Skip to content
Opens in a new window
Listen to this chapter • 6:10

[1] ಯೆಹೋವನೇ, ನಿತ್ಯವೂ ನಿನ್ನ ಕೃಪಾತಿಶಯವನ್ನು ಹಾಡಿಹರಸುವೆನು; ನನ್ನ ಬಾಯಿ ನಿನ್ನ ಸತ್ಯವನ್ನು, ಮುಂದಣ ಸಂತಾನದವರೆಲ್ಲರಿಗೂ ತಿಳಿಯಮಾಡುವುದು.

[2] ನಿನ್ನ ಪ್ರೀತಿಸಂಕಲ್ಪವು ನಿತ್ಯವು ಸಿದ್ಧಿಗೆ ಬರುತ್ತಲೇ ಇರುವುದು; ಆಕಾಶದಲ್ಲಿ ನಿನ್ನ ಸತ್ಯತೆಯನ್ನು ಸ್ಥಾಪಿಸುವಿ ಎಂದು ತಿಳಿದುಕೊಂಡಿದ್ದೇನೆ.

[3] ನೀನು ನುಡಿದದ್ದೇನೆಂದರೆ, “ನಾನು ಆರಿಸಿಕೊಂಡ ಸೇವಕನಾದ ದಾವೀದನ ಸಂಗಡ ಒಡಂಬಡಿಕೆ ಮಾಡಿಕೊಂಡು ಆಣೆಯಿಟ್ಟು,

[4] ‘ಶಾಶ್ವತವಾಗಿ ನಿನ್ನ ಸಂತತಿಯನ್ನು ಸ್ಥಾಪಿಸುವೆನು, ತಲತಲಾಂತರಗಳಿಗೂ ನಿನ್ನ ಸಿಂಹಾಸನವನ್ನು ಸ್ಥಿರಪಡಿಸುವೆನು ಎಂದು ಹೇಳಿದ್ದೇನೆ’” ಎಂಬುವುದೇ. ಸೆಲಾ

[5] ಯೆಹೋವನೇ, ಗಗನವು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವುದು; ನಿನ್ನ ಸತ್ಯವನ್ನು ಪರಿಶುದ್ಧರ ಸಭೆಯಲ್ಲಿ ಕೀರ್ತಿಸುವೆನು.

[6] ಮೇಘಮಂಡಲದಲ್ಲಿ ಯೆಹೋವನಿಗೆ ಸಮಾನರು ಯಾರು? ದೇವದೂತರಲ್ಲಿ ಯೆಹೋವನಿಗೆ ಸರಿಯಾದವರು ಯಾರು?

[7] ಆತನು ಪರಿಶುದ್ಧರ ಸಭೆಯಲ್ಲಿ ಘನ ಹೊಂದುವ ದೇವರು; ತನ್ನ ಎಲ್ಲಾ ಪರಿವಾರದವರಿಗಿಂತ ಭಯಂಕರನು.

[8] ಯೆಹೋವನೇ, ಸೇನಾಧೀಶ್ವರನಾದ ದೇವರೇ, ನಿನಗೆ ಸಮಾನರು ಯಾರು? ಯಾಹುವೇ, ನೀನು ಶಕ್ತನು, ಸತ್ಯತೆಯಿಂದ ಆವರಿಸಲ್ಪಟ್ಟವನು.

[9] ಸಮುದ್ರದ ಅಲ್ಲಕಲ್ಲೋಲಗಳನ್ನು ಅಧೀನದಲ್ಲಿ ಇಟ್ಟುಕೊಂಡಿರುವವನು ನೀನು; ತೆರೆಗಳು ಏಳುವಾಗ ಅವುಗಳನ್ನು ತಡೆಯುವವನು ನೀನು.

[10] ರಹಬನ್ನು ಛೇದಿಸಿ ಸಾಯಿಸಿದವನು ನೀನು; ನಿನ್ನ ಭುಜಬಲದಿಂದ ಶತ್ರುಗಳನ್ನು ಚದರಿಸಿಬಿಟ್ಟಿದ್ದಿ.

[11] ಆಕಾಶವೂ ನಿನ್ನದು, ಭೂಮಿಯೂ ನಿನ್ನದೇ; ಲೋಕವನ್ನೂ ಅದರಲ್ಲಿರುವುದೆಲ್ಲವನ್ನೂ ನಿರ್ಮಿಸಿದವನು ನೀನು.

[12] ದಕ್ಷಿಣೋತ್ತರ ದಿಕ್ಕುಗಳನ್ನು ಉಂಟುಮಾಡಿದವನು ನೀನು. ತಾಬೋರ್, ಹೆರ್ಮೋನ್ ಪರ್ವತಗಳು ನಿನ್ನ ನಾಮದಲ್ಲಿ ಆನಂದಧ್ವನಿ ಮಾಡುತ್ತವೆ.

[13] ನಿನ್ನ ಭುಜಬಲವು ಮಹಾಬಲವುಳ್ಳದ್ದು. ನಿನ್ನ ಹಸ್ತವು ಶಕ್ತಿಯುಳ್ಳದ್ದು; ನಿನ್ನ ಬಲಗೈ ಮಹತ್ತುಗಳನ್ನು ನಡೆಸುತ್ತದೆ.

[14] ನೀತಿ ಮತ್ತು ನ್ಯಾಯಗಳು ನಿನ್ನ ಸಿಂಹಾಸನದ ಅಸ್ತಿವಾರವು; ನಿನ್ನ ಸಾನ್ನಿಧ್ಯದೂತರು ಪ್ರೀತಿ ಮತ್ತು ಸತ್ಯತೆಗಳೇ.

[15] ಉತ್ಸಾಹಧ್ವನಿಯನ್ನು ತಿಳಿದಿರುವ ಜನರು ಧನ್ಯರು; ಯೆಹೋವನೇ, ಅವರು ನಿನ್ನ ಮುಖಪ್ರಕಾಶದಲ್ಲಿ ಸಂಚರಿಸುತ್ತಾರೆ.

[16] ಯಾವಾಗಲೂ ನಿನ್ನ ನಾಮದಲ್ಲಿ ಆನಂದಿಸುತ್ತಾರೆ; ನಿನ್ನ ನೀತಿಯಿಂದ ಏಳಿಗೆ ಹೊಂದುತ್ತಾರೆ.

[17] ಅವರು ಹಿಗ್ಗುವ ಬಲವು ನೀನೇ. ನಿನ್ನ ಕರುಣೆಯ ಕಟಾಕ್ಷದಿಂದ ನಮ್ಮ ಕೊಂಬು ಎತ್ತಲ್ಪಟ್ಟಿರುವುದು.

[18] ನಮಗೆ ಗುರಾಣಿಯಂತಿರುವ ನಮ್ಮ ಅರಸನು ಯೆಹೋವನೇ; ಅವನು ಇಸ್ರಾಯೇಲರ ಸದಮಲಸ್ವಾಮಿಯ, ಸ್ವಕೀಯನು.

[19] ಆ ಕಾಲದಲ್ಲಿ ನೀನು ದರ್ಶನದಲ್ಲಿ ನಿನ್ನ ಭಕ್ತರಿಗೆ ಹೇಳಿದ್ದೇನೆಂದರೆ, “ಒಬ್ಬ ಶೂರನಿಗೆ ರಕ್ಷಾಬಲವನ್ನು ಅನುಗ್ರಹಿಸಿದ್ದೇನೆ; ಪ್ರಜೆಗಳಲ್ಲಿ ಒಬ್ಬ ಯೌವನಸ್ಥನನ್ನು ಆರಿಸಿ ಉನ್ನತಸ್ಥಾನದಲ್ಲಿಟ್ಟಿದ್ದೇನೆ.

[20] ನನ್ನ ಸೇವಕನಾದ ದಾವೀದನನ್ನು ಕಂಡು, ಪರಿಶುದ್ಧ ತೈಲದಿಂದ ಅವನನ್ನು ಅಭಿಷೇಕಿಸಿದ್ದೇನೆ.

[21] ನನ್ನ ಹಸ್ತವು ಅವನ ಮೇಲೆ ಸ್ಥಿರವಾಗಿರುವುದು; ನನ್ನ ಭುಜವು ಅವನನ್ನು ಬಲಪಡಿಸುವುದು.

[22] ವೈರಿಯ ಕುತಂತ್ರವು ಅವನಲ್ಲಿ ಸಾಗದು; ಯಾವ ಕೆಡುಕನೂ ಅವನನ್ನು ಕುಗ್ಗಿಸಲಾರನು.

[23] ಅವನ ವಿರೋಧಿಗಳನ್ನು ಅವನ ಮುಂದೆಯೇ ಜಜ್ಜಿ ಹಾಕುವೆನು; ಅವನ ದ್ವೇಷಿಗಳನ್ನು ಹತಮಾಡಿಬಿಡುವೆನು.

[24] ಆದರೆ ನನ್ನ ಪ್ರೀತಿ ಮತ್ತು ಸತ್ಯತೆಗಳು ಅವನೊಡನೆ ಇರುವವು; ನನ್ನ ಹೆಸರಿನಿಂದ ಅವನ ಕೊಂಬು ಎತ್ತಲ್ಪಡುವುದು.

[25] ಸಮುದ್ರದಿಂದ ನದಿಗಳವರೆಗೂ ಅವನ ಹಸ್ತಕ್ಕೆ ಅಧಿಕಾರವನ್ನು ಕೊಡುವೆನು.

[26] ಅವನು ನನಗೆ, ‘ನನ್ನ ತಂದೆಯೂ, ದೇವರೂ, ಆಶ್ರಯದುರ್ಗವೂ ನೀನೇ’ ಎಂದು ಹೇಳುವನು.

[27] ನಾನಾದರೋ ಅವನನ್ನು ಜ್ಯೇಷ್ಠಪುತ್ರನನ್ನಾಗಿಯೂ, ಭೂರಾಜರಲ್ಲಿ ಉನ್ನತನನ್ನಾಗಿಯೂ ಮಾಡಿಕೊಳ್ಳುವೆನು.

[28] ನನ್ನ ಕೃಪೆಯು ಅವನಲ್ಲಿ ಶಾಶ್ವತವಾಗಿ ಇರುವುದು; ನನ್ನ ಒಡಂಬಡಿಕೆಯು ಅವನಲ್ಲಿ ಸ್ಥಿರವಾಗಿರುವುದು.

[29] ಅವನ ಸಂತಾನವನ್ನು ಯಾವಾಗಲೂ ಉಳಿಸುವೆನು. ಅವನ ಸಿಂಹಾಸನವು ಆಕಾಶವಿರುವವರೆಗೂ ಇರುವುದು.

[30] ಅವನ ಸಂತಾನದವರು ನನ್ನ ಧರ್ಮಶಾಸ್ತ್ರವನ್ನು ಬಿಟ್ಟು, ನನ್ನ ಆಜ್ಞೆಗಳಲ್ಲಿ ನಡೆಯದೆ,

[31] ನನ್ನ ವಿಧಿಗಳನ್ನು ಮೀರಿ, ನನ್ನ ನೇಮಗಳನ್ನು ಪಾಲಿಸದೆ ಹೋದರೆ,

[32] ಆಗ ನಾನು ಅವರ ದ್ರೋಹಕ್ಕಾಗಿ ಅವರನ್ನು ಬೆತ್ತದಿಂದ ಹೊಡೆಯುವೆನು; ಅವರ ಅಪರಾಧಕ್ಕಾಗಿ ಪೆಟ್ಟುಕೊಡುವೆನು.

[33] ಆದರೂ ನಾನು ಅವನಲ್ಲಿಟ್ಟಿರುವ ಕೃಪೆಯನ್ನು ತಪ್ಪಿಸುವುದಿಲ್ಲ; ನನ್ನ ನಂಬಿಗಸ್ತಿಕೆಯಿಂದ ಜಾರುವುದಿಲ್ಲ.

[34] ನನ್ನ ಒಡಂಬಡಿಕೆಯನ್ನು ಭಂಗಪಡಿಸುವುದಿಲ್ಲ; ನನ್ನ ಮಾತನ್ನು ಬದಲಿಸುವುದಿಲ್ಲ.

[35] ನನ್ನ ಪವಿತ್ರತ್ವದಲ್ಲಿ ಆಣೆಯಿಟ್ಟು ಒಂದು ಸಂಗತಿಯನ್ನು ಹೇಳಿದ್ದೇನೆ; ಅದರ ವಿಷಯದಲ್ಲಿ ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ.

[36] ಅದೇನೆಂದರೆ, ಅವನ ಸಂತತಿಯು ಶಾಶ್ವತವಾಗಿ ಇರುವುದು; ಅವನ ಸಿಂಹಾಸನವು ಸೂರ್ಯನಂತೆ ನನ್ನ ಎದುರಿನಲ್ಲಿದ್ದು,

[37] ಚಂದ್ರನಂತೆ ನಿತ್ಯಕ್ಕೂ ಸ್ಥಿರವಾಗಿರುವುದು. ಪರಲೋಕದ ಸಾಕ್ಷಿ ಸತ್ಯವೇ ಸರಿ.” ಸೆಲಾ.

[38] ಹೀಗೆ ಹೇಳಿದ ನೀನು ನಿನ್ನ ಅಭಿಷಿಕ್ತನ ಮೇಲೆ ಕೋಪಗೊಂಡವನಾಗಿ, ಅವನನ್ನು ಅಸಹ್ಯಿಸಿ ತಳ್ಳಿಬಿಟ್ಟಿದ್ದೀ.

[39] ನೀನು ನಿನ್ನ ಸೇವಕನ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸಿ, ಅವನ ಕಿರೀಟವನ್ನು ನೆಲಕ್ಕೆ ಹಾಕಿ ಅಪವಿತ್ರಮಾಡಿದ್ದೀ.

[40] ಅವನ ದೇಶದ ಮೇರೆಗಳನ್ನು ಕೆಡವಿ, ಕೋಟೆಗಳನ್ನು ಹಾಳುಮಾಡಿದ್ದೀ.

[41] ದಾರಿಗರೆಲ್ಲರೂ ಅವನನ್ನು ಸುಲಿಗೆ ಮಾಡುತ್ತಾರೆ; ಅವನು ನೆರೆಹೊರೆಯವರ ಪರಿಹಾಸ್ಯಕ್ಕೆ ಗುರಿಯಾಗಿದ್ದಾನೆ.

[42] ಅವನ ವಿರೋಧಿಗಳ ಹಸ್ತವನ್ನು ಉನ್ನತಪಡಿಸಿದ್ದೀ; ಅವನ ವೈರಿಗಳಿಗೆಲ್ಲಾ ಆನಂದವಾಗುವಂತೆ ಮಾಡಿದ್ದೀ.

[43] ಇದಲ್ಲದೆ ಅವನ ಕತ್ತಿಯನ್ನು ತಿರುಗಿಸಿಬಿಟ್ಟಿದ್ದೀ; ಅವನನ್ನು ಯುದ್ಧದಲ್ಲಿ ನಿಲ್ಲದಂತೆ ಮಾಡಿದ್ದೀ.

[44] ಅವನ ವೈಭವವನ್ನು ತಡೆದುಬಿಟ್ಟಿದ್ದೀ; ಅವನ ಸಿಂಹಾಸನವನ್ನು ನೆಲಕ್ಕುರುಳಿಸಿದ್ದೀ.

[45] ಅವನ ಯೌವನದ ದಿನಗಳನ್ನು ಬೇಗ ಮುಗಿಸಿ, ನಾಚಿಕೆಯು ಅವನನ್ನು ಕವಿಯುವಂತೆ ಮಾಡಿದ್ದಿ. ಸೆಲಾ

[46] ಯೆಹೋವನೇ, ಇನ್ನೆಷ್ಟರವರೆಗೆ ಮರೆಯಾಗಿರುವಿ? ನಿನ್ನ ಕೋಪಾಗ್ನಿಯು ನಮ್ಮ ಮೇಲೆ ಸದಾ ಉರಿಯುತ್ತಿರಬೇಕೋ?

[47] ನನ್ನ ಆಯುಷ್ಯವು ಎಷ್ಟು ಅಲ್ಪವೆಂದೂ, ಎಂಥಾ ವ್ಯರ್ಥ ಜೀವಿತಕ್ಕಾಗಿ ಮನುಷ್ಯರನ್ನು ನಿರ್ಮಿಸಿದ್ದಿ ಎಂದೂ ಜ್ಞಾಪಿಸಿಕೋ.

[48] ತಮ್ಮನ್ನು ಪಾತಾಳಕ್ಕೆ ತಪ್ಪಿಸಿಕೊಂಡು, ಮರಣಹೊಂದದೆ ಚಿರಂಜೀವಿಯಾಗಿರುವವರು ಯಾರು? ಸೆಲಾ

[49] ಕರ್ತನೇ, ನೀನು ನಿನ್ನ ಸತ್ಯತೆಯಲ್ಲಿ ಆಣೆಯಿಟ್ಟು, ದಾವೀದನಿಗೆ ವಾಗ್ದಾನಮಾಡಿ ನಡೆಸುತ್ತಿದ್ದ ಹಿಂದಿನ ಕೃಪಾಕಾರ್ಯಗಳು ಎಲ್ಲಿ?

[50] ಯೆಹೋವನೇ, ನಿನ್ನ ವೈರಿಗಳು ನಿಂದಿಸುತ್ತಾರೆ; ನಿನ್ನ ಅಭಿಷಿಕ್ತನನ್ನು ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡುತ್ತಾರೆ.

[51] ಕರ್ತನೇ, ನಿನ್ನ ಸೇವಕರಿಗಾಗುವ ಅಪವಾದವನ್ನೂ, ನಾನು ಎಲ್ಲಾ ಜನಾಂಗಗಳ ನಿಂದಾಭಾರವನ್ನು ಉಡಿಲಲ್ಲಿ ಕಟ್ಟಿರುವುದನ್ನೂ ಜ್ಞಾಪಿಸಿಕೋ.

[52] ಯೆಹೋವನಿಗೆ ಸದಾಕಾಲವೂ ಕೊಂಡಾಟವಾಗಲಿ. ಆಮೆನ್, ಆಮೆನ್.

ಕೀರ್ತನೆಗಳು — Chapters