[1] ದೇವರಿಗೆ ಮೊರೆಯಿಡುವೆನು, ಕೂಗಿ ಮೊರೆಯಿಡುವೆನು; ಆತನು ನನಗೆ ಕಿವಿಗೊಡುವನು.
[2] ಇಕ್ಕಟ್ಟಿನಲ್ಲಿ ಸ್ವಾಮಿಯನ್ನು ಕರೆದೆನು; ಬೇಸರವಿಲ್ಲದೆ ರಾತ್ರಿಯೆಲ್ಲಾ ಕೈಚಾಚಿಕೊಂಡೇ ಇದ್ದೆನು. ನನ್ನ ಮನಸ್ಸು ಶಾಂತಿಯನ್ನು ಹೊಂದಲೊಲ್ಲದೆ ಇತ್ತು.
[3] ನಾನು ವ್ಯಥೆಪಡುತ್ತಾ ದೇವರನ್ನು ಸ್ಮರಿಸುವೆನು; ಮನಗುಂದಿದವನಾಗಿಯೇ ಹಂಬಲಿಸುವೆನು.
[4] ನಾನು ರೆಪ್ಪೆಗಳನ್ನು ಮುಚ್ಚದಂತೆ ನೀನು ಮಾಡಿದಿ. ತಳಮಳಗೊಂಡು ಮಾತನಾಡಲಾರದೆ ಇದ್ದೆನು.
[5] ಹಳೆಯ ದಿನಗಳನ್ನೂ, ಪುರಾತನ ವರ್ಷಗಳನ್ನೂ ಜ್ಞಾಪಕಮಾಡಿಕೊಂಡೆನು.
[6] ನಾನು ರಾತ್ರಿಯಲ್ಲಿ ಮಾಡುತ್ತಿದ್ದ ಗಾನವನ್ನು ನೆನಪಿಸಿಕೊಳ್ಳುವೆನು, ನನ್ನ ಆಂತರ್ಯದಲ್ಲಿ ಮಾತನಾಡಿಕೊಳ್ಳುವೆನು ಅಂದುಕೊಂಡು ನನ್ನ ಮನಸ್ಸಿನಲ್ಲಿ,
[7] “ಕರ್ತನು ಸದಾಕಾಲಕ್ಕೂ ಬಿಟ್ಟೇಬಿಡುವನೋ? ಆತನು ಪುನಃ ಪ್ರಸನ್ನನಾಗುವುದಿಲ್ಲವೋ?
[8] ಆತನ ಕೃಪಾವಾತ್ಸಲ್ಯವು ನಿಂತೇ ಹೋಯಿತೋ? ಆತನ ವಾಗ್ದಾನವು ಎಂದೆಂದಿಗೂ ಬಿದ್ದೇ ಹೋಯಿತೋ?
[9] ದೇವರು ದಯೆ ತೋರಿಸಲಿಕ್ಕೆ ಮರೆತುಬಿಟ್ಟನೋ? ಕೋಪದಿಂದ ತನ್ನ ಕರಳುಗಳನ್ನು ಬಿಗಿಹಿಡಿದಿದ್ದಾನೋ?” ಎಂದು ಅಂದುಕೊಂಡೆನು ಸೆಲಾ
[10] ಪುನಃ ನಾನು, “ಹೀಗೆ ನೆನಸುವುದು ನನ್ನ ಬಲಹೀನತೆಯೇ. ಪರಾತ್ಪರನಾದ ದೇವರ ಭುಜಬಲವು ಪ್ರಕಟವಾದ ವರ್ಷಗಳನ್ನು ಜ್ಞಾಪಿಸಿಕೊಳ್ಳುವೆನು.
[11] ಯೆಹೋವನ ಕೃತ್ಯಗಳನ್ನು ವರ್ಣಿಸುವೆನು; ಪೂರ್ವದಿಂದ ನೀನು ನಡೆಸಿದ ಅದ್ಭುತಗಳನ್ನು ನೆನಪು ಮಾಡಿಕೊಳ್ಳುವೆನು.
[12] ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು” ಅಂದುಕೊಂಡೆನು.
[13] ದೇವರೇ, ನಿನ್ನ ಮಾರ್ಗವು ಪರಿಶುದ್ಧವಾದುದು. ನಮ್ಮ ದೇವರಂತೆ ಮಹತ್ವವುಳ್ಳ ದೇವರು ಯಾರು?
[14] ಅದ್ಭುತಗಳನ್ನು ನಡೆಸುವ ದೇವರು ನೀನೇ; ಜನಾಂಗಗಳಲ್ಲಿ ಪರಾಕ್ರಮವನ್ನು ತೋರ್ಪಡಿಸಿದಿ.
[15] ಯಾಕೋಬ ಮತ್ತು ಯೋಸೇಫರ ವಂಶದವರಾದ ನಿನ್ನ ಪ್ರಜೆಯನ್ನು, ಭುಜಬಲದಿಂದ ಬಿಡುಗಡೆಮಾಡಿದಿ. ಸೆಲಾ
[16] ದೇವರೇ, ಜಲರಾಶಿಗಳು ನಿನ್ನನ್ನು ಕಂಡವು; ಕಾಣುತ್ತಲೇ ತಳಮಳಗೊಂಡು ತಳದವರೆಗೂ ಅಲ್ಲಕಲ್ಲೋಲವಾದವು.
[17] ಮೇಘಮಂಡಲವು ಮಳೆಗರೆಯಿತು; ಆಕಾಶವು ಗರ್ಜಿಸಿತು; ನಿನ್ನ ಬಾಣಗಳು ಎಲ್ಲಾ ಕಡೆಯೂ ಹಾರಿದವು.
[18] ಬಿರುಗಾಳಿಯಲ್ಲಿ ನಿನ್ನ ಗುಡುಗು ಕೇಳಿಸಿತು; ಮಿಂಚುಗಳು ಭೂಮಂಡಲವನ್ನು ಬೆಳಗಿಸಿದವು; ಭೂಮಿಯು ಅಲ್ಲಾಡಿ ಕಂಪಿಸಿತು.
[19] ನೀನು ಸಮುದ್ರದಲ್ಲಿ ಮಾರ್ಗಮಾಡಿದಿ; ಮಹಾಜಲರಾಶಿಗಳನ್ನು ದಾಟಿದಿ; ನಿನ್ನ ಹೆಜ್ಜೆ ಗುರುತು ಕಾಣಲಿಲ್ಲ.
[20] ಕುರುಬನು ಕುರಿಹಿಂಡನ್ನು ಹೇಗೋ, ಹಾಗೆಯೇ ನೀನು ಮೋಶೆ ಮತ್ತು ಆರೋನರ ಮುಖಾಂತರ, ನಿನ್ನ ಪ್ರಜೆಯನ್ನು ಮುನ್ನಡೆಸಿದಿ.