Skip to content
Opens in a new window
Listen to this chapter • 2:23

[1] ಯೆಹೋವನು ನನಗೆ ಬೆಳಕೂ, ರಕ್ಷಕನೂ ಆಗಿದ್ದಾನೆ; ನಾನು ಯಾರಿಗೆ ಭಯಪಟ್ಟೆನು? ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು?

[2] ನನ್ನನ್ನು ಬಾಧಿಸುತ್ತಿರುವ ದುರ್ವೈರಿಗಳು ನನ್ನನ್ನು ನುಂಗಿಬಿಡಬೇಕೆಂದು ಬಂದು, ತಾವೇ ನೆಲಕ್ಕೆ ಬಿದ್ದುಹೋದರು.

[3] ನನಗೆ ವಿರುದ್ಧವಾಗಿ ದಂಡು ಬಂದಿಳಿದರೂ ನನಗೇನೂ ಭಯವಿಲ್ಲ; ಚತುರಂಗಬಲವು ಯುದ್ಧಸನ್ನದ್ಧವಾಗಿ ನಿಂತರೂ, ಭರವಸವುಳ್ಳವನಾಗಿಯೇ ಇರುವೆನು.

[4] ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ, ಆತನ ಪ್ರಸನ್ನತೆಯನ್ನು ನೋಡುವುದಕ್ಕೂ, ಆತನ ಮಂದಿರದಲ್ಲಿ ಧ್ಯಾನ ಮಾಡುವುದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರು ನೋಡುತ್ತಿರುವೆನು.

[5] ಅಪಾಯಕಾಲದಲ್ಲಿ ಆತನು ನನ್ನನ್ನು ಗುಪ್ತಸ್ಥಳದಲ್ಲಿ ಅಡಗಿಸುವನು; ತನ್ನ ಗುಡಾರವೆಂಬ ಆಶ್ರಯಸ್ಥಾನದಲ್ಲಿ ನನ್ನನ್ನು ಭದ್ರಪಡಿಸುವನು; ಪರ್ವತಶಿಖರದ ಮೇಲೆ ನನ್ನನ್ನು ಸುರಕ್ಷಿತವಾಗಿ ನಿಲ್ಲಿಸುವನು.

[6] ಹೀಗಿರುವುದರಿಂದ ನನ್ನ ಸುತ್ತಲಿರುವ ವೈರಿಗಳ ಮೇಲೆ, ನನ್ನ ತಲೆ ಎತ್ತಲ್ಪಟ್ಟಿರುವುದು; ನಾನು ಯೆಹೋವನ ಗುಡಾರದಲ್ಲಿ, ಉತ್ಸಾಹಧ್ವನಿಯೊಡನೆ ಯಜ್ಞಗಳನ್ನು ಸಮರ್ಪಿಸುವೆನು. ಆತನನ್ನು ಹಾಡುತ್ತಾ ವಾದ್ಯಬಾರಿಸುವೆನು.

[7] ಯೆಹೋವನೇ, ನಿನಗೆ ಗಟ್ಟಿಯಾಗಿ ಮೊರೆಯಿಡುತ್ತೇನೆ; ನನ್ನನ್ನು ಕರುಣಿಸಿ, ಸದುತ್ತರವನ್ನು ದಯಪಾಲಿಸು.

[8] “ನನ್ನ ಸಾನ್ನಿಧ್ಯಕ್ಕೆ ಬಾ” ಎಂಬ ನಿನ್ನ ಮಾತಿಗೆ, ನಾನು, “ಯೆಹೋವನೇ, ನಿನ್ನ ಸಾನ್ನಿಧ್ಯಕ್ಕೆ ಬಂದೇ ಬರುವೆನು” ಎಂದು ಉತ್ತರಕೊಟ್ಟೆನು.

[9] ನನಗೆ ವಿಮುಖನಾಗಿರಬೇಡ; ನಿನ್ನ ಸೇವಕನನ್ನು ಕೋಪದಿಂದ ತಳ್ಳಬೇಡ. ನೀನು ನನಗೆ ಸಹಾಯಕನಾಗಿಯೇ ಇದ್ದೆಯಲ್ಲವೇ; ನನ್ನನ್ನು ರಕ್ಷಿಸಿದ ದೇವರೇ, ಕೈಬಿಡಬೇಡ, ತೊರೆದುಬಿಡಬೇಡ.

[10] ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.

[11] ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ಹೊಂಚುಹಾಕಿರುವವರಿಗೆ ಸಿಕ್ಕದ ಹಾಗೆ ನನ್ನನ್ನು ಸಮವಾದ ದಾರಿಯಲ್ಲಿ ನಡೆಸು.

[12] ಸುಳ್ಳುಸಾಕ್ಷಿಗಳೂ ಬೆದರಿಸುವವರೂ ನನಗೆ ವಿರುದ್ಧವಾಗಿ ಎದ್ದಿದ್ದಾರೆ; ಇಂಥ ವೈರಿಗಳ ವಶಕ್ಕೆ ನನ್ನನ್ನು ಕೊಡಬೇಡ.

[13] ಜೀವಲೋಕದಲ್ಲಿಯೇ ಯೆಹೋವನ ದಯೆಯನ್ನು ಅನುಭವಿಸುವೆನು ಎಂದು ದೃಢವಾಗಿ ನಂಬಿದ್ದೇನೆ.

[14] ಯೆಹೋವನನ್ನು ನಿರೀಕ್ಷಿಸಿಕೊಂಡಿರು, ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.

ಕೀರ್ತನೆಗಳು — Chapters