Skip to content
Opens in a new window
Listen to this chapter • 2:17

[1] ಕರ್ತನೇ, ತಲತಲಾಂತರಗಳಿಂದಲೂ ನಮ್ಮ ಆಶ್ರಯಸ್ಥಾನವು ನೀನೇ.

[2] ಬೆಟ್ಟಗಳು ಉಂಟಾಗುವುದಕ್ಕಿಂತ ಮೊದಲೇ, ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವುದಕ್ಕಿಂತ ಮೊದಲೇ, ಯುಗಯುಗಾಂತರಗಳಲ್ಲಿಯೂ ನೀನೇ ದೇವರು.

[3] “ಮನುಷ್ಯರೇ, ಸಾಯಿರಿ” ಎಂದು ಆಜ್ಞಾಪಿಸಿ, ಅವರನ್ನು ಪುನಃ ಮಣ್ಣಿಗೆ ಸೇರಿಸುತ್ತೀ.

[4] ಸಾವಿರ ವರ್ಷಗಳು ನಿನ್ನ ದೃಷ್ಟಿಯಲ್ಲಿ ಗತಿಸಿಹೋದ ನಿನ್ನೆಯ ದಿನದಂತೆಯೂ, ರಾತ್ರಿಯ ಜಾವದಂತೆಯೂ ಇವೆ.

[5] ನೀನು ಮನುಷ್ಯರನ್ನು ಪ್ರವಾಹದಿಂದ ಬಡಿದುಕೊಂಡು ಹೋಗುತ್ತೀ; ಅವರು ನಿದ್ರೆಗೆ ಸಮಾನರೇ. ಅವರು ಹೊತ್ತಾರೆಯಲ್ಲಿ ಚಿಗುರುವ ಹುಲ್ಲಿನಂತಿದ್ದಾರೆ.

[6] ಅದು ಮುಂಜಾನೆಯಲ್ಲಿ ಬೆಳೆದು ಹೂಬಿಡುತ್ತದೆ; ಸಂಜೆಯಲ್ಲಿ ಕೊಯ್ಯಲ್ಪಟ್ಟು ಒಣಗಿಹೋಗುತ್ತದೆ.

[7] ನಿನ್ನ ಕೋಪದಿಂದ ನಾವು ಇಲ್ಲವಾದೆವು; ನಿನ್ನ ರೌದ್ರದಿಂದ ತಲ್ಲಣಗೊಂಡೆವು.

[8] ನಮ್ಮ ದ್ರೋಹಗಳನ್ನು ನಿನ್ನ ಮುಂದೆಯೂ, ನಮ್ಮ ಗುಪ್ತಪಾಪಗಳನ್ನು ನಿನ್ನ ತೇಜೋದೃಷ್ಟಿಯಲ್ಲಿಯೂ ಇಟ್ಟುಕೊಂಡಿದ್ದಿ.

[9] ನಿನ್ನ ರೋಷದಿಂದ ನಮ್ಮ ಕಾಲವೆಲ್ಲಾ ಕಳೆದು ಹೋಯಿತು; ನಮ್ಮ ವರ್ಷಗಳು ನಿಟ್ಟುಸಿರಿನಂತೆ ತೀರಿಹೋದವು.

[10] ನಮ್ಮ ಆಯುಷ್ಕಾಲವು ಎಪ್ಪತ್ತು ವರ್ಷ, ಬಲ ಹೆಚ್ಚಿದರೆ ಎಂಭತ್ತು; ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.

[11] ನಿನ್ನ ಕೋಪದ ಬಲವನ್ನೂ, ಭಯಭಕ್ತಿಗೆ ಕಾರಣವಾಗಿರತಕ್ಕ ನಿನ್ನ ರೌದ್ರವನ್ನೂ ಗ್ರಹಿಸುವವರಾರು?

[12] ನಮ್ಮ ದಿನಗಳು ಕೊಂಚವೇ ಎಂದು ಎಣಿಸಿಕೊಳ್ಳುವ ಹಾಗೆ ನಮಗೆ ಕಲಿಸು; ಆಗ ಜ್ಞಾನದ ಹೃದಯವನ್ನು ಪಡೆದುಕೊಳ್ಳುವೆವು.

[13] ಯೆಹೋವನೇ, ಮನಸ್ಸನ್ನು ಬೇರೆ ಮಾಡಿಕೋ; ಎಷ್ಟರವರೆಗೆ ಕೋಪ ಮಾಡುವಿ? ನಿನ್ನ ಸೇವಕರ ಮೇಲೆ ಕರುಣೆಯಿರಲಿ.

[14] ಮುಂಜಾನೆಯಲ್ಲಿ ನಿನ್ನ ಕೃಪೆಯಿಂದ ನಮ್ಮನ್ನು ಸಂತೃಪ್ತಿಪಡಿಸು; ಆಗ ಜೀವಮಾನದಲ್ಲೆಲ್ಲಾ ಉಲ್ಲಾಸಿಸಿ ಹರ್ಷಿಸುವೆವು.

[15] ನೀನು ನಮ್ಮನ್ನು ಕುಗ್ಗಿಸಿದ ದಿನಗಳಿಗೂ, ನಾವು ಕೇಡನ್ನು ಅನುಭವಿಸಿದ ವರ್ಷಗಳಿಗೂ ತಕ್ಕಂತೆ ನಮ್ಮನ್ನು ಸಂತೋಷಪಡಿಸು.

[16] ನಿನ್ನ ಸೇವಕರಿಗೆ ನಿನ್ನ ರಕ್ಷಣಾ ಕಾರ್ಯವೂ, ಅವರ ಮಕ್ಕಳಿಗೋಸ್ಕರ ನಿನ್ನ ಮಹತ್ತೂ ಪ್ರಕಟವಾಗಲಿ.

[17] ನಮ್ಮ ಯೆಹೋವ ದೇವರ ಪ್ರಸನ್ನತೆಯು ನಮ್ಮ ಮೇಲೆ ಇರಲಿ. ನಾವು ಕೈ ಹಾಕಿದ ಕೆಲಸವನ್ನು ನಮಗೆ ಸಫಲಪಡಿಸು; ನಾವು ಕೈಹಾಕಿದ ಕೆಲಸವನ್ನು ಸಫಲ ವಾಗುವಂತೆ ಮಾಡು.

ಕೀರ್ತನೆಗಳು — Chapters