[1] ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಜನಾಂಗಗಳು ನಡುಗಲಿ. ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನು ಆಳುತ್ತಾನೆ; ಭೂಮಿಯು ಕಂಪಿಸಲಿ.
[2] ಚೀಯೋನಿನಲ್ಲಿರುವ ಯೆಹೋವನು ದೊಡ್ಡವನು; ಆತನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು.
[3] ಅವರು ಯೆಹೋವನ ಭಯಂಕರವಾದ ಮಹಾನಾಮವನ್ನು ಕೊಂಡಾಡಲಿ; ಆತನು ಪರಿಶುದ್ಧನು.
[4] ಪರಾಕ್ರಮಿಯಾದ ಅರಸನು ನೀತಿಯನ್ನು ಪ್ರೀತಿಸುತ್ತಾನೆ; ಯಥಾರ್ಥವಾದದ್ದನ್ನು ಸ್ಥಾಪಿಸಿದವನೂ, ಯಾಕೋಬ್ಯರಲ್ಲಿ ನ್ಯಾಯ, ನೀತಿಗಳನ್ನು ಸಿದ್ಧಿಗೆ ತಂದವನೂ ನೀನೇ.
[5] ನಮ್ಮ ಯೆಹೋವ ದೇವರನ್ನು ಘನಪಡಿಸಿರಿ; ಆತನ ಪಾದಪೀಠದ ಮುಂದೆ ಅಡ್ಡಬೀಳಿರಿ. ಆತನು ಪರಿಶುದ್ಧನು.
[6] ಆತನ ಯಾಜಕರಲ್ಲಿ ಮೋಶೆ ಮತ್ತು ಆರೋನರೂ, ಆತನ ಹೆಸರಿನಲ್ಲಿ ಪ್ರಾರ್ಥಿಸುವವರೊಳಗೆ ಸಮುವೇಲನೂ ಪ್ರಾರ್ಥಿಸಿದಾಗೆಲ್ಲ, ಯೆಹೋವನು ಅವರಿಗೆ ಸದುತ್ತರವನ್ನು ದಯಪಾಲಿಸುತ್ತಿದ್ದನು.
[7] ಆತನು ಮೇಘಸ್ತಂಭದಲ್ಲಿದ್ದು ಅವರೊಡನೆ ಮಾತನಾಡುತ್ತಿದ್ದನು; ಅವರು ಆತನ ವಿಧಿನಿಯಮಗಳನ್ನು ಕೈಕೊಂಡವರು.
[8] ನಮ್ಮ ಯೆಹೋವ ದೇವರೇ, ಅವರಿಗೆ ಸದುತ್ತರ ಕೊಟ್ಟವನು ನೀನೇ. ನೀನು ದುಷ್ಕೃತ್ಯಗಳಿಗಾಗಿ ಅವರನ್ನು ದಂಡಿಸುತ್ತಿದ್ದರೂ, ಕ್ಷಮಿಸುವ ದೇವರಾಗಿದ್ದಿ.
[9] ನಮ್ಮ ಯೆಹೋವ ದೇವರನ್ನು ಘನಪಡಿಸಿರಿ; ಆತನ ಪರಿಶುದ್ಧಪರ್ವತದ ಕಡೆಗೆ ಅಡ್ಡಬೀಳಿರಿ. ನಮ್ಮ ಯೆಹೋವ ದೇವರು ಪರಿಶುದ್ಧನು.