Skip to content
Opens in a new window
Listen to this chapter • 1:03

[1] ಯೆಹೋವನಿಗೆ ಸ್ತೋತ್ರ! ಯೆಹೋವನಿಗೆ ನೂತನ ಕೀರ್ತನೆಯನ್ನು ಹಾಡಿರಿ; ಭಕ್ತರ ಸಭೆಯಲ್ಲಿ ಆತನನ್ನು ಸ್ತುತಿಸಿರಿ.

[2] ಇಸ್ರಾಯೇಲರು ತಮ್ಮ ಸೃಷ್ಟಿಕರ್ತನಲ್ಲಿ ಹೆಮ್ಮೆಪಡಲಿ; ಚೀಯೋನಿನವರು ತಮ್ಮ ರಾಜನಲ್ಲಿ ಹರ್ಷಿಸಲಿ.

[3] ಕುಣಿಯುತ್ತಾ ಆತನ ನಾಮವನ್ನು ಕೀರ್ತಿಸಲಿ; ದಮ್ಮಡಿ, ಕಿನ್ನರಿಗಳಿಂದ ಆತನನ್ನು ಭಜಿಸಲಿ.

[4] ಯೆಹೋವನು ತನ್ನ ಪ್ರಜೆಗೆ ಪ್ರಸನ್ನನಾದನು; ದೀನರನ್ನು ರಕ್ಷಣೆಯಿಂದ ಭೂಷಿಸುತ್ತಾನೆ.

[5] ಭಕ್ತರು ತಮಗುಂಟಾದ ಮಹಿಮೆಯಲ್ಲಿ ಹಿಗ್ಗಲಿ; ಹಾಸಿಗೆಯ ಮೇಲಿರುವಾಗಲೂ ಉತ್ಸಾಹಧ್ವನಿ ಮಾಡಲಿ.

[6] ಅವರ ಬಾಯಲ್ಲಿ ಯೆಹೋವನ ಸ್ತೋತ್ರವೂ, ಕೈಯಲ್ಲಿ ಇಬ್ಬಾಯಿಕತ್ತಿಯೂ ಇರಲಿ.

[7] ಅವರು ಜನಾಂಗಗಳಿಗೆ ಮುಯ್ಯಿತೀರಿಸುವರು; ಅನ್ಯಜನಗಳನ್ನು ದಂಡಿಸುವರು;

[8] ಅವರ ರಾಜರನ್ನು ಸಂಕೋಲೆಯಿಂದ ಬಂಧಿಸುವರು; ಪ್ರಭುಗಳಿಗೆ ಕಬ್ಬಿಣದ ಬೇಡಿಗಳನ್ನು ಹಾಕುವರು.

[9] ಲಿಖಿತದಂತೆ ಅವರಿಗೆ ಶಿಕ್ಷೆಯನ್ನು ವಿಧಿಸುವರು; ಇದು ಆತನ ಭಕ್ತರೆಲ್ಲರಿಗೆ ಗೌರವವಾಗಿರುವುದು. ಯೆಹೋವನಿಗೆ ಸ್ತೋತ್ರ.

ಕೀರ್ತನೆಗಳು — Chapters