[1] ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನ ನಾಮದ ಮಹತ್ವವನ್ನು ವರ್ಣಿಸಿರಿ; ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಪಡಿಸಿರಿ.
[2] ಆತನನ್ನು ಕೀರ್ತಿಸಿರಿ, ಭಜಿಸಿರಿ; ಆತನ ಅದ್ಭುತಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ.
[3] ಆತನ ಪರಿಶುದ್ಧ ನಾಮದಲ್ಲಿ ಹಿಗ್ಗಿರಿ; ಯೆಹೋವನ ದರ್ಶನವನ್ನು ಕೋರುವವರ ಹೃದಯವು ಹರ್ಷಿಸಲಿ.
[4] ಯೆಹೋವನನ್ನೂ, ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ.
[5] ಆತನು ಮಾಡಿದ ಅದ್ಭುತಕೃತ್ಯ, ಆತನ ಮಹತ್ಕಾರ್ಯ, ಆತನ ಬಾಯಿಂದ ಹೊರಟ ನ್ಯಾಯನಿರ್ಣಯ ಇವುಗಳನ್ನು,
[6] ಆತನ ಸೇವಕನಾದ ಅಬ್ರಹಾಮನ ಸಂತತಿಯವರೇ, ಆತನು ಆರಿಸಿಕೊಂಡ ಯಾಕೋಬನ ವಂಶದವರೇ, ನೀವು ನೆನಪುಮಾಡಿಕೊಳ್ಳಿರಿ.
[7] ಯೆಹೋವನೆಂಬಾತನೇ ನಮ್ಮ ದೇವರು; ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ.
[8] ಆತನು ತನ್ನ ವಾಗ್ದಾನವನ್ನು ಸಾವಿರ ತಲೆಗಳವರೆಗೂ, ತನ್ನ ಒಡಂಬಡಿಕೆಯನ್ನು ನಿತ್ಯವೂ ನೆನಪಿನಲ್ಲಿಟ್ಟುಕೊಳ್ಳುತ್ತಾನೆ.
[9] ಆತನು ಆ ಒಡಂಬಡಿಕೆಯನ್ನು ಅಬ್ರಹಾಮನ ಸಂಗಡ ಮಾಡಿಕೊಂಡನು; ಇಸಾಕನಿಗೆ ತನ್ನ ವಾಗ್ದಾನಗಳನ್ನು ಕೊಟ್ಟನು.
[10] ಅದು ರಾಜಶಾಸನದಂತೆ ಇರುವುದೆಂದು ಇಸ್ರಾಯೇಲನಿಗೂ ಮಾತುಕೊಟ್ಟನು.
[11] ಅವರಲ್ಲಿ ಸ್ವಲ್ಪ ಜನರು ಕಾನಾನ್ ದೇಶದಲ್ಲಿ ಪ್ರವಾಸಿಗಳಾಗಿ ಇರುವಾಗಲೇ,
[12] ಆತನು, “ನಿಮಗೆ ಈ ದೇಶವನ್ನು ಕೊಡುವೆನು; ಅದು ನಿಮ್ಮ ಸಂತತಿಯವರಿಗೆ ಸ್ವತ್ತಾಗಿರುವುದು” ಎಂದು ಹೇಳಿದನು.
[13] ಅವರು ದೇಶದಿಂದ ದೇಶಕ್ಕೂ, ರಾಜ್ಯದಿಂದ ರಾಜ್ಯಕ್ಕೂ ಹೋಗುತ್ತಿರುವಾಗ,
[14] ಅವರಿಗೆ ಯಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ. ಆತನು ಅವರ ವಿಷಯದಲ್ಲಿ ಅರಸರನ್ನೂ ಗದರಿಸಿ,
[15] “ನಾನು ಅಭಿಷೇಕಿಸಿದವರನ್ನು ಮುಟ್ಟಬಾರದು, ನನ್ನ ಪ್ರವಾದಿಗಳಿಗೆ ಯಾವ ಕೇಡನ್ನೂ ಮಾಡಬಾರದು” ಎಂದು ಹೇಳಿದನು.
[16] ಅನಂತರ ಆತನು ಐಗುಪ್ತ ದೇಶದಲ್ಲಿ ಕ್ಷಾಮವನ್ನು ಬರಮಾಡಿ, ಆಹಾರವನ್ನು ನಾಶಮಾಡಿಬಿಟ್ಟನು.
[17] ಆತನು ಅವರ ಮುಂದಾಗಿ ಒಬ್ಬನನ್ನು ಕಳುಹಿಸಿದನು; ದಾಸತ್ವಕ್ಕೆ ಮಾರಲ್ಪಟ್ಟ ಯೋಸೇಫನೇ ಅವನು.
[18] ಅವನ ಕಾಲುಗಳು ಬೇಡಿಗಳಿಂದ ಕಟ್ಟಲ್ಪಟ್ಟವು; ಕಬ್ಬಿಣದ ಕೊರಳಪಟ್ಟಿಯಿಂದ ಅವನು ಬಂಧಿತನಾದನು.
[19] ಅವನು ತನ್ನ ಮಾತು ನೆರವೇರುವ ತನಕ ಯೆಹೋವನ ವಾಕ್ಯದಿಂದ ಶೋಧಿತನಾದನು.
[20] ಅರಸನು ಅಪ್ಪಣೆಮಾಡಿ ಅವನನ್ನು ತಪ್ಪಿಸಿದನು; ಜನಾಧಿಪತಿಯು ಅವನನ್ನು ಬಿಡಿಸಿದನು.
[21] ಅವನನ್ನು ತನ್ನ ಮನೆಗೆ ಯಜಮಾನನನ್ನಾಗಿಯೂ, ತನ್ನ ಆಸ್ತಿಗೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದನು.
[22] ತನ್ನ ಪ್ರಧಾನರನ್ನು ಇಷ್ಟಾನುಸಾರವಾಗಿ ಬಂಧಿಸುವುದಕ್ಕೂ, ತನ್ನ ಮಂತ್ರಿಗಳಿಗೆ ಬುದ್ಧಿಕಲಿಸುವುದಕ್ಕೂ ಅವನಿಗೆ ಅಧಿಕಾರಕೊಟ್ಟನು.
[23] ಆಗ ಇಸ್ರಾಯೇಲನು ಐಗುಪ್ತಕ್ಕೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪ್ರವಾಸಿಯಾದನು.
[24] ದೇವರು ತನ್ನ ಜನರನ್ನು ಬಹಳವಾಗಿ ವೃದ್ಧಿಮಾಡಿ, ಅವರು ಶತ್ರುಗಳಿಗಿಂತ ಬಲಿಷ್ಠರಾಗುವಂತೆ ಮಾಡಿದನು.
[25] ಆತನು ಆ ದೇಶದವರ ಹೃದಯವನ್ನು ಮಾರ್ಪಡಿಸಿದ್ದರಿಂದ, ಅವರು ಆತನ ಜನರನ್ನು ದ್ವೇಷಿಸಿ, ಆತನ ಸೇವಕರನ್ನು ಕುಯುಕ್ತಿಯಿಂದ ನಡೆಸಿದರು.
[26] ಆಗ ಆತನು ತನ್ನ ಸೇವಕನಾದ ಮೋಶೆಯನ್ನೂ, ತಾನು ಆರಿಸಿಕೊಂಡ ಆರೋನನನ್ನೂ ಕಳುಹಿಸಿದನು.
[27] ಅವರು ಹಾಮನ ದೇಶದವರ ಮಧ್ಯದಲ್ಲಿ, ಆತನು ಆಜ್ಞಾಪಿಸಿದ ವಿವಿಧ ಮಹತ್ಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿದರು.
[28] ಆತನು ಕತ್ತಲೆಯನ್ನು ಕಳುಹಿಸಲು ಕತ್ತಲೆಯಾಯಿತು. ಐಗುಪ್ತ್ಯರು ಆತನ ಆಜ್ಞೆಗಳನ್ನು ಅನುಸರಿಸಲಿಲ್ಲ.
[29] ಆತನು ಐಗುಪ್ತ್ಯರ ನೀರನ್ನು ರಕ್ತಮಾಡಿ, ಮೀನುಗಳನ್ನು ಸಾಯಿಸಿದನು.
[30] ಅವರ ದೇಶದಲ್ಲೆಲ್ಲಾ ಕಪ್ಪೆಗಳು ತುಂಬಿಕೊಂಡವು; ಅರಮನೆಯಲ್ಲಿಯೂ ವ್ಯಾಪಿಸಿಕೊಂಡವು.
[31] ಆತನು ಆಜ್ಞಾಪಿಸಲು ಅವರ ಎಲ್ಲಾ ಪ್ರಾಂತ್ಯಗಳಲ್ಲಿ, ವಿಷದ ಹುಳಗಳೂ, ಹೇನುಗಳೂ ಉಂಟಾದವು.
[32] ಆತನು ಅವರ ದೇಶದಲ್ಲಿ ಕಲ್ಮಳೆಯನ್ನು, ಅಗ್ನಿಜ್ವಾಲೆಯನ್ನು ಬರಮಾಡಿ,
[33] ಅವರ ದ್ರಾಕ್ಷಾಲತೆಗಳನ್ನು, ಅಂಜೂರದ ಗಿಡಗಳನ್ನು ನಾಶಮಾಡಿ, ಅವರ ಪ್ರಾಂತ್ಯಗಳಲ್ಲಿದ್ದ ಮರಗಳನ್ನು ಮುರಿದುಬಿಟ್ಟನು.
[34] ಆತನು ಆಜ್ಞಾಪಿಸಲು ಮಿಡತೆಗಳೂ, ಲೆಕ್ಕವಿಲ್ಲದಷ್ಟು ಜಿಟ್ಟೆಹುಳಗಳೂ ಬಂದು,
[35] ಅವರ ದೇಶದಲ್ಲಿದ್ದ ಎಲ್ಲಾ ಪೈರುಗಳನ್ನು, ಭೂಮಿಯ ಬೆಳೆಗಳನ್ನು ತಿಂದುಬಿಟ್ಟವು.
[36] ಅವನು ಆ ದೇಶದವರ ವೀರ್ಯಕ್ಕೆ ಪ್ರಥಮಫಲವಾಗಿದ್ದ, ಚೊಚ್ಚಲ ಮಕ್ಕಳನ್ನು ಸಂಹರಿಸಿದನು.
[37] ಇಸ್ರಾಯೇಲರನ್ನು ಬೆಳ್ಳಿ, ಬಂಗಾರಗಳ ಸಹಿತವಾಗಿ ಹೊರಗೆ ಬರಮಾಡಿದನು; ಅವರ ಕುಲಗಳಲ್ಲಿ ಎಡವುವವನು ಒಬ್ಬನಾದರೂ ಇರಲಿಲ್ಲ.
[38] ಐಗುಪ್ತ್ಯರು ಅವರ ವಿಷಯದಲ್ಲಿ ಹೆದರಿಕೆಯುಳ್ಳವರಾದ್ದರಿಂದ, ಅವರು ಹೊರಟು ಹೋದದ್ದಕ್ಕೆ ಸಂತೋಷಿಸಿದರು.
[39] ಅವರಿಗೆ ಹಗಲಲ್ಲಿ ನೆರಳಿಗೋಸ್ಕರ ಮೋಡವನ್ನು, ಇರುಳಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನು ಮೇಲೆ ಹರಡಿದನು.
[40] ಅವರು ಬೇಡಿಕೊಳ್ಳಲು ಲಾವಕ್ಕಿಗಳನ್ನು ಬರಮಾಡಿದನು; ದಿವ್ಯ ಆಹಾರದಿಂದ ಅವರನ್ನು ತೃಪ್ತಿಗೊಳಿಸಿದನು.
[41] ಆತನು ಬಂಡೆಯನ್ನು ಸೀಳಲು ನೀರು ಚಿಮ್ಮಿ ಬಂದು, ಅರಣ್ಯದಲ್ಲಿ ನದಿಯಾಗಿ ಹರಿಯಿತು.
[42] ಹೀಗೆ ಆತನು ತನ್ನ ಪರಿಶುದ್ಧ ವಚನವನ್ನೂ, ತನ್ನ ಸೇವಕನಾದ ಅಬ್ರಹಾಮನನ್ನೂ ನೆನಪುಮಾಡಿಕೊಂಡು
[43] ತನ್ನ ಪ್ರಜೆಯು ಉಲ್ಲಾಸದಿಂದಲೂ, ತಾನು ಆರಿಸಿಕೊಂಡವರು ಉತ್ಸಾಹಧ್ವನಿಯಿಂದಲೂ ಹೊರಗೆ ಬರುವಂತೆ ಮಾಡಿದನು.
[44] ಆತನು ಅವರಿಗೆ ಪರಜನಾಂಗಗಳ ದೇಶವನ್ನು ಕೊಟ್ಟನು; ಅನ್ಯಜನಾಂಗಗಳ ಕಷ್ಟಾರ್ಜಿತವು ಅವರ ಕೈ ಸೇರಿತು.
[45] ಅವರು ತನ್ನ ವಿಧಿಗಳನ್ನು ಕೈಕೊಂಡು, ತನ್ನ ಧರ್ಮಶಾಸ್ತ್ರವನ್ನು ಅನುಸರಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು. ಯೆಹೋವನಿಗೆ ಸ್ತೋತ್ರ!