Skip to content
Opens in a new window
Listen to this chapter • 2:14

[1] ಯೆಹೋವನೇ, ನ್ಯಾಯವಾದುದನ್ನು ಆಲೈಸು; ನನ್ನ ಮೊರೆಗೆ ಲಕ್ಷ್ಯವಿಡು. ನನ್ನ ಪ್ರಾರ್ಥನೆಗೆ ಕಿವಿಗೊಡು; ಅದು ಕಪಟವಾದ ಬಾಯಿಂದ ಬಂದದ್ದಲ್ಲ.

[2] ನಿನ್ನಿಂದ ನನಗೆ ನ್ಯಾಯವಾದ ತೀರ್ಪು ಉಂಟಾಗಲಿ; ನೀನು ನೀತಿಗನುಸಾರವಾಗಿ ನೋಡುವವನಲ್ಲವೇ.

[3] ನೀನು ನನ್ನ ಹೃದಯವನ್ನು ಪರೀಕ್ಷಿಸಿದರೂ, ರಾತ್ರಿಯ ವೇಳೆ ವಿಚಾರಿಸಿದರೂ, ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದರೂ, ಯಾವ ದುರಾಲೋಚನೆಯಾದರೂ ನನ್ನಲ್ಲಿ ದೊರೆಯುವುದಿಲ್ಲ; ನನ್ನ ಬಾಯಿ ಮಾತುಗಳಲ್ಲಿ ತಪ್ಪುವುದಿಲ್ಲ ಎಂದು ತೀರ್ಮಾನಿಸಿದ್ದೇನೆ.

[4] ನಾನಂತೂ ಲೋಕವ್ಯವಹಾರಗಳಲ್ಲಿ ಬಲಾತ್ಕಾರಿಗಳಂತೆ ನಡೆಯದೆ ನಿನ್ನ ಮಾತನ್ನೇ ಅನುಸರಿಸಿದ್ದೇನೆ.

[5] ನಿನ್ನ ಮಾರ್ಗದಲ್ಲೇ ಹೆಜ್ಜೆಯಿಟ್ಟು ನಡೆಯುತ್ತಾ ಇದ್ದೇನೆ; ನನ್ನ ಕಾಲು ಜಾರಲಿಲ್ಲ.

[6] ದೇವರೇ, ನನಗೆ ಸದುತ್ತರವನ್ನು ದಯಪಾಲಿಸುವಿಯೆಂದು ಮೊರೆಯಿಡುತ್ತೇನೆ, ಕಿವಿಗೊಟ್ಟು ಕೇಳು.

[7] ಭುಜಬಲವನ್ನು ಪ್ರಯೋಗಿಸಿ, ಶರಣಾಗತರನ್ನು ವಿರೋಧಿಗಳಿಂದ ರಕ್ಷಿಸುವಾತನೇ, ನಿನ್ನ ಪ್ರೀತಿಯನ್ನು ವಿಶೇಷವಾಗಿ ತೋರಿಸು.

[8] ನನ್ನನ್ನು ಸುತ್ತಿಕೊಂಡು ಬಾಧಿಸುತ್ತಿರುವ ದುಷ್ಟರಿಂದಲೂ, ಪ್ರಾಣವೈರಿಗಳಿಂದಲೂ ತಪ್ಪಿಸಿದ್ದಿ.

[9] ನಿನ್ನ ರೆಕ್ಕೆಗಳ ಮರೆಯಲ್ಲಿಟ್ಟುಕೊಂಡು ನನ್ನನ್ನು ದುಷ್ಟರಿಂದ ಕಾಯಿ; ಕಣ್ಣು ಗುಡ್ಡಿನಂತೆಯೇ ಕಾಪಾಡು.

[10] ಅವರು ತಮ್ಮ ಹೃದಯವನ್ನು ಕಠಿಣಮಾಡಿದ್ದಾರೆ; ಅಹಂಕಾರದಿಂದ ಮಾತನಾಡುತ್ತಾರೆ.

[11] ನಾವು ಎಲ್ಲಿ ಕಾಲಿಟ್ಟರೂ ಅಲ್ಲೆಲ್ಲಾ ನಮ್ಮನ್ನು ಸುತ್ತಿಕೊಳ್ಳುತ್ತಾರೆ; ನಮ್ಮನ್ನು ನೆಲಕ್ಕೆ ಬೀಳಿಸಬೇಕೆಂದು ಸಮಯನೋಡುತ್ತಾರೆ.

[12] ನನ್ನ ಶತ್ರುವು ಸೀಳಿಬಿಡಲಾಶಿಸುವ ಸಿಂಹದಂತೆಯೂ, ಮರೆಯಲ್ಲಿ ಹೊಂಚುಹಾಕಿರುವ ಪ್ರಾಯದ ಸಿಂಹದಂತೆಯೂ ಇದ್ದಾನೆ.

[13] ಯೆಹೋವನೇ, ನೀನು ಅವನಿಗೆ ಎದುರಾಗಿ ನಿಂತು ಅವನನ್ನು ಕೆಡವಿಬಿಡು; ನಿನ್ನ ಕತ್ತಿಯಿಂದ ನನ್ನ ಪ್ರಾಣವನ್ನು ದುಷ್ಟರಿಗೆ ತಪ್ಪಿಸಿ ಕಾಪಾಡು.

[14] ಯೆಹೋವನೇ, ಇಹಲೋಕವೇ ತಮ್ಮ ಪಾಲೆಂದು ನಂಬಿದ ನರರಿಗೆ ಸಿಕ್ಕದಂತೆ ನಿನ್ನ ಕೈಯಿಂದ ನನ್ನನ್ನು ತಪ್ಪಿಸು; ನಿನ್ನ ಐಶ್ವರ್ಯದಿಂದ ಅವರ ಹೊಟ್ಟೆಯನ್ನು ತುಂಬಿಸಿದ್ದೀಯಲ್ಲಾ. ಅವರು ಸಂತಾನವೃದ್ಧಿಹೊಂದಿ ಉಳಿದ ಆಸ್ತಿಯನ್ನು ತಮ್ಮ ಮಕ್ಕಳಿಗೆ ಬಿಡುತ್ತಾರೆ.

[15] ನಾನಾದರೋ ನಿರಪರಾಧಿಯು; ನಿನ್ನ ಸಾನ್ನಿಧ್ಯವನ್ನು ಸೇರುವೆನು. ನಾನು ಎಚ್ಚತ್ತಾಗ ನಿನ್ನ ನೀತಿಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.

ಕೀರ್ತನೆಗಳು — Chapters