Skip to content
Opens in a new window
Listen to this chapter • 1:51

[1] ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನಾನು ನುಡಿಸುತ್ತಾ ಹಾಡುವೆನು; ನನ್ನ ಆತ್ಮವೇ, ಎಚ್ಚೆತ್ತುಕೋ!

[2] ಸ್ವರಮಂಡಲವೇ, ಕಿನ್ನರಿಯೇ, ಎಚ್ಚರಗೊಳ್ಳಿರಿ. ಸಂಕೀರ್ತನೆಯಿಂದ ಉದಯವನ್ನು ಎದುರುಗೊಳ್ಳುವೆನು.

[3] ಯೆಹೋವನೇ, ಜನಾಂಗಗಳಲ್ಲಿ ನಿನ್ನನ್ನು ಸ್ತುತಿಸುವೆನು; ಸರ್ವದೇಶದವರೊಳಗೆ ನಿನ್ನನ್ನು ಕೊಂಡಾಡುವೆನು.

[4] ಏಕೆಂದರೆ ನಿನ್ನ ಕೃಪೆಯು ಆಕಾಶಕ್ಕಿಂತಲೂ ದೊಡ್ಡದಾಗಿದೆ, ನಿನ್ನ ಸತ್ಯತೆಯು ಮುಗಿಲನ್ನು ನಿಲುಕುತ್ತದೆ.

[5] ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ; ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.

[6] ನಿನ್ನ ಪ್ರಿಯರಾದ ನಮ್ಮ ಮೊರೆಯನ್ನು ಲಾಲಿಸಿ ರಕ್ಷಿಸು, ನಿನ್ನ ಭುಜಬಲದಿಂದ ನಮ್ಮನ್ನು ಜಯಗೊಳಿಸು.

[7] ದೇವರು ತನ್ನ ಪವಿತ್ರತ್ವವನ್ನು ಸಾಕ್ಷಿಮಾಡಿ ನುಡಿದಿದ್ದಾನೆ. ಜಯಘೋಷಮಾಡುವೆನು; ಶೆಖೆಮ್ ಪ್ರದೇಶವನ್ನು ಹಂಚುವೆನು. ಸುಖೋತ್ ಬಯಲನ್ನು ಅಳತೆಮಾಡಿ ಕೊಡುವೆನು.

[8] ಗಿಲ್ಯಾದ್ ಸೀಮೆಯೂ, ಮನಸ್ಸೆಯ ದೇಶವೂ ನನ್ನವು. ಎಫ್ರಾಯೀಮ್ ಗೋತ್ರವು ನನಗೆ ಶಿರಸ್ತ್ರಾಣ. ನನ್ನ ರಾಜದಂಡವು ಯೆಹೂದ ಕುಲವೇ.

[9] ಮೋವಾಬ್ ಪ್ರದೇಶವು ನನ್ನ ಸ್ನಾನಪಾತ್ರೆ; ಎದೋಮ್ ಸೀಮೆಯು ನನ್ನ ಕೆರಗಳನ್ನು ಬಿಡುವ ಸ್ಥಳ. ಫಿಲಿಷ್ಟಿಯದ ವಿಷಯವಾಗಿ ಜಯಘೋಷ ಮಾಡುವೆನು.

[10] ಕೋಟೆಕೊತ್ತಲುಗಳುಳ್ಳ ನಗರಕ್ಕೆ ನನ್ನನ್ನು ಕರೆದುಕೊಂಡು ಹೋಗುವವರು ಯಾರು? ಎದೋಮ್ ಪ್ರಾಂತ್ಯದೊಳಗೆ ನನ್ನನ್ನು ಸೇರಿಸುವವರು ಯಾರು?

[11] ದೇವರೇ, ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲವಲ್ಲಾ! ದೇವರೇ, ನಮ್ಮನ್ನು ಕೈಬಿಟ್ಟಿಯಾ?

[12] ನಮಗೆ ಕೈನೀಡಿ ಶತ್ರುಬಾಧೆಯಿಂದ ಪಾರುಮಾಡು. ಮನುಷ್ಯರ ಸಹಾಯವು ವ್ಯರ್ಥ.

[13] ದೇವರಿಂದ ಶೂರಕೃತ್ಯಗಳನ್ನು ನಡೆಸುವೆವು; ನಮ್ಮ ವೈರಿಗಳನ್ನು ತುಳಿದುಬಿಡುವವನು ಆತನೇ.

ಕೀರ್ತನೆಗಳು — Chapters