Skip to content
Opens in a new window
Listen to this chapter • 3:12

[1] ದೇವರೇ, ಪೂರ್ವಕಾಲದಲ್ಲಿ ನಮ್ಮ ಪೂರ್ವಿಕರ ದಿನದಲ್ಲಿ, ನೀನು ನಡೆಸಿದ ಮಹತ್ಕಾರ್ಯಗಳ ವಿಷಯವನ್ನು ಕೇಳಿದ್ದೇವೆ; ಅವರೇ ನಮಗೆ ತಿಳಿಸಿದರು.

[2] ನಿನ್ನ ಹಸ್ತವೇ ಈ ದೇಶದಲ್ಲಿದ್ದ ಜನಾಂಗಗಳನ್ನು ಹೊರಡಿಸಿ, ನಮ್ಮ ಪೂರ್ವಿಕರನ್ನೇ ನೆಲೆಗೊಳಿಸಿದೆ; ನೀನು ಆ ಅನ್ಯಜನಗಳನ್ನು ತೆಗೆದುಬಿಟ್ಟು ನಮ್ಮವರನ್ನು ಹಬ್ಬಿಸಿದಿ.

[3] ನಮ್ಮ ಪೂರ್ವಿಕರಿಗೆ ಕತ್ತಿಯೇ ಈ ದೇಶವನ್ನು ಸ್ವಾಧೀನಮಾಡಿಕೊಡಲಿಲ್ಲ; ನಿನ್ನ ಭುಜಬಲ, ಬಲಗೈ ಮತ್ತು ಪ್ರಸನ್ನತೆ ಅವರಿಗೆ ಜಯವನ್ನು ಉಂಟುಮಾಡಿದವು; ನಿನ್ನ ಸಹಾಯ ಸದಾಕಾಲ ಅವರಿಗಿತ್ತಲ್ಲಾ.

[4] ದೇವರೇ, ನೀನೇ ನನ್ನ ಅರಸನು; ಯಾಕೋಬನಿಗೆ ಜಯವನ್ನು ಆಜ್ಞಾಪಿಸಿದಾತನು.

[5] ನಿನ್ನ ಸಹಾಯದಿಂದಲೇ ವೈರಿಗಳನ್ನು ಕೆಡವಿಬಿಡುವೆವು; ನಿನ್ನ ನಾಮಧೇಯದ ಬಲದಿಂದ ಎದುರಾಳಿಗಳನ್ನು ತುಳಿದುಬಿಡುವೆವು.

[6] ನಾನು ನನ್ನ ಬಿಲ್ಲಿನಲ್ಲಿ ಭರವಸವಿಡುವುದಿಲ್ಲ; ಇಲ್ಲವೇ ನನ್ನ ಕತ್ತಿಯು ನನ್ನನ್ನು ರಕ್ಷಿಸಲಾರದು.

[7] ಹಿಂಸಕರಿಂದ ಬಿಡಿಸಿದವನು ನೀನೇ; ನಮ್ಮನ್ನು ದ್ವೇಷಿಸುವವರನ್ನು ನಾಚಿಕೆಪಡಿಸಿದಾತನು ನೀನೇ.

[8] ದೇವರೇ, ನಿನ್ನಲ್ಲಿಯೇ ಯಾವಾಗಲೂ ಹಿಗ್ಗುತ್ತಿದ್ದೇವೆ; ನಿನ್ನ ನಾಮವನ್ನೇ ಸದಾಕಾಲವೂ ಕೀರ್ತಿಸುವೆವು.

[9] ಆದರೆ ಈಗ ನೀನು ನಮ್ಮನು ಕೈಬಿಟ್ಟಿದ್ದೀ, ಅವಮಾನಪಡಿಸಿದಿ; ನಮ್ಮ ಸೈನ್ಯಗಳ ಸಂಗಡ ನೀನು ಹೋಗಲಿಲ್ಲ.

[10] ನಾವು ಹಗೆಗಳಿಗೆ ಬೆನ್ನುಕೊಟ್ಟು ಓಡಿಹೋಗುವಂತೆ ಮಾಡಿದಿ; ನಮ್ಮ ವೈರಿಗಳು ತಮಗೋಸ್ಕರ ಬೇಕಾದ ಹಾಗೆ ಕೊಳ್ಳೆಹೊಡೆಯುತ್ತಾರೆ.

[11] ತಿನ್ನತಕ್ಕ ಕುರಿಗಳನ್ನೋ ಎಂಬಂತೆ ನಮ್ಮನ್ನು ವಂಚಕರಿಗೆ ಒಪ್ಪಿಸಿದಿ; ಜನಾಂಗಗಳಲ್ಲಿ ನಮ್ಮನ್ನು ಚದರಿಸಿದ್ದೀ.

[12] ನೀನು ಯಾವ ಲಾಭವನ್ನೂ ಹೊಂದದೆ ನಿಷ್ಪ್ರಯೋಜನವಾಗಿ, ನಿನ್ನ ಪ್ರಜೆಯನ್ನು ಮಾರಿಬಿಟ್ಟಿದ್ದೀ.

[13] ನಮ್ಮನ್ನು ನೆರೆಯವರ ನಿಂದೆಗೆ ಗುರಿಮಾಡಿದಿ; ಸುತ್ತಣ ಜನಾಂಗಗಳವರ ಪರಿಹಾಸ್ಯಕ್ಕೂ, ಕುಚೋದ್ಯಕ್ಕೂ ಒಳಪಡಿಸಿದಿ.

[14] ನಮ್ಮನ್ನು ಅನ್ಯದೇಶೀಯರ ಗಾದೆಗೆ ಆಸ್ಪದಮಾಡಿದಿ; ಅವರು ನಮ್ಮನ್ನು ನೋಡಿ ತಲೆಯಾಡಿಸುತ್ತಾರೆ.

[15] ದೂಷಕರ ನಿಂದಾವಚನಗಳಿಂದಲೂ, ಮುಯ್ಯಿತೀರಿಸುವ ವೈರಿಗಳ ದೃಷ್ಟಿಯಿಂದಲೂ,

[16] ನನಗೆ ಉಂಟಾಗಿರುವ ಅವಮಾನವು ಯಾವಾಗಲೂ ನನ್ನ ಮುಂದೆ ಇದೆ; ನಾಚಿಕೆಯು ನನ್ನ ಮುಖವನ್ನು ಮುಚ್ಚಿದೆ.

[17] ನಾವು ನಿನ್ನನ್ನು ಮರೆಯದೆಯೂ, ನಿನ್ನ ನಿಬಂಧನೆಗಳನ್ನು ಮೀರದೆಯೂ ಇದ್ದರೂ; ಇದೆಲ್ಲಾ ನಮ್ಮ ಮೇಲೆ ಬಂದಿದೆಯಲ್ಲಾ!

[18] ನಮ್ಮ ಹೃದಯವು ಹಿಂದಿರುಗಲಿಲ್ಲ; ನಮ್ಮ ಹೆಜ್ಜೆಗಳು ನಿನ್ನ ದಾರಿಯಿಂದ ತೊಲಗಲಿಲ್ಲ.

[19] ಆದರೂ ನೀನು ನಮ್ಮನ್ನು ಅಪಜಯಪಡಿಸಿ ನರಿಗಳಿರುವ ಕಾಡನ್ನಾಗಿ ಮಾಡಿದ್ದೇಕೆ? ಮರಣದ ನೆರಳು ನಮ್ಮನ್ನು ಕವಿಯುವಂತೆ ಮಾಡಿದ್ದೇಕೆ?

[20] ನಾವು ನಮ್ಮ ದೇವರ ಹೆಸರನ್ನು ಮರೆತು, ಅನ್ಯದೇವತೆಗಳಿಗೆ ಕೈಯೆತ್ತಿದ್ದರೆ,

[21] ಹೃದಯದ ರಹಸ್ಯಗಳನ್ನು ಬಲ್ಲವನಾದ ದೇವರು, ವಿಚಾರಿಸುತ್ತಿರಲಿಲ್ಲವೋ?

[22] ದೇವರೇ, ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ಜನರು ನಮ್ಮನ್ನು ಕೊಯ್ಗುರಿಗಳಂತೆ ಎಣಿಸಿದ್ದಾರೆ.

[23] ಕರ್ತನೇ, ಏಕೆ ನಿದ್ರಿಸುತ್ತೀ? ಎಚ್ಚರವಾಗು; ಏಳು, ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಡಬೇಡ.

[24] ಏಕೆ ವಿಮುಖನಾಗಿದ್ದಿ? ನಮಗಿರುವ ಬಾಧೆಗಳನ್ನೂ, ಹಿಂಸೆಗಳನ್ನೂ ಏಕೆ ಲಕ್ಷಿಸುವುದಿಲ್ಲ?

[25] ನಮ್ಮ ಪ್ರಾಣವು ಧೂಳಿನವರೆಗೂ ಬಗ್ಗಿಹೋಗಿದೆ; ನಮ್ಮ ಶರೀರವು ನೆಲಕ್ಕೆ ಅಂಟಿಕೊಂಡಿದೆ.

[26] ಎದ್ದು ಬಂದು ಸಹಾಯಮಾಡು; ನಿನ್ನ ಒಡಂಬಡಿಕೆಯ ನಂಬಿಗಸ್ತಿಕೆಗಾಗಿ ನಮ್ಮನ್ನು ವಿಮೋಚಿಸು.

ಕೀರ್ತನೆಗಳು — Chapters