] ಆದರೆ ಯೆಹೋವ ದೇವರ ಪ್ರೀತಿಯು ಅವರಿಗೆ ಭಯಪಡುವವರ ಮೇಲೆ ಯುಗಯುಗಾಂತರಕ್ಕೂ ಇರುವುದು, ಅವರ ನೀತಿಯು ಮಕ್ಕಳ ಮಕ್ಕಳಿಗೂ ನೆಲೆಸಿರುವುದು.

[18] ದೇವರ ಒಡಂಬಡಿಕೆಯನ್ನು ಕೈಕೊಂಡು, ಅವರ ಸೂತ್ರಗಳನ್ನು ಪಾಲಿಸಲು ನೆನಸುವವರಿಗೂ ಅವರ ನೀತಿಯು ನೆಲೆಸಿರುವುದು.

[19] ಯೆಹೋವ ದೇವರು ಪರಲೋಕದಲ್ಲಿ ತಮ್ಮ ಸಿಂಹಾಸನವನ್ನು ಸ್ಥಾಪಿಸಿದ್ದಾರೆ, ಅವರ ಸಾಮ್ರಾಜ್ಯದ ಆಳಿಕೆಯು ಎಲ್ಲರ ಮೇಲೆ ಇರುವುದು.

[20] ದೇವರ ದೂತರೇ, ಅವರ ಮಾತನ್ನು ಕೇಳಿ, ಅವರಿಗೆ ವಿಧೇಯರಾಗುವ ಪರಾಕ್ರಮಿಗಳೇ, ಯೆಹೋವ ದೇವರನ್ನು ಸ್ತುತಿಸಿರಿ.

[21] ದೇವರ ಇಷ್ಟವನ್ನು ನಡೆಸುವ ಸೇವಕರೇ, ಅವರ ಎಲ್ಲಾ ಸೈನ್ಯಗಳೇ, ಯೆಹೋವ ದೇವರನ್ನು ಸ್ತುತಿಸಿರಿ.

[22] ದೇವರ ಆಳಿಕೆಯ ಎಲ್ಲಾ ಕಡೆಗಳಲ್ಲಿಯೂ ಇರುವುದು. ಅವರ ಎಲ್ಲಾ ಸೃಷ್ಟಿಗಳೇ, ಯೆಹೋವ ದೇವರನ್ನು ಸ್ತುತಿಸಿರಿ. ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು.

ಕೀರ್ತನೆಗಳು — Chapters