[1] ಯೆಹೋವನನ್ನು ಪ್ರೀತಿಸುತ್ತೇನೆ; ಆತನು ನನ್ನ ಮೊರೆಯನ್ನು ಕೇಳುವನು.
[2] ಆತನು ನನ್ನ ವಿಜ್ಞಾಪನೆಗೆ ಕಿವಿಗೊಟ್ಟಿದ್ದಾನೆ; ಜೀವದಿಂದ ಇರುವವರೆಗೂ ಆತನನ್ನೇ ಪ್ರಾರ್ಥಿಸುವೆನು.
[3] ಮರಣಪಾಶಗಳು ನನ್ನನ್ನು ಸುತ್ತಿಕೊಂಡಿದ್ದವು; ಪಾತಾಳ ವೇದನೆಗಳು ನನ್ನನ್ನು ಹಿಡಿದಿದ್ದವು. ಚಿಂತೆಯಲ್ಲಿಯೂ, ಇಕ್ಕಟ್ಟಿನಲ್ಲಿಯೂ ಬಿದ್ದುಹೋಗಿದ್ದೆನು.
[4] ಆಗ ಯೆಹೋವನ ಹೆಸರನ್ನು ಹೇಳಿ, “ಯೆಹೋವನೇ, ಕೃಪೆಮಾಡಿ ನನ್ನ ಪ್ರಾಣವನ್ನು ರಕ್ಷಿಸು” ಎಂದು ಪ್ರಾರ್ಥಿಸಿದೆನು.
[5] ಯೆಹೋವನು ಕೃಪಾಳುವೂ, ನೀತಿವಂತನೂ ಆಗಿದ್ದಾನೆ; ನಮ್ಮ ದೇವರು ಕನಿಕರವುಳ್ಳವನು.
[6] ಯೆಹೋವನು ಸರಳ ಮನಸ್ಸುಳ್ಳವರನ್ನು ಕಾಪಾಡುವನು; ಕುಗ್ಗಿದವನಾದ ನನ್ನನ್ನು ರಕ್ಷಿಸಿದನು.
[7] ನನ್ನ ಮನವೇ, ನಿನ್ನ ವಿಶ್ರಾಂತಿಯ ನೆಲೆಗೆ ತಿರುಗು. ಯೆಹೋವನು ನಿನಗೆ ಮಹೋಪಕಾರಗಳನ್ನು ಮಾಡಿದ್ದಾನಲ್ಲಾ.
[8] ಯೆಹೋವನೇ, ನಾನು ಜೀವಲೋಕದಲ್ಲಿದ್ದು ನಿನಗೆ ನೀತಿಯುಳ್ಳವನಾಗಿ ನಡೆದುಕೊಳ್ಳಬೇಕೆಂದು,
[9] ನೀನು ನನ್ನ ಪ್ರಾಣವನ್ನು ಮರಣದಿಂದ ತಪ್ಪಿಸಿ, ಕಣ್ಣೀರನ್ನು ನಿಲ್ಲಿಸಿ, ನನ್ನ ಪಾದಗಳನ್ನು ಎಡವದಂತೆ ಕಾದಿದ್ದೀ.
[10] “ನಾನು ಬಹಳವಾಗಿ ಕುಗ್ಗಿಹೋದೆ” ಎಂದು ಹೇಳಿದಾಗಲೂ,
[11] “ಮನುಷ್ಯರೆಲ್ಲಾ ಸುಳ್ಳುಗಾರರು” ಎಂದು ಭ್ರಾಂತಿಯಿಂದ ಹೇಳಿದಾಗಲೂ, ಭರವಸವುಳ್ಳವನಾಗಿಯೇ ಇದ್ದೆನು.
[12] ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?
[13] ರಕ್ಷಣಾಪಾತ್ರೆಯನ್ನು ತೆಗೆದುಕೊಂಡು, ಯೆಹೋವನ ನಾಮವನ್ನು ಪ್ರಖ್ಯಾತಿಪಡಿಸುವೆನು.
[14] ಯೆಹೋವನಿಗೆ ಹೊತ್ತ ಹರಕೆಗಳನ್ನು, ಆತನ ಎಲ್ಲಾ ಜನರ ಮುಂದೆಯೇ ಸಲ್ಲಿಸುವೆನು.
[15] ಯೆಹೋವನು ತನ್ನ ಭಕ್ತರ ಮರಣವನ್ನು ಅಲ್ಪವೆಂದು ಎಣಿಸುವುದಿಲ್ಲ.
[16] ಯೆಹೋವನೇ, ಕರುಣಿಸು, ನಾನು ನಿನ್ನ ಸೇವಕನು; ನಿನ್ನ ದಾಸಿಯ ಮಗನೂ, ನಿನ್ನ ದಾಸನೂ ಆಗಿದ್ದೇನೆ. ನನ್ನ ಬಂಧನಗಳನ್ನು ಬಿಚ್ಚಿಬಿಟ್ಟಿದ್ದಿ.
[17] ನಾನು ನಿನಗೆ ಕೃತಜ್ಞತಾ ಯಜ್ಞಗಳನ್ನು ಸಮರ್ಪಿಸುವೆನು; ಯೆಹೋವನ ನಾಮವನ್ನು ಪ್ರಖ್ಯಾತಿಪಡಿಸುವೆನು.
[18] ಯೆರೂಸಲೇಮೇ, ನಿನ್ನ ಮಧ್ಯದಲ್ಲಿ, ಯೆಹೋವನ ಮಂದಿರದ ಅಂಗಳಗಳಲ್ಲಿ,
[19] ಆತನಿಗೆ ಹೊತ್ತ ಹರಕೆಗಳನ್ನು, ಆತನ ಎಲ್ಲಾ ಜನರ ಮುಂದೆಯೇ ಸಲ್ಲಿಸುವೆನು. ಯೆಹೋವನಿಗೆ ಸ್ತೋತ್ರ!