Skip to content
Opens in a new window
Listen to this chapter • 2:46

[1] ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವುದು.

[2] ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದು; ಇದನ್ನು ದೀನರು ಕೇಳಿ ಸಂತೋಷಿಸುವರು.

[3] ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ.

[4] ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು, ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು.

[5] ಆತನನ್ನೇ ದೃಷ್ಟಿಸಿದವರು ಪ್ರಕಾಶವನ್ನು ಹೊಂದಿದರು; ಅವರ ಮುಖವು ಅವಮಾನಕ್ಕೆ ಈಡಾಗುವುದೇ ಇಲ್ಲ.

[6] ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು, ಯೆಹೋವನು ಕೇಳಿ ಎಲ್ಲಾ ಬಾಧೆಗಳಿಂದ ಬಿಡಿಸಿದನು.

[7] ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು, ಆತನ ದೂತನು ದಂಡಿಳಿಸಿ, ಕಾವಲಾಗಿದ್ದು ಕಾಪಾಡುತ್ತಾನೆ.

[8] ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು.

[9] ಯೆಹೋವನ ಜನರೇ, ಆತನಲ್ಲಿ ಭಯಭಕ್ತಿಯುಳ್ಳವರಾಗಿರಿ; ಆತನಲ್ಲಿ ಭಯಭಕ್ತಿಯುಳ್ಳವರಿಗೆ ಯಾವ ಕೊರತೆಯೂ ಇರುವುದಿಲ್ಲ.

[10] ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು; ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಒಳಿತಿಗೆ ಕೊರತೆಯಿಲ್ಲ.

[11] ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ; ನಾನು ಯೆಹೋವನ ಭಯವನ್ನು ನಿಮಗೆ ಕಲಿಸುವೆನು.

[12] ದೀರ್ಘಾಯುಷ್ಯವು ಬೇಕೋ? ಬಹುದಿನ ಬದುಕಿ ಸುಖವನ್ನು ಅನುಭವಿಸಬೇಕೋ?

[13] ಹಾಗಾದರೆ ಕೆಟ್ಟದ್ದಕ್ಕೆ ಹೋಗದಂತೆ ನಾಲಿಗೆಯನ್ನು ಕಾದುಕೋ; ವಂಚನೆಯ ಮಾತುಗಳಿಗೆ ಬಿಡದೆ ತುಟಿಗಳನ್ನು ಇಟ್ಟುಕೋ.

[14] ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನೇ ಮಾಡು; ಸಮಾಧಾನವನ್ನು ಹಾರೈಸಿ ಅದಕ್ಕಾಗಿ ಪ್ರಯತ್ನಪಡು.

[15] ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.

[16] ಕೆಡುಕರಿಗೋ ಯೆಹೋವನು ಕೋಪದ ಮುಖವುಳ್ಳವನಾಗಿರುವನು; ಲೋಕದಲ್ಲಿ ಅವರ ನೆನಪೇ ಉಳಿಯದಂತೆ ತೆಗೆದುಹಾಕುವನು.

[17] ಯೆಹೋವನು ನೀತಿವಂತರ ಕೂಗನ್ನು ಕೇಳಿ, ಎಲ್ಲಾ ಕಷ್ಟಗಳಿಂದ ಅವರನ್ನು ಬಿಡಿಸುತ್ತಾನೆ.

[18] ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.

[19] ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ, ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.

[20] ಆತನು ಅವನ ಎಲುಬುಗಳನ್ನೆಲ್ಲಾ ಕಾಪಾಡುತ್ತಾನೆ; ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.

[21] ದುಷ್ಟನ ಕೆಡುಕು ಅವನನ್ನೇ ಕೊಲ್ಲುವುದು; ನೀತಿವಂತನನ್ನು ದ್ವೇಷಿಸುವವರು ಅಪರಾಧಿಗಳೆಂದು ಎಣಿಸಲ್ಪಡುವರು.

[22] ಯೆಹೋವನು ತನ್ನ ಸೇವಕರ ಪ್ರಾಣವನ್ನು ವಿಮೋಚಿಸುತ್ತಾನೆ. ಆತನ ಆಶ್ರಿತರಲ್ಲಿ ಒಬ್ಬರಾದರೂ ಅಪರಾಧಿಯೆಂದು ಎಣಿಸಲ್ಪಡುವುದಿಲ್ಲ.

ಕೀರ್ತನೆಗಳು — Chapters