Skip to content
Opens in a new window
Listen to this chapter • 1:37

[1] ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಭೂಲೋಕವು ಸಂತೋಷಿಸಲಿ; ಸಮುದ್ರದ ತೀರಪ್ರದೇಶಗಳೆಲ್ಲಾ ಹರ್ಷಿಸಲಿ.

[2] ಮೋಡಗಳೂ, ಕಾರ್ಗತ್ತಲೆಯೂ ಆತನ ಸುತ್ತಲೂ ಇರುತ್ತವೆ; ಯೆಹೋವನು ನೀತಿ ಮತ್ತು ನ್ಯಾಯಗಳಿಂದ ಆಳುತ್ತಾನೆ.

[3] ಬೆಂಕಿಯು ಆತನ ಮುಂದೆ ಹೋಗಿ, ಸುತ್ತಲೂ ಆವರಿಸಿ ಆತನ ವೈರಿಗಳನ್ನು ದಹಿಸಿಬಿಡುತ್ತದೆ.

[4] ಆತನ ಮಿಂಚುಗಳು ಲೋಕವನ್ನು ಬೆಳಗಿಸಿದವು; ಭೂಮಿಯು ಅದನ್ನು ಕಂಡು ನಡುಗಿತು.

[5] ಸಾರ್ವಭೌಮನಾದ ಯೆಹೋವನ ಎದುರಿನಲ್ಲಿ ಪರ್ವತಗಳು ಮೇಣದಂತೆ ಕರಗಿಹೋದವು.

[6] ಗಗನಮಂಡಲವು ಆತನ ನೀತಿಯನ್ನು ಪ್ರಸಿದ್ಧಪಡಿಸಿತು; ಎಲ್ಲಾ ಜನರು ಆತನ ಮಹಿಮೆಯನ್ನು ಕಂಡರು.

[7] ವಿಗ್ರಹಗಳಲ್ಲಿ ಹಿಗ್ಗುವವರೂ, ಮೂರ್ತಿಪೂಜಕರೆಲ್ಲರೂ ನಾಚಿಕೆಗೆ ಒಳಪಡುವರು; ದೇವರುಗಳೆಂದು ಕರೆಯಲ್ಪಡುವವರೇ, ನೀವೆಲ್ಲರೂ ಆತನಿಗೆ ಅಡ್ಡಬೀಳಿರಿ.

[8] ಯೆಹೋವನೇ, ನೀನು ನ್ಯಾಯಸ್ಥಾಪಿಸಿದ ವಾರ್ತೆಯನ್ನು ಕೇಳಿ ಚೀಯೋನ್ ಪಟ್ಟಣವು ಹರ್ಷಿಸಿತು; ಯೆಹೂದ ಪ್ರಾಂತ್ಯದ ಊರುಗಳು ಸಂತೋಷಿಸಿದವು.

[9] ಯೆಹೋವನೇ, ನೀನು ಭೂಲೋಕದ ಸರ್ವಾಧಿಕಾರಿ; ಎಲ್ಲಾ ದೇವರುಗಳಲ್ಲಿ ಮಹೋನ್ನತನು ನೀನೇ.

[10] ಕೆಟ್ಟತನವನ್ನು ಹಗೆಮಾಡುವವರನ್ನು, ಯೆಹೋವನನ್ನು ಪ್ರೀತಿಸುತ್ತಾನೆ. ಆತನು ತನ್ನ ಭಕ್ತರ ಪ್ರಾಣಗಳನ್ನು ಕಾಯುವವನಾಗಿ, ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.

[11] ನೀತಿವಂತರಿಗೋಸ್ಕರ ಬೆಳಕು ಪ್ರಕಾಶಿಸುವುದು, ಯಥಾರ್ಥಹೃದಯವುಳ್ಳವರಿಗೆ ಸಂತೋಷವೂ ಕೊಡಲ್ಪಟ್ಟಿವೆ.

[12] ನೀತಿವಂತರೇ, ಯೆಹೋವನಲ್ಲಿ ಆನಂದಿಸಿರಿ; ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ.

ಕೀರ್ತನೆಗಳು — Chapters