Skip to content
Opens in a new window
Listen to this chapter • 3:12

[1] ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳಿದುಕೊಂಡಿದ್ದೀ;

[2] ನಾನು ಕುಳಿತುಕೊಳ್ಳುವುದು, ಏಳುವುದು ನಿನಗೆ ಗೊತ್ತಿದೆ, ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತಿ.

[3] ನಾನು ನಡೆಯುವುದನ್ನು, ಮಲಗುವುದನ್ನು ಶೋಧಿಸಿ ಗ್ರಹಿಸಿಕೊಳ್ಳುತ್ತಿ, ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ.

[4] ಯೆಹೋವನೇ, ನನ್ನ ನಾಲಿಗೆಯ ಮಾತುಗಳಲ್ಲಿ, ನೀನು ಅರಿಯದೆ ಇರುವಂಥದು ಒಂದೂ ಇಲ್ಲ.

[5] ಸುತ್ತಲೂ ನನ್ನನ್ನು ಆವರಿಸಿ, ನಿನ್ನ ಕೈಯನ್ನು ನನ್ನ ಮೇಲೆ ಇಟ್ಟಿದ್ದಿ.

[6] ಇಂಥ ಜ್ಞಾನವು ನನಗೆ ಬಹು ಆಶ್ಚರ್ಯವಾಗಿದೆ; ಅದು ಉನ್ನತವಾದದ್ದು, ನನಗೆ ನಿಲುಕುವುದಿಲ್ಲ.

[7] ನಾನು ನಿನ್ನ ಆತ್ಮಕ್ಕೆ ತಪ್ಪಿಸಿಕೊಳ್ಳುವಂತೆ ಎಲ್ಲಿಗೆ ಹೋಗಲಿ? ನಿನ್ನ ಕಣ್ಣಿಗೆ ಮರೆಯಾಗುವಂತೆ ಎಲ್ಲಿಗೆ ಓಡಲಿ?

[8] ಮೇಲಣ ಲೋಕಕ್ಕೆ ಏರಿಹೋದರೆ ಅಲ್ಲಿ ನೀನಿರುತ್ತಿ, ಪಾತಾಳಕ್ಕೆ ಹೋಗಿ ಮಲಗಿಕೊಂಡೇನೆಂದರೆ ಅಲ್ಲಿಯೂ ನೀನಿರುವಿ.

[9] ಅರುಣನ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಿಹೋಗಿ, ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡಲು ಪ್ರಯತ್ನಿಸಿದರೆ,

[10] ಅಲ್ಲಿಯೂ ನಿನ್ನ ಕೈ ನನ್ನನ್ನು ನಡೆಸುವುದು; ನಿನ್ನ ಬಲಗೈ ನನ್ನನ್ನು ಹಿಡಿದಿರುವುದು.

[11] ಕಾರ್ಗತ್ತಲೆಯು ನನ್ನನ್ನು ಕವಿಯುವುದು, “ಹಗಲು ಹೋಗಿ ನನ್ನ ಸುತ್ತಲು ಇರುಳಾಗುವುದು” ಎಂದು ಹೇಳಿಕೊಂಡರೇನು?

[12] ನಿನಗೆ ಕತ್ತಲೆಯು ಕತ್ತಲೆಯಲ್ಲ; ಇರುಳು ಹಗಲಾಗಿಯೇ ಇರುತ್ತದೆ, ಕತ್ತಲು ಬೆಳಕುಗಳೆರಡೂ ನಿನಗೆ ಒಂದೇ.

[13] ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ, ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ?

[14] ನೀನು ನನ್ನನ್ನು ಅದ್ಭುತವಾಗಿಯೂ, ವಿಚಿತ್ರವಾಗಿಯೂ ರಚಿಸಿದ್ದರಿಂದ, ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು, ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.

[15] ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ, ಭೂಗರ್ಭದಲ್ಲಿ ರಚಿಸಲ್ಪಡುತ್ತಾ ಇದ್ದಾಗ, ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ.

[16] ನಾನು ಇನ್ನೂ ಕೇವಲ ಪಿಂಡವಾಗಿರುವಾಗ, ನಿನ್ನ ಕಣ್ಣುಗಳು ನನ್ನನ್ನು ನೋಡಿದವು, ನನ್ನ ಆಯುಷ್ಕಾಲದ ಪ್ರಥಮದಿನವು ಪ್ರಾರಂಭವಾಗುವ ಮೊದಲೇ, ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.

[17] ದೇವರೇ, ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟೋ ಗೌರವವಾಗಿವೆ, ಅವುಗಳು ಎಷ್ಟೋ ಅಸಂಖ್ಯವಾಗಿವೆ.

[18] ಅವುಗಳನ್ನು ಲೆಕ್ಕಿಸುವುದಾದರೆ ಸಮುದ್ರದ ಮರಳಿಗಿಂತ ಹೆಚ್ಚಾಗಿವೆ, ನಾನು ಎಚ್ಚರವಾಗಲು ಮೊದಲಿನಂತೆಯೇ ನಿನ್ನ ಬಳಿಯಲ್ಲಿರುತ್ತೇನೆ.

[19] ಯೆಹೋವನೇ, ನೀನು ದುಷ್ಟರನ್ನು ಸಂಹರಿಸಿಬಿಟ್ಟರೆ, ಎಷ್ಟೋ ಒಳ್ಳೆಯದು. ಕೊಲೆಪಾತಕರೇ, ನನ್ನಿಂದ ತೊಲಗಿಹೋಗಿರಿ.

[20] ದೇವರೇ, ಅವರು ನಿನ್ನ ಶತ್ರುಗಳು, ಅಯೋಗ್ಯ ಕಾರ್ಯಕ್ಕಾಗಿ ನಿನ್ನ ಹೆಸರೆತ್ತುತ್ತಾರೆ, ಸುಳ್ಳಾಣೆಯಿಡುತ್ತಾರೆ.

[21] ಯೆಹೋವನೇ, ನಿನ್ನನ್ನು ದ್ವೇಷಿಸುವವರನ್ನು ನಾನು ದ್ವೇಷಿಸುತ್ತೇನಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವುದಿಲ್ಲವೋ?

[22] ನಾನು ಅವರನ್ನು ಸಂಪೂರ್ಣವಾಗಿ ದ್ವೇಷಿಸುತ್ತೇನೆ, ಅವರು ನನಗೂ ವೈರಿಗಳೇ ಆಗಿದ್ದಾರೆ.

[23] ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ, ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ತಿಳಿದುಕೋ.

[24] ನನ್ನಲ್ಲಿ ಕೇಡಿನ ಮಾರ್ಗ ಇರುತ್ತದೋ ಏನೋ ನೋಡಿ, ಸನಾತನ ಮಾರ್ಗದಲ್ಲಿ ನನ್ನನ್ನು ನಡೆಸು.

ಕೀರ್ತನೆಗಳು — Chapters