Skip to content
Opens in a new window
Listen to this chapter • 2:01

[1] ದೇವರೇ, ಮ್ಲೇಚ್ಛರು ನಿನ್ನ ಸ್ವತ್ತನ್ನು ಹೊಕ್ಕು, ನಿನ್ನ ಪರಿಶುದ್ಧಾಲಯವನ್ನು ಹೊಲೆಮಾಡಿದರು; ಯೆರೂಸಲೇಮ್ ಪಟ್ಟಣವನ್ನು ಹಾಳು ದಿಬ್ಬಗಳನ್ನಾಗಿ ಮಾಡಿಬಿಟ್ಟರು.

[2] ಅವರು ನಿನ್ನ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೆ ಆಹಾರಮಾಡಿದರು; ನಿನ್ನ ಭಕ್ತರ ದೇಹವನ್ನು ಕಾಡುಮೃಗಗಳಿಗೆ ಹಾಕಿದರು.

[3] ಯೆರೂಸಲೇಮಿನ ಸುತ್ತಲೂ ಅವರ ರಕ್ತವನ್ನು ನೀರಿನ ಹಾಗೆ ಚೆಲ್ಲಿದರು; ಅವರನ್ನು ಹೂಣಿಡುವವರು ಯಾರೂ ಇರಲಿಲ್ಲ.

[4] ನಾವು ನಮ್ಮ ನೆರೆಹೊರೆಯ ಜನಾಂಗಗಳಿಗೆ ನಿಂದಾಸ್ಪದರಾದೆವು; ಸುತ್ತಣ ಜನರ ಪರಿಹಾಸ್ಯ ಮತ್ತು ತಿರಸ್ಕಾರಕ್ಕೆ ಗುರಿಯಾದೆವು.

[5] ಯೆಹೋವನೇ, ಇನ್ನೆಷ್ಟರವರೆಗೆ ಕೋಪವುಳ್ಳವನಾಗಿರುವಿ? ನಿನ್ನ ರೋಷಾಗ್ನಿಯು ಸದಾಕಾಲವೂ ಉರಿಯುತ್ತಲಿರಬೇಕೋ?

[6] ನಿನ್ನನ್ನು ಅರಿಯದ ಮ್ಲೇಚ್ಛರ ಮೇಲೆಯೂ, ನಿನ್ನ ನಾಮವನ್ನು ಉಚ್ಚರಿಸದ ರಾಜ್ಯಗಳ ಮೇಲೆಯೂ, ನಿನ್ನ ರೌದ್ರವನ್ನು ಸುರಿದುಬಿಡು.

[7] ಅವರು ಯಾಕೋಬ್ ವಂಶದವರನ್ನು ನುಂಗಿಬಿಟ್ಟು, ಅವರ ವಾಸಸ್ಥಳಗಳನ್ನು ಹಾಳುಮಾಡಿದ್ದಾರೆ.

[8] ಪೂರ್ವಿಕರ ಅಪರಾಧಗಳನ್ನು ನಮ್ಮ ಹಾನಿಗಾಗಿ ನೆನಪಿಸಿಕೊಳ್ಳಬೇಡ. ಬೇಗನೆ ನಿನ್ನ ಕನಿಕರವು ನಮ್ಮನ್ನು ಎದುರುಗೊಳ್ಳಲಿ; ಬಹಳವಾಗಿ ಕುಗ್ಗಿಹೋಗಿದ್ದೇವೆ.

[9] ನಮ್ಮನ್ನು ರಕ್ಷಿಸುವ ದೇವರೇ, ನಿನ್ನ ನಾಮದ ಘನತೆಗೋಸ್ಕರ ಸಹಾಯಮಾಡು; ನಿನ್ನ ಹೆಸರಿಗೆ ತಕ್ಕಂತೆ ರಕ್ಷಿಸಿ ನಮ್ಮ ಪಾಪಗಳನ್ನು ಅಳಿಸಿಬಿಡು.

[10] ಮ್ಲೇಚ್ಛರು, “ಅವರ ದೇವರು ಎಲ್ಲಿ?” ಎಂದು ಕೇಳುವುದೇಕೆ? ನಿನ್ನ ಸೇವಕರ ರಕ್ತವನ್ನು ಸುರಿಸಿದವರಿಗೆ ನಮ್ಮ ಮುಂದೆಯೇ ದಂಡನೆಯಾದದ್ದು, ಜನಾಂಗಗಳಿಗೆ ಗೊತ್ತಾಗಲಿ.

[11] ಸೆರೆಹೋದವರ ನರಳುವಿಕೆಯು ನಿನ್ನ ಲಕ್ಷ್ಯಕ್ಕೆ ಬರಲಿ; ಸಾಯಲಿರುವವರನ್ನು ನಿನ್ನ ಭುಜಮಹತ್ತಿನಿಂದ ಉಳಿಸು.

[12] ಸ್ವಾಮಿಯೇ, ನಿನ್ನನ್ನು ನಿಂದಿಸಿದ ಸುತ್ತಣ ಜನಾಂಗಗಳ ಉಡಿಲಲ್ಲಿ, ಏಳರಷ್ಟು ನಿಂದನೆ ತುಂಬಿರುವಂತೆ ಮಾಡು.

[13] ನಿನ್ನ ಪ್ರಜೆಯೂ, ನೀನು ಪಾಲಿಸುವ ಮಂದೆಯೂ ಆಗಿರುವ ನಾವಾದರೋ, ಸದಾ ನಿನ್ನನ್ನು ಸ್ತುತಿಸುವವರಾಗಿ, ಮುಂದಣ ಸಂತಾನದವರೆಲ್ಲರಿಗೂ ನಿನ್ನ ಮಹತ್ತನ್ನು ವರ್ಣಿಸುತ್ತಾ ಹೋಗುವೆವು.

ಕೀರ್ತನೆಗಳು — Chapters