[1] ಯೆಹೋವನಿಗೆ ಸ್ತೋತ್ರ! ಯಾರು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ, ಆತನ ಆಜ್ಞೆಗಳಲ್ಲಿ ಅತ್ಯಾನಂದಪಡುವನೋ ಅವನೇ ಧನ್ಯನು.
[2] ಅವನ ಸಂತಾನವು ಲೋಕದಲ್ಲಿ ಬಲಿಷ್ಠವಾಗುವುದು; ನೀತಿವಂತನ ವಂಶವು ಶುಭಹೊಂದುವುದು.
[3] ಅವನ ಮನೆಯಲ್ಲಿ ಸಿರಿಸಂಪತ್ತುಗಳು ಇರುವವು; ಅವನ ನೀತಿಯು ಸದಾಕಾಲವೂ ಫಲಿಸುತ್ತಿರುವುದು.
[4] ಯಥಾರ್ಥರಿಗೆ ಕತ್ತಲೆಯಲ್ಲಿಯೂ ಜ್ಯೋತಿ ಮೂಡುವುದು; ದಯೆಯೂ, ಕನಿಕರವೂ, ನೀತಿಯುಳ್ಳ ದೇವರೇ ಆ ಜ್ಯೋತಿ.
[5] ದಯಾಳುವಾಗಿ ಧನಸಹಾಯ ಮಾಡುವವನೂ, ತನ್ನ ಕಾರ್ಯಗಳನ್ನು ನೀತಿಯಿಂದ ನಡೆಸುವವನೂ ಭಾಗ್ಯವಂತನು.
[6] ಅವನು ಎಂದಿಗೂ ಕದಲುವುದಿಲ್ಲ; ನೀತಿವಂತನನ್ನು ಯಾವಾಗಲೂ ಸ್ಮರಿಸುವರು.
[7] ಅವನಿಗೆ ಕೆಟ್ಟ ಸುದ್ದಿಯ ಭಯವಿರುವುದಿಲ್ಲ; ಯೆಹೋವನಲ್ಲಿ ಭರವಸವಿಟ್ಟಿರುವುದರಿಂದ, ಅವನ ಮನಸ್ಸು ಸ್ಥಿರವಾಗಿರುವುದು.
[8] ದುಷ್ಟರಿಗಾಗುವ ಶಿಕ್ಷೆಯನ್ನು ಕಣ್ಣಾರೆ ಕಾಣುವೆನೆಂಬ ಭರವಸೆ ಇರುವುದರಿಂದ ಅವನ ಮನಸ್ಸು ದೃಢವಾಗಿದೆ, ಹೆದರುವುದಿಲ್ಲ.
[9] ಬಡವರಿಗೆ ಉದಾರವಾಗಿ ಕೊಡುತ್ತಾನೆ; ಅವನ ನೀತಿಯ ಫಲವು ಸದಾಕಾಲವೂ ಇರುವುದು. ಮಹಿಮೆಯೊಡನೆ ಅವನ ಕೊಂಬು ಎತ್ತಲ್ಪಡುವುದು.
[10] ದುಷ್ಟನು ನೋಡಿ ವ್ಯಥೆಪಡುವನು; ಅವನು ಹಲ್ಲುಕಡಿಯುತ್ತಾ ನಾಶವಾಗುವನು. ದುಷ್ಟರ ನಿರೀಕ್ಷೆಯು ಭಂಗವಾಗುವುದು.