[1] ದೇವರೇ, ನನ್ನ ಕೂಗನ್ನು ಕೇಳಿ ನನ್ನ ಪ್ರಾರ್ಥನೆಗೆ ಕಿವಿಗೊಡು.
[2] ನಾನು ಎದೆಗುಂದಿದವನಾಗಿ ಭೂಮಿಯ ಕಡೆಯ ಭಾಗದಿಂದ ನಿನಗೆ ಮೊರೆಯಿಡುತ್ತೇನೆ; ನಾನು ಹತ್ತಲಾರದ ಆಶ್ರಯಗಿರಿಯ ಮೇಲೆ ನನ್ನನ್ನು ಹತ್ತಿಸು.
[3] ನೀನು ನನಗೆ ಶರಣನೂ, ಶತ್ರುಗಳಿಂದ ತಪ್ಪಿಸುವ ಭದ್ರವಾದ ಬುರುಜು ಆಗಿದ್ದೀ.
[4] ನನಗೆ ನಿರಂತರವೂ ನಿನ್ನ ಗುಡಾರದಲ್ಲಿ ಬಿಡಾರವಾಗಲಿ; ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವಂತೆ ಅನುಗ್ರಹಿಸು. ಸೆಲಾ
[5] ದೇವರೇ, ನೀನು ನನ್ನ ಹರಕೆಗಳಿಗೆ ಲಕ್ಷ್ಯಕೊಟ್ಟಿದ್ದೀ; ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ಸಿಕ್ಕತಕ್ಕ ಬಾಧ್ಯತೆಯನ್ನು ನನಗೂ ದಯಪಾಲಿಸಿದ್ದೀ.
[6] ಅರಸನು ದೀರ್ಘಕಾಲ ಬಾಳುವಂತೆ ಅನುಗ್ರಹಿಸು; ಅವನ ಆಯಸ್ಸು ತಲತಲಾಂತರಗಳವರೆಗೆ ವೃದ್ಧಿಯಾಗಲಿ.
[7] ಅವನು ನಿನ್ನ ಸಾನ್ನಿಧ್ಯವನ್ನು ಪಡೆದು, ಸದಾಕಾಲವೂ ಸಿಂಹಾಸನಾರೂಢನಾಗಿರಲಿ; ನಿನ್ನ ಪ್ರೇಮ ಮತ್ತು ಸತ್ಯತೆಗಳು ಅವನನ್ನು ಕಾಯಲಿ.
[8] ಹೀಗಾದರೆ ನಾನು ಪ್ರತಿದಿನವೂ ನನ್ನ ಹರಕೆಗಳನ್ನು ಸಲ್ಲಿಸುವವನಾಗಿ, ನಿನ್ನ ನಾಮವನ್ನು ಸದಾ ಸ್ಮರಿಸಿ ಕೀರ್ತಿಸುತ್ತಿರುವೆನು.